ಆತ್ಮಭೂಷಣ್‌

ಮಂಗಳೂರು [ನ.05]:  ಉಗ್ರರ ಸ್ಲೀಪರ್‌ ಸೆಲ್‌ ಹಣೆಪಟ್ಟಿಗೆ ಒಳಗಾಗಿರುವ ಕರಾವಳಿ ಜಿಲ್ಲೆಯಲ್ಲಿ ಬಾಂಗ್ಲಾ ನುಸುಳುಕೋರರ ಹೆಜ್ಜೆ ಕಂಡುಬಂದಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ದ.ಕ.ದಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರ ಮೂರು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಎರಡು ಪ್ರಕರಣ ಗ್ರಾಮಾಂತರದಲ್ಲಿ ಹಾಗೂ ಒಂದು ಶಂಕಿತ ಪ್ರಕರಣ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ದಾಖಲಾಗಿದೆ. ಪತ್ತೆಯಾದ ಪ್ರಕರಣಗಳೆಲ್ಲ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾರ್ಮಿಕರಾಗಿ ಆಗಮಿಸಿರುವವರು ಎಂಬುದು ಗಮನಾರ್ಹ ಅಂಶ.

ಪ್ರಕರಣ-1:

2015ರಲ್ಲಿ ಬಂಟ್ವಾಳದ ಫರಂಗಿಪೇಟೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂರು ಮಂದಿ ಸಾವಿಗೀಡಾಗಿ ಓರ್ವ ಕಾರ್ಮಿಕ ಗಾಯಗೊಂಡಿದ್ದ. ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಈ ನಾಲ್ವರು ಕೂಡ ಬಾಂಗ್ಲಾ ಅಕ್ರಮ ವಲಸಿಗರು ಎಂಬುದು ಗೊತ್ತಾಗಿತ್ತು. ಮೂವರು ಸಾವಿಗೀಡಾದವರ ಅಂತ್ಯಕ್ರಿಯೆಯನ್ನು ಇಲ್ಲಿಯೇ ನಡೆಸಿ, ಗಾಯಾಳುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಆತನಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಅನಧಿಕೃತಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದಿರುವುದು ದೃಢವಾಗಿತ್ತು. ನಂತರ ಆತನನ್ನು ರೈಲಿನ ಮೂಲಕ ಪಶ್ಚಿಮ ಬಂಗಾಲಕ್ಕೆ ಕಳುಹಿಸಿ, ಅಲ್ಲಿಂದ ಬಾಂಗ್ಲಾಕ್ಕೆ ಗಡಿಪಾರು ಮಾಡಲಾಗಿತ್ತು.

