Asianet Suvarna News Asianet Suvarna News

ಮಂಗಳೂರಿಗೆ ಬೇಕು ಪ್ರತ್ಯೇಕ ರೈಲ್ವೆ ವಿಭಾಗ: ಜಿಲ್ಲೆಯ ರೈಲ್ವೆ ಬಳಕೆದಾರರಿಂದ ಸಹಿ ಅಭಿಯಾನ!

ದೇಶ, ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎಂದು ಇಲ್ಲಿನ ರೈಲು ಪ್ರಯಾಣಿಕರು ಈಗ ಸಹಿ ಅಭಿಯಾನಕ್ಕೆ ಮುಂದಾಗಿದ್ದಾರೆ. 

costal city of Mangalore needs a separate railway section railway users of Manglore started signature campaign akb
Author
First Published Jul 3, 2024, 4:40 PM IST

ಮಂಗಳೂರು: ಮಂಗಳೂರು ದಕ್ಷಿಣ ಭಾರತದಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ನಗರ. ಕರ್ನಾಟಕ ರಾಜ್ಯದ ಕರಾವಳಿಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ, ಧಾರ್ಮಿಕ, ಪ್ರವಾಸಿ ತಾಣ ಮಂಗಳೂರು! ಎಲ್ಲಾ ರೀತಿಯಲ್ಲೂ ದೇಶ, ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎಂದು ಇಲ್ಲಿನ ರೈಲು ಪ್ರಯಾಣಿಕರು ಈಗ ಸಹಿ ಅಭಿಯಾನಕ್ಕೆ ಮುಂದಾಗಿದ್ದಾರೆ. 

ಕರ್ನಾಟಕ ರಾಜ್ಯದಲ್ಲಿ ರಸ್ತೆ, ರೈಲ್ವೆ, ವಿಮಾನಯಾನ, ಜಲಸಾರಿಗೆ ಎಂಬ ಎಲ್ಲಾ ನಾಲ್ಕು ವಿವಿಧ ಸಂಪರ್ಕಗಳನ್ನು ಹೊಂದಿದ ಏಕೈಕ ನಗರ ಮಂಗಳೂರು. ಪ್ರಮುಖ ಕೈಗಾರಿಕಾ ಸಂಸ್ಥೆಗಳಾದ ಎಂ.ಸಿ.ಎಫ್, ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ, ಎಂ.ಆರ್.ಪಿ.ಎಲ್, ಕ್ಯಾಂಪ್ಕೋ ಸೇರಿ ಹಲವಾರು ಸಂಸ್ಥೆಗಳ ಕೇಂದ್ರ ಸ್ಥಾನವೂ ಆಗಿದ್ದು, ಅನೇಕ ಫ್ಯಾಕ್ಟರಿಗಳು ಮಂಗಳೂರಿನಲ್ಲಿವೆ. ಮಂಗಳೂರಿನ ನವಬಂದರಿನ ಮೂಲಕ ದಕ್ಷಿಣ ಭಾರತದಿಂದ ಹಲವಾರು ಉತ್ಪನ್ನಗಳು ರಫ್ತುಗೊಳ್ಳುತ್ತದೆ. ಕಚ್ಛಾ ತೈಲಾ ಸೇರಿ ಹಲವಾರು ಉತ್ಪನ್ನಗಳು ನವ ಮಂಗಳೂರು ಬಂದರಿನ ಮೂಲಕ ಆಮದುಗೊಳ್ಳುತ್ತದೆ. ಹೀಗಾಗಿ ವಾಣಿಜ್ಯ ದೃಷ್ಟಿಯಿಂದ ಕರ್ನಾಟಕದಲ್ಲಿ ಮಂಗಳೂರು ಪ್ರಮುಖ ಕೇಂದ್ರ. 


ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು, ಪೊಳಲಿ, ಮಂಗಳಾದೇವಿ, ಕದ್ರಿ, ಕುದ್ರೋಳಿ, ಪುತ್ತೂರು, ಮಹಾಲಿಂಗೇಶ್ವರ, ಕಾರಿಂಜ, ಬಪ್ಪನಾಡು ಸೇರಿ ಹಲವಾರು ಧಾರ್ಮಿಕ ಕ್ಷೇತ್ರಗಳು ಮಂಗಳೂರಿನಲ್ಲಿ ಹಾಗೂ ನಗರದ ಆಸುಪಾಸಿನಲ್ಲಿದೆ. ಈ ಕ್ಷೇತ್ರಗಳಿಗೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬರುತ್ತಾರೆ. ಎನ್.ಐ.ಟಿ.ಕೆ ಮಂಗಳೂರು,ಕೆನಾರ ಶಿಕ್ಷಣ ಸಂಸ್ಥೆ,ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ,ಸಹ್ಯಾದ್ರಿ ಇಂಜನಿಯರಿಂಗ್ ಕಾಲೇಜು, ಸಂತ ಜೋಸೆಫ್ ಶಿಕ್ಷಣ ಸಂಸ್ಥೆಗಳು,ಯೆನೆಪೋಯಾ ಶಿಕ್ಷಣ ಸಂಸ್ಥೆಗಳು ಸೇರಿ ಹಲವಾರು ಶಿಕ್ಷಣ ಸಂಸ್ಥೆಗಳು,ಕೆ.ಎಂ.ಸಿ ಆಸ್ಪತ್ರೆ, ಏಜೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು, ಮಂಗಳಾ ಆಸ್ಪತ್ರೆ, ಇಂಡಿಯನ್ ಆಸ್ಪತ್ರೆ, ಯೆನೆಪೋಯಾ ಆಸ್ಪತ್ರೆ ಸೇರಿ ಹಲವಾರು ವೈದ್ಯಕೀಯ ಸಂಸ್ಥೆಗಳು ಮಂಗಳೂರಿನಲ್ಲಿದೆ. 

ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸಲು ದಕ್ಷಿಣ ಕನ್ನಡ ಹಾಗೂ ಹತ್ತಿರದ ಜಿಲ್ಲೆಗಳ ಜನರು ಮಂಗಳೂರಿಗೆ ಬರುತ್ತಾರೆ. ಹೀಗಾಗಿ ಸಕಲ ದೃಷ್ಟಿಯಿಂದ ನೋಡಿದರೆ ಮಂಗಳೂರು ಒಂದು ಪ್ರಮುಖ ನಗರವಾಗಿದೆ. ಆದರೆ ವಿಪರ್ಯಾಸವೇನೆಂದರೆ ರೈಲ್ವೇ ವಿಷಯದಲ್ಲಿ ಮಂಗಳೂರು ಬೇರೆ ಪ್ರಮುಖ ನಗರಗಳಿಂದ ಹಿಂದೆ ಬಿದ್ದಿದೆ. ಪ್ರತ್ಯೇಕ ರೈಲ್ವೆ ವಿಭಾಗವಿಲ್ಲದೆ, ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗ, ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಹಾಗೂ ಕೊಂಕಣ ರೈಲ್ವೆ ನಿಗಮದ ಮಧ್ಯೆ ಮಂಗಳೂರಿನ ರೈಲ್ವೆ ಜಾಲ ಹಂಚಿ ಹೋಗಿದೆ. ಇದರಿಂದ ಮಂಗಳೂರಿಗೆ ಸಿಗಬೇಕಾದ ಸೌಕರ್ಯಗಳು,ರೈಲ್ವೆ ಸೇವೆಗಳು ಇಲ್ಲವಾಗಿದೆ. 

ಹೀಗಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ಅನ್ನು ಪ್ರಮುಖ ರೈಲ್ವೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು, ಕರ್ನಾಟಕ ರಾಜ್ಯದ ಹಲವಾರು ನಗರಗಳಿಗೆ ಮಂಗಳೂರು ಸೆಂಟ್ರಲಿನಿಂದ  ರೈಲು ಸೇವೆ ಆರಂಭಿಸಲು, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಆಗಬೇಕಾಗಿದೆ. 

ಈಗಾಗಲೇ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆ ಇಲಾಖೆಯಡಿ ಸೇರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದು ಕಾರ್ಯಸಾಧುವಾದರೆ ಮಂಗಳೂರಿನಿಂದ ಮಡಗಾಂವ್ ತನಕ ಹಾಗೂ ಮಂಗಳೂರಿನಿಂದ ಸಕಲೇಶಪುರ/ಹಾಸನ ತನಕದ ರೈಲ್ವೆ ಜಾಲವನ್ನು ಸೇರಿಸಿ ಮಂಗಳೂರು ಸೆಂಟ್ರಲ್ ಅನ್ನು ಕೇಂದ್ರ ಸ್ಥಾನವಾಗಿ ಮಾಡಿ ಪ್ರತ್ಯೇಕ ರೈಲ್ವೆ ವಿಭಾಗ ನಿರ್ಮಾಣವಾಗಬೇಕು. ಇದರಿಂದ ಕರಾವಳಿಯ ಜನರ ರೈಲ್ವೆ ಬೇಡಿಕೆಗಳು ಈಡೇರುವುದು ಅಲ್ಲದೆ, ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು,ರೈಲ್ವೆ ಹಳಿಗಳ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದಾಗಿದೆ. ಅಷ್ಟೇ ಅಲ್ಲದೆ, ಸುಬ್ರಹ್ಮಣ್ಯದಿಂದ ಮಡಗಾಂವ್ ತನಕದ ನಮ್ಮ ಕರಾವಳಿಯ ರೈಲ್ವೇ ಜಾಲದಲ್ಲಿ ಹೊಸ ರೈಲು ಸೇವೆ ಆರಂಭಿಸಲು ಮೂರು ವಿಭಾಗಗಳ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ.

ಹೀಗಾಗಿ ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಶೀಘ್ರದಲ್ಲಿ ನಿರ್ಮಾಣವಾಗಬೇಕು. ಹೀಗಾಗಿ ಇದರ ಬಗ್ಗೆ ಧ್ವನಿ ಎತ್ತಲು ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಬಳಕೆದಾರರ ಸಮಿತಿಯ ಸಹಿ ಅಭಿಯಾನ ಮಾಡುತ್ತಿದ್ದು, ಈ ಅಭಿಯಾನವು ಇಂದಿನಿಂದ ಆರಂಭವಾಗಿದೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 2ರ ತನಕ ಇದು ನಡೆಯಲಿದೆ. ಎಲ್ಲರೂ ಈ ಸಹಿ ಅಭಿಯಾನದಲ್ಲಿ ಭಾಗವಹಿಸಿ  ಈ ಪ್ರಯತ್ನದಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಮಂಗಳೂರಿನ ರೈಲ್ವೆ ಬಳಕೆದಾರರ ವೇದಿಕೆ ಆಗ್ರಹಿಸಿದೆ.

ಈ ಅಭಿಯಾನದಲ್ಲಿ ನೀವು ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.

Latest Videos
Follow Us:
Download App:
  • android
  • ios