ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಹೊರಗೆಯುವ ಎಸ್ಐಟಿ ತನಿಖೆ ತೀವ್ರಗೊಂಡಿದೆ. 2ನೇ ದಿನ ದೂರುದಾರ ಗುರುತಿಸಿದ 2ನೇ ಸ್ಥಳದಲ್ಲಿ ಉತ್ಖನನ ಮಾಡಲಾಗಿದೆ. ಆದರೆ 2ನೇ ಸಮಾಧಿಯಲ್ಲೂ ಯಾವುದೇ ಕಳೇಬರಹ ಪತ್ತೆಯಾಗಿಲ್ಲ

ಧರ್ಮಸ್ಥಳ (ಜು.30) ಧರ್ಮಸ್ಥಳದಲ್ಲಿ ನೂರೂರು ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ತೀವ್ರಗೊಂಡಿದೆ. ನೇತ್ರಾವತಿ ಸ್ನಾನಘಟ್ಟ ಸಮೀಪದ ಕಾಡಿನಲ್ಲಿ ಅನಾಮಿಕ ದೂರುದಾರ ಹಲವು ಶವ ಹೂತಿಟ್ಟ ಸ್ಥಳಗಳನ್ನು ಗುರುತಿಸಿದ್ದಾನೆ. ಈ ಪೈಕಿ ಮೊದಲ ಸ್ಥಳವನ್ನು ನಿನ್ನೆ (ಜು.29)ರಂದು ಅಗೆಯಲಾಗಿತ್ತು. ಆದರೆ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಇಂದು (ಜು.30) ದೂರುದಾರ ಗುರುತಿಸಿದ 2ನೇ ಸ್ಥಳ ಅಗೆಯಲಾಗಿದೆ. ಆದರೆ ಎರಡನೇ ಸ್ಥಳದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

2ನೇ ಸಮಾಧಿ ಸ್ಥಳ ಅಗೆತ ಮುಕ್ತಾಯ

ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಇರುವ ಕಾಡಿನ ಪ್ರವೇಶದ ಬಳಿ 2ನೇ ಸ್ಥಳ ಗುರುತಿಸಲಾಗಿತ್ತು. ಇಂದು ಕಾರ್ಮಿಕರು 6 ಅಡಿ ಆಳದವರೆಗೆ ಸಮಾಧಿ ಸ್ಥಳ ಅಗೆದಿದ್ದಾರೆ. ಆದರೆ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಹೀಗಾಗಿ 2ನೇ ಸಮಾಧಿ ಸ್ಥಳದ ಉತ್ಖನನ ಕಾರ್ಯ ಅಂತ್ಯಗೊಳಿಸಲಾಗಿದೆ. ಧರ್ಮಸ್ಥಳ ಗ್ರಾಮ ಪಂಚಾಯತಿಯ 20 ಕಾರ್ಮಿಕರ ತಂಡವನ್ನು ಸಮಾಧಿ ಸ್ಥಳ ಅಗೆಯಲು ಬಳಸಿಕೊಳ್ಳಲಾಗಿದೆ. ಆರು ಅಡಿ ಉದ್ದ, ಐದು ಅಡಿ ಅಗಲದಲ್ಲಿ ಸಮಾಧಿ ಸ್ಥಳವನ್ನು 6 ಅಡಿ ಆಳವದ ವರೆಗೆ ಅಗೆಯಲಾಗಿದೆ. ಆದರೆ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ 2ನೇ ಮಾರ್ಕ್ ಸ್ಥಳ ಕಾರ್ಯಾಚರಣೆ ಅಂತ್ಯಗೊಂಡಿದೆ.

