ಮಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್ ರೋಷನ್ ಸಲ್ಡಾನಾ ಎಂಬಾತನ ಐಷಾರಾಮಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಅನೇಕ ರಹಸ್ಯ ಕೋಣೆಗಳು, ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ಮಂಗಳೂರು (ಜು.19): ಕುಖ್ಯಾತ ಡ್ರಗ್ ಪೆಡ್ಲರ್‌ಗಳು, ಡಾನ್‌ಗಳ ಮನೆಗಳನ್ನೂ ಮೀರಿಸುವಂಥ ಮನೆಯನ್ನು ಕಂಡು ಪೊಲೀಸರು ಕಂಗಾಲಾಗಿದ್ದಾರೆ. ಈ ಮನೆಯಲ್ಲಿ ಏನುಂಟು, ಏನಿಲ್ಲ ಅಂತಿಲ್ಲ. ತಪ್ಪಿಸಿಕೊಳ್ಳಲು ಇರುವ ಜಾಗಗಳು, ಅಲ್ಲಿನ ಐಷಾರಾಮಿತನ ಯಾವುದೇ ಬಾಲಿವುಡ್‌ನ ಪ್ರಖ್ಯಾತ ನಟರ ಮನೆಗಿಂತಲೂ ಮಿಗಿಲಾಗಿದೆ.
ಬಜಾಲ್‌ನ ಬೊಳ್ಳಗುಡ್ಡದ 43 ವರ್ಷದ ರೋಷನ್ ಸಲ್ಡಾನಾ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದು, ಆತನ ಐಷಾರಾಮಿ ಭವನದ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಇದು ಐಷಾರಾಮಿ ಭವನ ಮಾತ್ರವಲ್ಲ ಆತನ ಇಡೀ ವಂಚನೆಯ ಕೋಟೆ ಎಂದು ಪೊಲೀಸರು ಹೇಳಿದ್ದಾರೆ. ದೇಶದಾದ್ಯಂತ ವಂಚನೆಯ ಸಂಚು ರೂಪಿಸಿದ ಆಧಾರದ ಮೇಲೆ ರೋಷನ್ ಸಲ್ಡಾನಾನನ್ನು ಪೊಲೀಸರು ಬಂಧಿಸಿದ್ದಾರೆ.
ಬೃಹತ್ ಸಾಲಗಳು ನೀಡುವ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುವ ಉನ್ನತ ಉದ್ಯಮಿಯಂತೆ ನಟಿಸುತ್ತಿದ್ದಸಲ್ಡಾನಾ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಆರೋಪ ಹೊರಿಸಲಾಗಿದೆ. ಗುರುವಾರ ಮಧ್ಯರಾತ್ರಿ ಪೊಲೀಸರು ಆತನನ್ನು ಬಂಧಿಸಿದಾಗ, ಆತನ ಮನೆಯೊಳಗಿನ ಗುಪ್ತ ಕೋಣೆಯಲ್ಲಿ ಅಡಗಿಕೊಂಡಿರುವುದು ಕಂಡುಬಂದಿದೆ.

"ಕಳೆದ 3-4 ತಿಂಗಳಲ್ಲಿ 40 ಕೋಟಿ ರೂಪಾಯಿಗಳ ವಹಿವಾಟು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹಿಂದಿನ ವಹಿವಾಟುಗಳನ್ನು ಸಹ ಪರಿಶೀಲಿಸಲಾಗುತ್ತಿದೆ" ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಹೆಚ್ಚಿನ ಮೌಲ್ಯದ ಸಾಲದ ಭರವಸೆ ನೀಡಿ ಆಕರ್ಷಿಸುತ್ತಿದ್ದ.
