ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಮಂಗಳೂರಿನ ಉಳ್ಳಾಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಅನಾಹುತ ಸಂಭವಿಸಿದೆ. ಮನೆಯಡಿ ಕುಟುಂಬಸ್ಥರು ಸಿಲುಕಿದ್ದಾರೆ.  

ಮಂಗಳೂರು(ಮೇ.30) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದ, ಹಲೆವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಭಾರಿ ಮಳೆಗೆ ಮಂಗಳೂರಿನ ಉಳ್ಳಾಲದ ಮೊಂಟೆಪದವು ಬಳಿ ಗುಡ್ಡ ಕುಸಿದಿದೆ. ಎರಡು ಮನೆ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇದರ ಪರಿಣಾಮ ಮನೆಯೊಳಗಿದ್ದ 6ಕ್ಕೂ ಹೆಚ್ಚು ಕುಟುಂಬಸ್ಥರು ಸಿಲುಕಿದ್ದಾರೆ. ಸ್ಥಳೀಯರು, ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

ಅವಶೇಷಗಳಿಡಿಯಲ್ಲಿರುವ ಇಬ್ಬರ ರಕ್ಷಣೆಗೆ ತೀವ್ರ ಕಾರ್ಯಾಚರಣೆ

ಮನೆ ಮೇಲೆ ದಿಢೀರ್ ಗುಡ್ಡ ಕುಸಿದ ಕಾರಣ ಸಂಪೂರ್ಣ ಮನೆ ಧರೆಗುರುಳಿದೆ. ಇತ್ತ ಇಬ್ಬರು ಮೃತಪಟ್ಟಿದ್ದರೆ. ಮತ್ತಿಬ್ಬರನ್ನು ಈಗಾಗಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಅವಶೇಷಗಳಡಿ ಜೀವಂತವಾಗಿರುವುದು ಪತ್ತೆಯಾಗಿದೆ. ಅವರನ್ನು ರಕ್ಷಿಸಲು ರಕ್ಷಣಾ ತಂಡಗಳು ಹರಸಹಾಸ ಮಾಡುತ್ತಿದೆ. ಅವಶೇಷಗಳಡಿ ಸಿಲುಕಿರುವ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರನ್ನು ಜೀವಂತವಾಗಿ ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ. ನಿರಂತರ ಮಳೆಯಾಗುತ್ತಿರುವ ಕಾರಣ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಇಷ್ಟೇ ಅಲ್ಲ ಗುಡ್ಡ ಮತ್ತಷ್ಟು ಕುಸಿಯುತ್ತಿರುವ ಕಾರಣ ಆತಂಕ ಹೆಚ್ಚಾಗಿದೆ.

ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದ ಅವಘಡ ಸಂಭವಿಸಿದೆ. ಈ ಘಟನೆಯನಲ್ಲಿ ಮೃತಪಟ್ಟ ಮಹಿಳೆಯನ್ನು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಎಂದು ಗುರುತಿಸಲಾಗಿದೆ. ಇದೀಗ ಮನೆಯ ಅವಶೇಷಗಳಡಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಿಲುಕಿದ್ದಾರೆ. ಈ ಮೂವರ ರಕ್ಷಣೆಗೆ ಕಾರ್ಯಾತರಣೆ ತೀವ್ರಗೊಂಡಿದೆ. ಈಗಾಗಲೇ ಕಾಂತಪ್ಪ ಪೂಜಾರಿ ಹಾಗೂ ಸೀತಾರಾಮ ಅವರನ್ನು ರಕ್ಷಿಸಲಾಗಿದೆ. ಮನೆಯಡಿಲ್ಲಿರುವ ಅಶ್ವಿನಿ(33) ಹಾಗೂ ಮಕ್ಕಳಾದ ಆರ್ಯನ್(3) ಹಾಗೂ ಆರುಷ್(2) ರಕ್ಷಣೆಗೆ ಕಾರ್ಯಾಚರಣೆ ತೀವ್ರಗೊಂಡಿದೆ.

ದೇರಳಕಟ್ಟೆ ಕಾನಕೆರೆಯ ಗುಡ್ಡ ಕುಸಿತದಲ್ಲಿ ಮಗು ಸಾವು

ಮೊಂಟೆಪವು ಗುಡ್ಡ ಕುಸಿತದಲ್ಲಿ ಮಹಿಳೆ ಮೃತಪಟ್ಟಿದ್ದರೆ, ಇನ್ನುಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇತ್ತ ದೇರಳಕಟ್ಟೆ ಕಾನಕೆರೆಯ ಗುಡ್ಡ ಕುಸಿತದಲ್ಲಿ ಮಗು ಮೃತಪಟ್ಟಿದೆ. 6 ವರ್ಷದ ಮಗುವನ್ನು ರಕ್ಷಣಾ ತಂಡ ಕಾರ್ಯಚರಣೆ ಮೂಲಕ ಹೊರತೆಗಿದೆ. ಈ ಪೈಕಿ ಪಾತಿಮಾ ನಯೀಮ ಅನ್ನೋ ಮಗು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ.

ದಕ್ಷಿಣ ಕನ್ನಡ ಶಾಲೆಗಳಿದೆ ರಜೆ ಘೋಷಣೆ

ನಿನ್ನೆ (ಮೇ.29) ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮನೆ, ಅಂಗಡಿ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ನುಗ್ಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ರಜೆ ಘೋಷಿಸಲಾಗಿದೆ. ಮಂಗಳೂರು ನಗರದ ಬಹುತೇಕ ರಸ್ತೆಗಳು ಕರೆಯಂತಾಗಿದೆ. ಮಿಷನ್ ಸ್ಟ್ರೀಟ್ ರಸ್ತೆ, ರಾವ್ & ರಾವ್ ವೃತ್ತ, ಕೊಪ್ಪರ ಹಿತ್ಲು ಪ್ರದೇಶ ಜಲಾವೃತಗೊಂಡಿದೆ. ಇದೇ ವೇಳೆ ಹಲೆವೆಡೆ ಅಪಾಯದಲ್ಲಿ ಸಿಲುಕಿದ್ದ ಹಲವರ ರಕ್ಷಣೆ ಮಾಡಲಾಗುತ್ತಿದೆ.

ಉಡುಪಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಉಡುಪಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಡಾ .ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಆದರೆ ಎಸ್ .ಎಸ್. ಎಲ್ .ಸಿ ಪೂರಕ ಪರೀಕ್ಷೆಯು ಎಂದಿನಂತೆ ನಡೆಯಲಿದೆ.