ಮೂರನೇ ಸಮಾಧಿ ಸ್ಥಳ ಅಗೆತಕ್ಕೆ ನಿರ್ಧಾರ

ಆರಂಭಿಕ 2 ಸ್ಥಳದಲ್ಲಿ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಹೀಗಾಗಿ ಮೂರನೇ ಸ್ಥಳ ಅಗೆತ ಕಾರ್ಯ ಆರಂಭಗೊಂಡಿದೆ.ದೂರುದಾರ ಸ್ಥಳ ಮಹಜರು ವೇಳೆ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ್ದಾನೆ. ಈ ಪೈಕಿ ಆರಂಭಿಕ 2 ಸಮಾಧಿಗಳನ್ನು ಅಗೆಯಲಾಗಿದೆ. ಇದೀಗ ದೂರುದಾರ ಗುರುತಿಸಿದ ಮೂರನೇ ಸಮಾಧಿ ಅಗೆಯುವ ಕಾರ್ಯ ಆರಂಭಗೊಂಡಿದೆ. ನೇತ್ರಾವತಿ ಸ್ನಾನ ಘಟ್ಟ ಸಮೀಪದ ಕಾಡಿನಲ್ಲಿರುವ ಈ ಸ್ಥಳ ಅಗೆತ ಆರಂಭಗೊಂಡಿದೆ. 

SIT ಮುಖ್ಯಸ್ಥ ನೇತ್ರಾವತಿ ತನಿಖಾ ಸ್ಥಳಕ್ಕೆ ಭೇಟಿ

ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಇಂದು ಮಧ್ಯಾಹ್ನ ನೇತ್ರಾವತಿ ತನಿಖಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ 12.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಳಿದು ಬಳಿಕ ರಸ್ತೆ ಮಾರ್ಗವಾಗಿ ನೇತ್ರಾವತಿ ಸ್ನಾನಘಟ್ಟದ ತನಿಖಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಕಳೆದ ಮೂರು ದಿನಗಳಿಂದ ನೇತ್ರಾವತಿ ಸ್ನಾನಘಟ್ಟ ಬಳಿಕ ಮಹಜರು-ಉತ್ಖನನ

ಕಳೆದ ಮೂರು ದಿನಗಳಿಂದ ಮುಸುಕುಧಾರಿ ದೂರುದಾರನನ್ನ ಕರೆದುಕೊಂಡು ಎಸ್ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟ ಬಳಿ ಸ್ಥಳ ಮಹಜರು ಹಾಗೂ ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಮೊದಲ ದಿನ ದೂರುದಾರ 13 ಸ್ಥಳಗಳನ್ನು ಗುರುತಿಸಿದ್ದ. ಈ ಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ. ನಾಲ್ಕರಿಂದ 6 ಅಡಿ ಆಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿಕೆ ನೀಡಿದ್ದ. 2ನೇ ದಿನ ಸ್ಥಳ ಮಹಜರು ಜೊತೆಗೆ ಉತ್ಖನನ ಕಾರ್ಯವೂ ಆರಂಭಗೊಂಡಿತ್ತು. ಒಂದು ತಂಡ ದೂರುದಾರನ ಜೊತೆ ಸ್ಥಳ ಮಹಜರು ನಡೆಸಿದರೆ, ಮತ್ತೊಂದು ತಂಡ ಸ್ಥಳ ಉತ್ಖನನ ಕಾರ್ಯ ನಡೆಸಿತ್ತು.

ಮೊದಲ ಸಮಾಧಿ 6 ಅಡಿ ಅಗೆತ, ಜೆಸಿಬಿ ಬಳಕೆ

ದೂರುದಾರ ಗುರುತಿಸಿದ ಮೊದಲ ಸಮಾಧಿಯನ್ನು ಆರಂಭಿಕ 4 ಅಡಿ ವರೆಗೆ ಕಾರ್ಮಿಕರು ಅಗೆದಿದ್ದರು. ಭಾರಿ ಮಳೆ ಹಾಗೂ ನೀರಿನ ಒರೆತದಿಂದ ಕಾರ್ಯಾಚರಣೆ ವಿಳಂಬವಾಗಿತ್ತು. ಹೀಗಾಗಿ ಜೆಸಿಬಿ ಮೂಲಕ ಸಮಾಧಿ ಅಗೆತ ಮುಂದುವರಿದಿದ್ದು. ಜೆಸಿಬಿ ಮೂಲಕ 6 ಅಡಿ ಅಗೆಲಾಗಿತ್ತು. ಆದರೆ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಹೀಗಾಗಿ ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿತ್ತು.ನಿನ್ನೆ ಸಂಜೆವರೆಗೆ ಒಂದು ಪಾಯಿಂಟ್ ಮಾತ್ರ ಅಗೆಯಲಾಗಿತ್ತು.