ಬೆಂಗಳೂರು [ಅ.23]:  ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಅ.24 ಮತ್ತು ಅ.25ರಂದು ರೆಡ್‌ ಅಲರ್ಟ್‌ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ (ಬುಧವಾರ) ಕರಾವಳಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು ಹಾಗೂ ಕೊಡಗು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ 115 ರಿಂದ 205 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ‘ಆರೆಂಜ್‌ ಅಲರ್ಟ್‌’ನ ಎಚ್ಚರಿಕೆ ನೀಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಅ.24ರಿಂದ 26ವರೆಗೆ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಹಲವು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ನ ಎಚ್ಚರಿಕೆ ಇರಲಿದೆ. ಆದರೆ, ಅ.26ರ ಬಳಿಕ ಈ ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಮಾಹಿತಿ ನೀಡಿದೆ.

ರೆಡ್ ಅಲರ್ಟ್ 
ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ತಕ್ಷಣವೇ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಪರಿಸ್ಥಿತಿ ಅತ್ಯಂತ ಹಾನಿಕಾರಕವಾಗಿದ್ದು, ತುರ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎನ್ನುವ ಸಂದರ್ಭವನ್ನು ರೆಡ್ ಅಲರ್ಟ್ ಎನ್ನಲಾಗುತ್ತದೆ. 

ಆರೆಂಜ್ ಅಲರ್ಟ್ 
ಯಾವುದೇ ರೀತಿಯ ಸಂದರ್ಭವನ್ನು ಎದುರಿಸಲು ಸಜ್ಜಾಗಬೇಕು ಎನ್ನುವ ಸ್ಥಿತಿಗೆ ಆರೆಂಜ್ ಅಲರ್ಟ್ ಎನ್ನಲಾಗುತ್ತದೆ.