ಧರ್ಮಸ್ಥಳದ ವಿವಾದಗಳ ಕುರಿತು ಸರ್ಕಾರದ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಇದೀಗ ಈ ಪ್ರಕರಣ ಕುರಿತು ಶಾಸಕ ಜನಾರ್ಧನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಕೊಪ್ಪಳ (ಜು.20) ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವಾರು ಹ*ತ್ಯೆ, ಅತ್ಯಾ*ರ ಪ್ರಕರಣಗಳ ಕುರಿತು ಸಂಪೂರ್ಣ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದೆ. ಇತ್ತೀಚೆಗೆ ಅನಾಮಿಕ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟಿದ್ದೇನೆ ಅನ್ನೋ ಆರೋಪದ ಬಳಿಕ ದೇಶಾದ್ಯಂತ ಕೋಲಾಹಲ ಸೃಷ್ಟಿಯಾಗಿದೆ. ಆರೋಪ, ಎಸ್ಐಟಿ ತನಿಖೆ ಬೆಳವಣಿಗೆ ನಡುವೆ ಕೊಪ್ಪಳದಲ್ಲಿ ಶಾಸಕ ಜನಾರ್ಧನ ರೆಡ್ಡಿ ಹಾಗೂ ಬಿಜೆಪಿ ನಾಯಕ ಶ್ರೀರಾಮಲು ಪ್ರತಿಕ್ರಿಯಿಸಿದ್ದಾರೆ. ಶ್ರೀ ಮಂಜುನಾಥ ಸನ್ನಿಧಿಗೆ ಕೆಟ್ಟ ಹೆಸರು ತರುವ ಪ್ರಯತ್ನಗಳು ನಡೆಯುತ್ತಿದೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಹಿಂದೂ ವಿರೋದಿ ನೀತಿ

ಧರ್ಮಸ್ಥಳ ವಿಷಯವನ್ನು ಬಹಳಷ್ಟು ವರ್ಷಗಳ ನಂತರ ಅನಗತ್ಯವಾಗಿ ಎಳೆಯುವಲ ಕೆಲಸ ಯಾರು ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕೊಪ್ಪಳದ ಮರಳಿಯಲ್ಲಿ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಕಾಂಗ್ರೆಸ್ ಒಲೆಕೆ ರಾಜಕಾರಣ ಮಾಡುತ್ತಿದೆ. ಒಂದು ಸಮುದಾಯವನ್ನ ಒಲೈಸುವ ಸಲುವಾಗಿ ವಿಶ್ವದೆಲ್ಲೆಡೆ ಹೆಸರುವಾಸಿಯಾದ ಮಂಜುನಾಥನ ಸನ್ನಿದಿಯಲ್ಲಿ ಕೆಟ್ಟ ಹೆಸರು ಬರುವ ರೀತಿಯಲ್ಲಿ ನಡೆಕೊಳ್ತಿದ್ದಾರೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಮಂಜುನಾಥನ ಶಾಪದಿಂದ ಸರ್ಕಾರ ನಾಶವಾಗುತ್ತೆ

ಎಸ್ಐಟಿ ತನಿಖೆಗೆ ಆದೇಶ ನೀಡಿರುವುದು ಸರಿಯಾದ ಕ್ರಮವಲ್ಲ. ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಎಸ್ಐಟಿ ರಚೆಯನ್ನು ಖಂಡಿಸುತ್ತೇನೆ. ಈ ಸರ್ಕಾರ ಮಂಜುನಾಥನ ಶಾಪದಿಂದ ನಾಶವಾಗುತ್ತೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಎಲ್ಲಾ ಮುಗಿದ ಮೇಲೆ ಎಸ್ಐಟಿ, ಹಿಂದೂ ವಿರೋಧಿ ನಡೆ ಎಂದ ಶ್ರೀರಾಮುಲು

ಧರ್ಮಸ್ಥಳ ವಿವಾದಕ್ಕೆ ಎಸ್ ಐ ಟಿ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಶ್ರೀರಾಮುಲು, ಇದು ಒಂದು ರೀತಿ ಸೇಡಿನ ರಾಜಕಾರಣ. ಈ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ವಿರೇಂದ್ರ ಹೆಗ್ಗಡೆ ಇವೆಲ್ಲ ಭಾವನಾತ್ಮಕ ವಿಚಾರ. ಇದರಲ್ಲಿ ಯಾವುದೆ ಸರ್ಕಾರ ಆದ್ರೂ ಸೂಕ್ಷ್ಮತೆ ಯಿಂದ ಕೆಲಸ ಮಾಡಬೇಕು. ಸೌಜನ್ಯ ಕೇಸ್ ಇಷ್ಟು ದೊಡ್ಡಮಟ್ಟದಲ್ಲಿ ದೇಶದಾದ್ಯಂತ ಸದ್ದು ಮಾಡ್ತಿರೋವಾಗ ಎಸ್‌ಐಟಿಗೆ ಕೊಟ್ಟಿರೋದು ಹಿಂದೂ ಧರ್ಮದ ಮೇಲೆ ಗದಾಪ್ರಹಾರ ಮಾಡಿದಂತೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಸತ್ಯವಾಗಿ ಧರ್ಮಸ್ಥಳದಲ್ಲಿ ಏನು ಘಟನೆ ನಡೆದಿದೆ ನನಗೆ ಮಾಹಿತಿ ಇಲ್ಲ. ಸೌಜನ್ಯ ವಿಚಾರದಲ್ಲಿ ಬಹಳಷ್ಟು ದಿನಗಳಿಂದ ಸುಪ್ರೀಂ ಕೋರ್ಟ್ ಕೂಡಾ ವಿಚಾರಣೆ ನಡೆಸಿ ಎಲ್ಲವೂ ಆಗಿದೆ. ಸೌಜನ್ಯ ವಿಚಾರದಲ್ಲಿ ಯಾರೆ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಶ್ರೀರಾಮಲು ಆಗ್ರಹಿಸಿದ್ದಾರೆ. ಸದ್ಯದ ಬೆಳವಣಿಗೆ ನೋಡಿದಾಗ ಸರ್ಕಾರ ಹಿಂದೂ ವಿರೋಧಿ ರೀತಿ ಕ್ರಮ ಕೈಗೊಳ್ಳುತ್ತಿದೆ ಎಂದು ಶ್ರೀರಾಮಲು ಹೇಳಿದ್ದಾರೆ.