Chitradurga News: ಹಣದಿಂದ ಸಮಾಜದಲ್ಲಿ ಶಾಂತಿ ಸಾಧ್ಯವಿಲ್ಲ; ಪಂಡಿತಾರಾಧ್ಯ ಶ್ರೀ
ಆದರ್ಶ, ತತ್ವ-ಸಿದ್ಧಾಂತಗಳು ಮನಸ್ಸಿಗೆ, ಸಮಾಜಕ್ಕೆ ಶಾಂತಿ-ನೆಮ್ಮದಿಯನ್ನು ನೀಡಬಲ್ಲವೇ ಹೊರತು ಹಣ ಅಧಿಕಾರಗಳಲ್ಲ ಎಂದು ಸಾಣೇಹಳ್ಳಿಯ ಡಾ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು
ಹೊಸದುರ್ಗ (ಜ.1) : ಆದರ್ಶ, ತತ್ವ-ಸಿದ್ಧಾಂತಗಳು ಮನಸ್ಸಿಗೆ, ಸಮಾಜಕ್ಕೆ ಶಾಂತಿ-ನೆಮ್ಮದಿಯನ್ನು ನೀಡಬಲ್ಲವೇ ಹೊರತು ಹಣ ಅಧಿಕಾರಗಳಲ್ಲ ಎಂದು ಸಾಣೇಹಳ್ಳಿಯ ಡಾ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ಶರಣರ ದರ್ಶನ ನಾಟಕೋತ್ಸವದ 4 ನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಣ, ಅಧಿಕಾರದ ಅಮಲು ಏರಿದವರಿಗೆ ಮಠವಾದರೇನು, ಸರ್ಕಾರವಾದರೇನು? ಅಂಥವರು ಹಣ, ಅಧಿಕಾರಕ್ಕಾಗಿ ಎಂಥ ತತ್ವ-ಸಿದ್ಧಾಂತ, ಆದರ್ಶಗಳನ್ನೂ ಬೇಕಾದರೂ ಗಾಳಿಗೆ ತೂರಬಲ್ಲರು. ಅಷ್ಟೇ ಅಲ್ಲ ತಮ್ಮ ಸುತ್ತ-ಮುತ್ತ ಅಂಥದ್ದೇ ಜನರ ಜಾಲವನ್ನೇ ರಚಿಸಿಕೊಳ್ಳುವರು. ಕೊನೆಗೆ ಅದೇ ಜಾಲದಲ್ಲಿ ಸಿಕ್ಕಿ ಜರ್ಜರಿತಾಗುವರು ಎಂದರು.
ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ, ಜೋಶಿ: ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ಇಂದಿನ ರಾಜಕಾರಣ(Politics)ದಲ್ಲಿ, ಮಠ-ಮಂದಿರಗಳಲ್ಲೂ ಅಂಥವರೇ ವಿಜೃಂಭಿಸುತ್ತಿದ್ದಾರೆ. ಆದರೆ ಆ ವಿಜೃಂಭಣೆ ಶಾಶ್ವತವಲ್ಲ ತತ್ವಾದರ್ಶಗಳೇ ಶಾಶ್ವತ. ಒಂದು ನಾಟಕ ತನ್ನ ಕಾಲದ ಸತ್ಯವನ್ನು ಬಿಚ್ಚಿಡುವಂತೆ ಪ್ರಸ್ತುತ ಕಾಲಘಟ್ಟದ ಹೂರಣವನ್ನೂ ತೆರೆದಿಡುವುದು. ಇದೇ ನಾಟಕದ ಶಕ್ತಿ ಎಂದರು.
ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಪೂಜ್ಯರು ಸರ್ವಶರಣ ಸಮ್ಮೇಳನ, ಶ್ರಾವಣ ಸಂಜೆ, ಮತ್ತೆ ಕಲ್ಯಾಣ, ಶಿವಸಂಚಾರ ನಾಟಕೋತ್ಸವ, ಪುಸ್ತಕ ಪ್ರಕಟಣೆ ಮೊದಲಾದ ಮಾಧ್ಯಮಗಳ ಮೂಲಕ ಹನ್ನೆರಡನೆಯ ಶತಮಾನದಲ್ಲಿ ಶರಣರ ತತ್ವ-ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿರುವುದು ನಮ್ಮ ಕಾಲದ ಒಂದು ದಾಖಲಾರ್ಹ ಸಂಗತಿ. ಸಾಣೇಹಳ್ಳಿಯಲ್ಲಿ ದಿನವೂ ಒಂದಲ್ಲ ಒಂದು ಇಂಥ ವಿಶೇಷತೆಗಳು ಇದ್ದೇ ಇರುತ್ತವೆ. ಪೂಜ್ಯರು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಮೂಲಕ ನಾಡನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಇದು ಈ ನಾಡಿನ, ನಮ್ಮ-ನಿಮ್ಮೆಲ್ಲರ ಭಾಗ್ಯ ಎಂದರು.
ನಿರ್ದೇಶಕ ಬಾಸುಮ ಕೊಡಗು ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶರಣರ 30 ನಾಟಕಗಳನ್ನು ಆಡಿಸುವ ಯೋಜನೆ ಹಾಕಿಕೊಂಡಿರುವುದು ರಂಗಭೂಮಿಯಲ್ಲಿ ದಾಖಲಾರ್ಹ ಸಂಗತಿ. ಅನೇಕ ತಂಡಗಳು ನಾಟಕ ಆಡುವುದನ್ನೇ ಮರೆತಿದ್ದವು. ಪೂಜ್ಯರ ಸೂಚನೆ ಮತ್ತೆ ನಮ್ಮಂಥ ತಂಡಗಳಿಗೆ ಚೈತನ್ಯ ತಂದುಕೊಟ್ಟಿದೆ, ಪೂಜ್ಯರು ಮತ್ತೆ ಮತ್ತೆ ಇಂಥ ಪ್ರೇರಣೆಯನ್ನು ಕನ್ನಡ ರಂಗಭೂಮಿಗೆ ಕೊಡಲಿ, ಅವರ ಸೂಚನೆಯಂತೆ ನಾವು ನಾಟಕ ಪ್ರದರ್ಶಿಸಲು ಸಿದ್ಧ ಎಂದರು.
Davanagere : ಕ್ರಿಯಾಶೀಲತೆಯಿಂದ ದುಡಿದು ಬದುಕು ಸಾಗಿಸಿ: ರಂಭಾಪುರಿ ಶ್ರೀ
ವೇದಿಕೆಯ ಮೇಲೆ ತಂಡದ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು. ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಗ್ರಾಮಸ್ಥರು, ಪ್ರೇಕ್ಷಕರು ಭಾಗವಹಿಸಿದ್ದರು. ಅಧ್ಯಾಪಕಿ ಕಾವ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.