ತಮಗೆ ಉನ್ನತ ಹಣಕಾಸು ಸಂಸ್ಥೆಗಳೊಂದಿಗೆ ಸಂಪರ್ಕ ಇದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಸಲ್ಡಾನಾ, 600 ಕೋಟಿ ರೂ.ಗಳವರೆಗಿನ ವ್ಯವಹಾರ ಸಾಲವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಹೆಚ್ಚಿನ ಮೌಲ್ಯದ ಸಾಲಗಳು ಮತ್ತು ಲಾಭದಾಯಕ ಆಸ್ತಿ ಹೂಡಿಕೆಗಳ ಆಮಿಷವನ್ನು ಈ ವೇಳೆ ಉದ್ಯಮಿಗಳಿಗೆ ನೀಡುತ್ತಿದ್ದರು. ಈ ವೇಳೆ ಉದ್ಯಮಿಗಳಿಂದ 50 ಲಕ್ಷ ರೂ.ಗಳಿಂದ 4 ಕೋಟಿ ರೂ.ಗಳವರೆಗೆ ಮುಂಗಡ ಹಣವನ್ನು ಪಾವತಿಸುವಂತೆ ಹೇಳುತ್ತಿದ್ದ, ಇದನ್ನು ಸ್ಟಾಂಪ್ ಡ್ಯೂಟಿ, ಕಮಿಷನ್, ಕಾನೂನು ಅನುಮತಿಗಳು ಮತ್ತು ಸಂಸ್ಕರಣಾ ಶುಲ್ಕಗಳೆಂದು ಹೇಳಲಾಗಿದೆ. ಹಣ ಪಡೆದ ನಂತರ, ಸಲ್ಡಾನಾ ಕಣ್ಮರೆಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ರಹಸ್ಯ ಕೋಣೆಗಳು, ಫೇಕ್‌ವಾಲ್‌ಗಳು, ತಪ್ಪಿಸಿಕೊಳ್ಳುವ ಮಾರ್ಗಗಳಿಗೆ ಕಾರಣವಾಗುವ ಗುಪ್ತ ಮೆಟ್ಟಿಲುಗಳು, ಗೋಡೆಗಳ ಮೇಲೆ ಹುದುಗಿರುವ ಬಾಗಿಲುಗಳು ಮತ್ತು ಭೂಗತ ಕಾರಿಡಾರ್‌ಗಳನ್ನು ಹೊಂದಿದ್ದ ಆ ಭವ್ಯವಾದ ಮಹಲು ಬಾಲಿವುಡ್ ಸಿನಿಮಾದಲ್ಲಿ ಕಾಣುವ ಸ್ಮಗ್ಲರ್‌ಗಳ ಗುಹೆಯಂತೆ ಅಕ್ಷರಶಃ ಕಾಣುತ್ತಿತ್ತು.ಅಷ್ಟು ಅಚ್ಚುಕಟ್ಟಾಗಿ ತನ್ನ ಸೀಕ್ರೆಟ್ ಚೇಂಬರ್‌ಅನ್ನು ನಿರ್ಮಾಣ ಮಾಡಿದ್ದ. ಕಣ್ಗಾವಲು ಕ್ಯಾಮೆರಾಗಳು ಅವನಿಗೆ ಆಸ್ತಿಯ ರಿಯಲ್ ಟೈಮ್ ವಿವರಗಳನ್ನು ನೀಡುತ್ತಿದ್ದವು. ಇದರಿಂದ ಆತ ಬೇಗನೆ ತಪ್ಪಿಸಿಕೊಳ್ಳುತ್ತಿದ್ದ.
ಆ ಮನೆಯಲ್ಲಿ ತಲಾ 3-5 ಲಕ್ಷ ರೂ. ಮೌಲ್ಯದ ಅಪರೂಪದ ಅಲಂಕಾರಿಕ ಸಸ್ಯಗಳು, ವಿಂಟೇಜ್ ಷಾಂಪೇನ್ ಮತ್ತು ವಿದೇಶಿ ಮದ್ಯಗಳ ರಾಶಿ ಸಿಕ್ಕಿದೆ. ಅಧಿಕಾರಿಗಳು 2.8 ಕೋಟಿ ರೂ. ಮೌಲ್ಯದ ವಜ್ರದ ಉಂಗುರ ಮತ್ತು 667 ಗ್ರಾಂ ಚಿನ್ನವನ್ನು ಪತ್ತೆಹಚ್ಚಿದ್ದಾರೆ. ಆವರಣದಲ್ಲಿ 6.7 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಮದ್ಯವೂ ಪತ್ತೆಯಾಗಿದ್ದು, ಕಾನೂನು ಮಿತಿಗಳನ್ನು ಮೀರಿ ಹೊಂದಿದ್ದಕ್ಕಾಗಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಇದುವರೆಗೆ ಸಲ್ಡಾನ ವಿರುದ್ಧ ಮಂಗಳೂರಿನಲ್ಲಿ ಎರಡು ಮತ್ತು ಚಿತ್ರದುರ್ಗದಲ್ಲಿ ಒಂದು ಎಫ್‌ಐಆರ್ ದಾಖಲಿಸಿದ್ದಾರೆ. ದೆಹಲಿ, ಮುಂಬೈ, ಚಿತ್ರದುರ್ಗ, ಬೆಂಗಳೂರು, ವಿಜಯಪುರ, ತುಮಕೂರು, ಬಾಗಲಕೋಟೆ, ಕೋಲ್ಕತ್ತಾ, ಸಾಂಗ್ಲಿ, ಗೋವಾ, ಲಕ್ನೋ ಮತ್ತು ದೇಶಾದ್ಯಂತದ ಇತರ ನಗರಗಳ ಉದ್ಯಮಿಗಳನ್ನು ಆತ ವಂಚಿಸಿರಬಹುದು ಎಂದು ತನಿಖಾಧಿಕಾರಿಗಳು ಅಂದಾಜು ಮಾಡಿದ್ದಾರೆ.
