ಮಂಗಳೂರು(ನ.07): ಮಂಗಳೂರು ಮಹಾನಗರ ಪಾಲಿಕೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಏನು ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜತೆ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಮಂಗಳೂರು ಪಾಲಿಕೆಗೆ ನಾವು ನೀಡಿದಷ್ಟುಅನುದಾನದಷ್ಟುಯಾವುದೇ ಸರ್ಕಾರ ನೀಡಿಲ್ಲ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ 2500 ಕೋಟಿ ರು., ಉತ್ತರ ಕ್ಷೇತ್ರಕ್ಕೆ 1460 ಕೋಟಿ ರು., ವಿವಿಧ ಯೋಜನೆಗಳ ಅಡಿಯಲ್ಲಿ 1400 ಕೋಟಿ ರು., ಒಟ್ಟಾರೆಯಾಗಿ 5300 ಕೋಟಿ ರು.ಗೂ ಹೆಚ್ಚು ಅನುದಾನ ನೀಡಿದ ದಾಖಲೆಯಿದೆ. ಇಷ್ಟುದೊಡ್ಡ ಮೊತ್ತದ ಅನುದಾನ ನೀಡಿದ ಬೇರೆ ಇತಿಹಾಸವೇ ಇಲ್ಲ ಎಂದಿದ್ದಾರೆ.

ಬಿಜೆಪಿಗೆ ಗೊತ್ತಿರೋದೆ ಸುಳ್ಳು:

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪಾಲಿಕೆಗೆ 200 ಕೋಟಿ ರು. ನೀಡಲಾಗಿತ್ತು ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ ಯಾವಾಗ ನೀಡಿದ್ದು ಹೇಳಲಿ. ಅಂಕಿ ಅಂಶಗಳ ಸಹಿತ ದಾಖಲೆ ನೀಡಲಿ. ಈಗಲೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಈ ಅವಧಿಯಲ್ಲಿ ಮಂಗಳೂರು ಪಾಲಿಕೆಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ಸುಳ್ಳು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯ ಅನ್ವರ್ಥನಾಮವೇ ಸುಳ್ಳು ಎಂದು ವ್ಯಂಗ್ಯವಾಡಿದ್ದಾರೆ.

ಪ್ರಣಾಳಿಕೆ ಸಂಪೂರ್ಣ ಈಡೇರಿಸ್ತೇವೆ:

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, 2013ರಲ್ಲಿ ಕಾಂಗ್ರೆಸ್‌ ನೀಡಿದ ಪ್ರಣಾಳಿಕೆ ಭರವಸೆಯ ಶೇ.95ಕ್ಕೂ ಅಧಿಕ ಬೇಡಿಕೆಗಳನ್ನು ಈಡೇರಿಸಿದ್ದೆವು. ಪ್ರಣಾಳಿಕೆ ಎನ್ನುವುದು ನಮಗೆ ಚುನಾವಣಾ ಗಿಮಿಕ್‌ ಅಲ್ಲ. ಹಿಂದೆ ಮಾಡಿ ತೋರಿಸಿದ್ದೇವೆ. ಮಂಗಳೂರು ಪಾಲಿಕೆ ಚುನಾವಣೆಯ ಭರವಸೆಯನ್ನೂ ಸಂಪೂರ್ಣವಾಗಿ ಈಡೇರಿಸುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.

ಬಿಜೆಪಿಯವರು ಭರವಸೆ ಕೊಡುತ್ತಾರೆಯೇ ಹೊರತು ಎಂದೂ ಅದನ್ನು ಈಡೇರಿಸಿದ ಬಗ್ಗೆ ಹೇಳಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾದ ಜೆ.ಆರ್‌.ಲೋಬೊ ಮತ್ತು ಮೊಹಿಯುದ್ದೀನ್‌ ಬಾವ ಕೆಲಸ ಮಾಡಿಲ್ಲ ಎಂದು ಬಿಜೆಪಿಯವರ ಬಾಯಿಂದ ಬಂದಿರಲೇ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಗೆದ್ದರು. ಈಗ ಜನರಿಗೆ ಅರ್ಥ ಆಗಿದೆ. ಮತ್ತೆ ಪಾಲಿಕೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದ್ದಾರೆ.

ಮಂಗಳೂರು: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮಾಜಿ ಮೇಯರ್

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಶಾಸಕ ಯು.ಟಿ. ಖಾದರ್‌, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್‌, ವಿನಯ ಕುಮಾರ್‌ ಸೊರಕೆ, ಎಂಎಲ್ಸಿ ಐವನ್‌ ಡಿಸೋಜ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಮೊಹಿಯುದ್ದೀನ್‌ ಬಾವ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಿಥುನ್‌ ರೈ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ಮತ್ತಿತರರಿದ್ದರು.

ವಾರ್ಡ್‌ ಕಮಿಟಿ ಮಾಡೇ ಮಾಡ್ತೀವಿ

ಪಾಲಿಕೆ ವ್ಯಾಪ್ತಿಯ ನಾಗರಿಕರ ಬಹುದೊಡ್ಡ ಬೇಡಿಕೆಯಾದ ವಾರ್ಡ್‌ ಕಮಿಟಿಯನ್ನು ಈ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾಡೇ ಮಾಡ್ತೀವಿ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಹಿಂದಿನ ಪಾಲಿಕೆ ಚುನಾವಣೆಯಲ್ಲಿ ವಾರ್ಡ್‌ ಕಮಿಟಿ ಮಾಡುವುದಾಗಿ ವಾಗ್ದಾನ ನೀಡಿರಲಿಲ್ಲ. ಈ ಬಾರಿ ಅದನ್ನು ಜಾರಿ ಮಾಡಲು ಬದ್ಧ ಎಂದಿದ್ದಾರೆ.

ಮಕ್ಕಳನ್ನು ಶಾಲೆಗೆ ಸೇರಿಸೋ ವಿಚಾರದಲ್ಲಿ ಸರ್ಕಾರದ ನಿರಾಸಕ್ತಿ: ಕೋರ್ಟ್ ತರಾಟೆ