ಪ್ರಕರಣ-2:  ಮೂಡುಬಿದಿರೆ ಸಮೀಪದ ವೇಣೂರಿನಲ್ಲಿ 2017ರ ಜನವರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಕಟ್ಟಡ ನಿರ್ಮಾಣದಲ್ಲಿ ಸುಮಾರು 14ಕ್ಕೂ ಅಧಿಕ ಕಾರ್ಮಿಕರು ತೊಡಗಿಸಿಕೊಂಡಿದ್ದರು. ಇವರಲ್ಲಿ 14 ಮಂದಿ ಬಾಂಗ್ಲಾ ವಲಸಿಗರು. ಕಟ್ಟಡ ಗುತ್ತಿಗೆದಾರರೊಬ್ಬರ ಜೊತೆಗೆ ಈ ಮಂದಿ ಮಡಿಕೇರಿಯಿಂದ ವೇಣೂರಿಗೆ ಆಗಮಿಸಿದ್ದರು. ಅವರ ಪೂರ್ವಾಪರ ವಿಚಾರಿಸದೆ ಗುತ್ತಿಗೆದಾರರು ಅವರನ್ನು ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಿದ್ದರು. ಸುಮಾರು ಒಂದು ವಾರ ಕಾಲ ನಿರ್ಮಾಣ ಕೆಲಸದಲ್ಲಿ ತೊಡಗಿಸಿರುವಾಗ, ಸ್ಥಳೀಯರು ಅನುಮಾನದ ಮೇರೆಗೆ ನೀಡಿದ ಮಾಹಿತಿಯಂತೆ ಪೊಲೀಸರು ವಶಕ್ಕೆ ತೆಗೆದುಕೊಂಡು ದಾಖಲೆ ಪರಿಶೀಲನೆ ನಡೆಸಿದ್ದರು. ಆಗ ಅವರೆಲ್ಲ ಬಾಂಗ್ಲಾ ದೇಶೀಯರು ಎಂಬುದು ತಿಳಿದುಬಂದಿತ್ತು. ಈ 14 ಮಂದಿಯೂ 20 ವರ್ಷಕ್ಕಿಂತ ಕೆಳಗಿನವರು ಎಂಬುದು ಗಮನಾರ್ಹ ಸಂಗತಿ. ನಂತರ ಇವರನ್ನು ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿತ್ತು. ಜುಲೈನಲ್ಲಿ ರೈಲಿನ ಮೂಲಕ ಪಶ್ಚಿಮ ಬಂಗಾಲಕ್ಕೆ ಕಳುಹಿಸಿಕೊಟ್ಟು, ಅಲ್ಲಿಂದ ಗಡಿಭದ್ರತಾ ಪಡೆಯವರು ಪ್ರತ್ಯೇಕ ವಾಹನದಲ್ಲಿ ಬಾಂಗ್ಲಾ ಗಡಿಗೆ ಗಡಿಪಾರು ಮಾಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಕರಣ-3:  ಕಳೆದ ಆಗಸ್ಟ್‌ನಲ್ಲಿ ಮೂಡುಬಿದಿರೆಯ ಇರುವೈಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವೃದ್ಧನೋರ್ವ ಸೆರೆ ಸಿಕ್ಕಿದ್ದ. ಲುಂಗಿ ಉಟ್ಟುಕೊಂಡು ಅರೆಹುಚ್ಚನಂತೆ ಅಲ್ಲಿಲ್ಲಿ ಅಡ್ಡಾಡುತ್ತಿದ್ದ ಆತನನ್ನು ಪೊಲೀಸರು ಹಿಡಿದು ಪ್ರಶ್ನಿಸಿದಾಗ, ತಾನು ಬಾಂಗ್ಲಾ ಮೂಲದವ ಎಂದು ಬಾಯಿಬಿಟ್ಟಿದ್ದ. ಬಾಂಗ್ಲಾದ ಬಗರ್‌ ಹಬ್‌ ಎಂಬ ಪ್ರದೇಶದ ಗುಲಾಲ್‌ ಬೈರಾಗಿ(65) ಹೆಸರಿನ ಈತ ಕೂಲಿಗಾಗಿ ಬಂದೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಪೊಲೀಸರಿಗೆ ತಿಳಿಸಿದ್ದ. ಸದ್ಯ ಈತ ಮಂಗಳೂರಿನ ಜೈಲಿನಲ್ಲಿದ್ದಾನೆ. ಈತ ಬಾಂಗ್ಲಾ ಪ್ರಜೆ ಹೌದೇ ಎಂಬುದನ್ನು ದೃಢಪಡಿಸುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೂಲಿಗಾಗಿ ಬರ್ತಾರೆ ನುಸುಳುಕೋರರು?:

ಬಾಂಗ್ಲಾ ದೇಶದಿಂದ ಭಾರತಕ್ಕೆ ನುಸುಳುಕೋರರಾಗಿ ಬಂದಿರುವ ಈ ಮಂದಿ ಪೊಲೀಸ್‌ ವಿಚಾರಣೆ ವೇಳೆ ಕೂಲಿಗಾಗಿ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಸೆರೆ ಸಿಕ್ಕಿ ಬಾಂಗ್ಲಾ ನಿವಾಸಿಗಳನ್ನು ಪರಿಪರಿಯಾಗಿ ಪ್ರಶ್ನಿಸಿದಾಗಲೂ ಅವರಿಂದ ಇದೇ ಉತ್ತರ ಲಭಿಸಿದೆ. ಇದರ ಹೊರತು ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಕ್ರಮ ವಾಸವಿರುವುದನ್ನು ಪತ್ತೆ ಮಾಡಿ ಹೊರಹಾಕುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡುತ್ತಿದೆ.

