ಬೆಂಗಳೂರು :  ರಾಜಧಾನಿ ಮಂದಿಗೆ ಶೀಘ್ರದಲ್ಲೇ ನೀರಿನ ದರ ಏರಿಕೆ ಬಿಸಿ ತಟ್ಟಲಿದೆ. ಈಗಾಲೇ ನೀರಿನ ದರ ಪರಿಷ್ಕರಣೆಯಲ್ಲಿ ತೊಡಗಿರುವ ಬೆಂಗಳೂರು ನೀರು ಪೂರೈಕೆ ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ)ಯು ಮಾಸಾಂತ್ಯಕ್ಕೆ ರಾಜ್ಯ ಸರ್ಕಾರಕ್ಕೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ದರ ಪರಿಷ್ಕರಣೆಗೆ ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಈ ಸಮಿತಿ ಈಗಾಗಲೇ ಹಲವು ಸುತ್ತಿನ ಚರ್ಚೆ ನಡೆಸಿದೆ. ಶೀಘ್ರದಲ್ಲೇ ಅಂತಿಮ ಸುತ್ತಿನ ಚರ್ಚೆ ನಡೆಸಿ, ಪ್ರಸ್ತಾವನೆ ಅಂತಿಮಗೊಳಿಸಲಿದೆ. ಈ ದರ ಪರಿಷ್ಕರಣೆ ಸಮಿತಿಯು ಪ್ರಸ್ತಾವನೆಯಲ್ಲಿ ಶೇ.15ರಿಂದ 20ರಷ್ಟುದರ ಹೆಚ್ಚಳಕ್ಕೆ ಸೂಚಿಸುವ ಸಾಧ್ಯತೆಯಿರುವ ಬಗ್ಗೆ ಜಲಮಂಡಳಿ ಮೂಲಗಳಿಂದ ತಿಳಿದು ಬಂದಿದೆ.

ಜಲಮಂಡಳಿಯು ಕಡೆಯದಾಗಿ ನೀರಿನ ದರ ಪರಿಷ್ಕರಿಸಿ ಐದು ವರ್ಷಗಳಾಗಿದೆ. ಈ ಅವಧಿಯಲ್ಲಿ ವಿದ್ಯುತ್‌ ದರ ಹಲವು ಬಾರಿ ಏರಿಕೆಯಾಗಿರುವುದರಿಂದ ಜಲಮಂಡಳಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಗೃಹ ಹಾಗೂ ವಾಣಿಜ್ಯ ಬಳಕೆ ನೀರಿನ ಪೂರೈಕೆಯಿಂದ ಶುಲ್ಕದ ರೂಪದಲ್ಲಿ ಮಾಸಿಕ ಸುಮಾರು 100 ಕೋಟಿ ಆದಾಯ ಸಂಗ್ರಹವಾಗುತ್ತಿದೆ. ಈ ಪೈಕಿ ಸುಮಾರು .50 ಕೋಟಿ ವಿದ್ಯುತ್‌ ಶುಲ್ಕಕ್ಕೆ ಹೋಗುತ್ತಿದೆ. ಉಳಿದ ಹಣದಲ್ಲಿ ನೌಕರರ ವೇತನ, ಮಂಡಳಿ ನಿರ್ವಹಣೆಗೆ ವ್ಯಯವಾಗುತ್ತಿದೆ. ಜಲಮಂಡಳಿಗೆ ನೀರಿನ ಶುಲ್ಕವೇ ಬಹುಮುಖ್ಯ ಆದಾಯ ಮೂಲವಾಗಿರುವುದರಿಂದ ನೀರಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಜಲಮಂಡಳಿಯು ಕುಡಿಯುವ ನೀರು ಪೂರೈಕೆ, ಒಳಚರಂಡಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಸೇರಿದಂತೆ ಕೆಲ ಬೃಹತ್‌ ಯೋಜನೆಗಳನ್ನು ರೂಪಿಸಿದೆ. ರಾಜ್ಯ ಸರ್ಕಾರ ಅನುದಾನ ನೀಡಿದರೂ ಜಲಮಂಡಳಿಯು ಈ ಯೋಜನೆಗಳಿಗೆ ಹಣ ಹಾಕಬೇಕಿದೆ. ಈ ಎಲ್ಲ ಕಾರಣಗಳಿಂದ ನೀರಿನ ದರ ಏರಿಕೆ ಅತ್ಯವಶ್ಯವಾಗಿದೆ ಎಂದರು.

ನೀರಿನ ದರ ಪರಿಷ್ಕರಣೆಗೆ ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಇದ್ದಾರೆ. ಈವರೆಗೆ ಸಮಿತಿಯು ಎರಡು ಬಾರಿ ಸಭೆ ಸೇರಿ ಚರ್ಚಿಸಿದೆ. ಶೀಘ್ರದಲ್ಲೇ ಅಂತಿಮ ಸುತ್ತಿನ ಸಭೆ ನಡೆಸಿ, ಜಲಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಲಮಂಡಳಿ ಸಭೆಯಲ್ಲಿ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ರಾಜ್ಯ ಸರ್ಕಾರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಬಳಿಕ ಜಲಮಂಡಳಿಯು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಿದೆ ಎಂದು ದರ ಪರಿಷ್ಕರಣೆ ಸಮಿತಿ ಅಧ್ಯಕ್ಷ ಕೆಂಪರಾಮಯ್ಯ ತಿಳಿಸಿದರು.

ನೀರಿನ ದರ ಪರಿಷ್ಕರಣೆಗೆ ಸಮಿತಿ ರಚಿಸಲಾಗಿದೆ. ಈ ಸಮಿತಿ ಹಲವು ಸುತ್ತುಗಳ ಚರ್ಚೆ ನಡೆಸಿದೆ. ಆದರೆ, ಎಷ್ಟುಪ್ರಮಾಣದಲ್ಲಿ ದರ ಹೆÜಚ್ಚಳ ಮಾಡಬೇಕೆಂಬುದು ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಶೀಘ್ರದಲ್ಲೇ ಅಂತಿಮಗೊಳಿಸಿ ಮೇ 30ರೊಳಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

-ತುಷಾರ್‌ ಗಿರಿನಾಥ್‌, ಅಧ್ಯಕ್ಷ, ಬಿಡಬ್ಲ್ಯೂಎಸ್‌ಎಸ್‌ಬಿ.