ಪತ್ತೆ ಮಾಡುವುದೇ ಸವಾಲು:

ಕರಾವಳಿ ಜಿಲ್ಲೆಯಲ್ಲಿ ಬಾಂಗ್ಲಾ ವಲಸಿಗರು ಸೇರಿದಂತೆ ಪಾಕ್‌, ಅಷ್ಘಾನಿಸ್ತಾನೀಯರು, ರೋಹಿಂಗ್ಯಾ ನಿರಾಶ್ರಿತರು ಇಲ್ಲ ಎಂದು ಹೇಳಲಾಗುವುದಿಲ್ಲ. ಸಾಕಷ್ಟುಪೊಲೀಸ್‌ ಬಂದೋಬಸ್‌್ತ ಹೊರತೂ ಈ ನುಸುಳುಕೋರರ ಪ್ರವೇಶದ ಬಗ್ಗೆ ನಿಖರವಾಗಿ ಯಾವುದೇ ಮಾಹಿತಿ ಪೊಲೀಸ್‌ ಇಲಾಖೆಯಲ್ಲಿ ಇಲ್ಲ. ನುಸುಳುಕೋರರು ಇಲ್ಲ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು.

ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರ ದಾಖಲೆ ಪರಿಶೀಲನೆ ನಡೆಸಿದಾಗ, ಅವರನ್ನು ಬಾಂಗ್ಲಾ ನುಸುಳುಕೋರರು ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅವರಲ್ಲಿ ಭಾರತದಲ್ಲಿ ವಾಸ್ತವ್ಯ ಹೊಂದಿರುವ ಬಗ್ಗೆ ಪಕ್ಕಾ ಆಧಾರ್‌ ಕಾರ್ಡ್‌ ಇದೆ. ಇನ್ನೂ ಕೆಲವರಲ್ಲಿ ಭಾರತದ ನಾಗರಿಕತ್ವದ ಗುರುತಿನ ಚೀಟಿಯೂ ಇದೆ. ಈ ಬಗ್ಗೆ ಆಳವಾಗಿ ಪ್ರಶ್ನಿಸಿದರೆ, ಒಡಿಶಾ, ಪಶ್ಚಿಮ ಬಂಗಾಳ, ತ್ರಿಪುರಾ ಎಂದು ಹೇಳುತ್ತಾರೆ. ಅಲ್ಲದೆ ಬಂಗಾಲಿ ಭಾಷೆ ಮಾತನಾಡುವುದರಿಂದ ಅವರು ಬಂಗಾಲಿಗಳೇ ಅಥವಾ ಬಾಂಗ್ಲಾ ದೇಶಿಗರೇ ಎನ್ನುವುದನ್ನು ದೃಢವಾಗಿ ಸುಲಭದಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಆದರೂ ಸಾಕಷ್ಟುಮಾಹಿತಿಗಳನ್ನು ಕಲೆಹಾಕಿ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಮಂಗಳೂರು ನಗರ ಹಾಗೂ ಕಡಲ ಕಿನಾರೆಗಳಲ್ಲಿ ಅಪರಿಚಿತರು ಕಂಡುಬಂದರೆ ತಕ್ಷಣ ಪೊಲೀಸ್‌ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಾರೆ. ಸದ್ಯದ ಮಟ್ಟಿಗೆ ಇಲ್ಲಿ ಯಾವುದೇ ಅಕ್ರಮ ವಲಸಿಗರು ಇರುವುದು ದೃಢಪಟ್ಟಿಲ್ಲ

-ಡಾ.ಪಿ.ಎಸ್‌.ಹರ್ಷ, ಪೊಲೀಸ್‌ ಕಮಿಷನರ್‌, ಮಂಗಳೂರು

ಗ್ರಾಮಾಂತರ ವ್ಯಾಪ್ತಿಯಲ್ಲಿ ಈ ಹಿಂದೆ ಎರಡು ಪ್ರಕರಣ ವರದಿಯಾಗಿತ್ತು. ಅದನ್ನು ಹೊರತುಪಡಿಸಿದರೆ ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣ ಕಂಡುಬಂದಿಲ್ಲ. ಆದರೂ ನಮ್ಮ ಬೀಟ್‌ ಪೊಲೀಸರಲ್ಲಿ ಅಪರಿಚಿತರು ಬಂದರೆ ವಿವರವಾಗಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.

-ಲಕ್ಷ್ಮೀ ಪ್ರಸಾದ್‌, ಜಿಲ್ಲಾ ಎಸ್ಪಿ, ದ.ಕ.