ಬೆಂಗಳೂರು(ಜ.10): ಸರ್ಕಾರದ ಉದ್ಯೋಗ, ಕಾಮಗಾರಿ ಹಾಗೂ ಉನ್ನತ ಹುದ್ದೆ ಕೊಡಿಸುವ ನೆಪದಲ್ಲಿ ಬಂಧಿತ ವಂಚಕ ಯುವರಾಜ್‌, ನಿವೃತ್ತ ಮಹಿಳಾ ನ್ಯಾಯಮೂರ್ತಿ ಸೇರಿದಂತೆ ಹಲವು ಜನರಿಗೆ ಕೋಟಿ ಕೋಟಿ ರುಪಾಯಿ ಹಣ ವಸೂಲಿ ಮಾಡಿ ಟೋಪಿ ಹಾಕಿದ್ದಾನೆ.

ಈ ವಂಚನೆ ಸಂಬಂಧ ವಿಲ್ಸನ್‌ ಗಾರ್ಡನ್‌, ಅನ್ನಪೂಣೇಶ್ವರಿ ನಗರ, ಹೈಗ್ರೌಂಡ್ಸ್‌, ಸದಾಶಿವನಗರ ಹಾಗೂ ಸೈಬರ್‌ ಠಾಣೆಗಳಲ್ಲಿ ಯುವರಾಜ್‌ ವಿರುದ್ಧ ಒಟ್ಟು ಐದು ಎಫ್‌ಐಆರ್‌ ದಾಖಲಾಗಿವೆ. ಆತನಿಂದ ವಂಚನೆಗೆ ಒಳಗಾದವರು ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ನಿವೃತ್ತ ಜಡ್ಜ್‌ಗೆ 8 ಕೋಟಿ ವಂಚನೆ:

ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಇಂದ್ರಕಲಾ ಅವರಿಗೆ .8.2 ಕೋಟಿ ಪಡೆದು ಯುವರಾಜ್‌ ವಂಚಿಸಿದ್ದಾನೆ ಎಂದು ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ನನಗೆ 2000ರಿಂದ ನಿವೃತ್ತ ಪೊಲೀಸ್‌ ಅಧಿಕಾರಿ ಪಾಪಯ್ಯ ದಂಪತಿ ಪರಿಚಯಸ್ಥರು. ಕೆಲ ದಿನಗಳ ಹಿಂದೆ ನನ್ನ ಮನೆಗೆ ಯುವರಾಜ್‌ನನ್ನು ಪಾಪಯ್ಯ ಕರೆತಂದಿದ್ದರು. ಆಗ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಲ್ಲಿ ಬಹಳ ಪ್ರಭಾವಿ ವ್ಯಕ್ತಿ ಎಂದು ಯುವರಾಜ್‌ನನ್ನು ನನಗೆ ಪಾಪಯ್ಯ ಪರಿಚಯಿಸಿದ್ದರು. ‘ನನಗೆ ಶಾಸ್ತ್ರ ಹೇಳಲು ಬರುತ್ತದೆ. ಅದರ ಪ್ರಕಾರ ನಿಮಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಸಿಗುವ ಸಾಧ್ಯತೆಗಳಿವೆ’ ಎಂದನು. ಅಲ್ಲದೆ, ನನಗೆ ಬಿಜೆಪಿಯಲ್ಲಿ ಕೇಂದ್ರದ ಎಲ್ಲ ನಾಯಕರು, ಮಂತ್ರಿಗಳು ತುಂಬಾ ಹತ್ತಿರದ ಒಡನಾಡಿಗಳು ಎಂದು ಫೋಟೋ ತೋರಿಸಿದನು.

ಎಟಿಎಂಗೆ ಒಂಚೂರು ಹಾನಿ ಮಾಡದೆ 1 5 ಲಕ್ಷ ದೋಚಿದ್ರು

ಕೇಂದ್ರದ ನಾಯಕರು ಇಂತಹ ಪ್ರಭಾವಿ ಮಹಿಳೆ, ಧೀಮಂತ ನಾಯಕಿಯನ್ನು ಪ್ರಮುಖ ಸ್ಥಾನಕ್ಕೆ ಹುಡುಕುತ್ತಿದ್ದಾರೆ. ಇದಕ್ಕೆ ನೀವು ಪೂರಕವಾಗಿದ್ದರೆಂದು ನನಗೆ ಗೊತ್ತಾಯಿತು ಎಂದರು. ಈ ಮಾತಿಗೆ ಜೊತೆಯಲ್ಲಿ ಪಾಪಯ್ಯ ಸಹ ದನಿಗೂಡಿಸಿದರು. ಕೊನೆಗೆ ಪಾರ್ಟಿ ಫಂಡ್‌ಗೆ ಹಣ ಬೇಕಿದೆ ಎಂದು ಬೇಡಿಕೆ ಇಟ್ಟರು. ನನ್ನ ನಿವೇಶನ ಮಾರಾಟದಿಂದ ಬಂದ ಹಾಗೂ ಅಪಾರ್ಟ್‌ಮೆಂಟ್‌ ಮೇಲೆ ಪಡೆದ ಸಾಲ ಸೇರಿ .3.77 ಕೋಟಿಯನ್ನು ಆರ್‌ಟಿಜಿಎಸ್‌ ಮೂಲಕ ನೀಡಿದೆ. ನಂತರ ನನ್ನನ್ನು ದೆಹಲಿಗೆ ಕರೆದೊಯ್ದು ಕೇಂದ್ರದ ಕೆಲವು ನಾಯಕರು ಮತ್ತು ಸಚಿವರನ್ನು ಭೇಟಿ ಮಾಡಿಸಿ ಕರೆತಂದಿದ್ದರು. ಮತ್ತೆ ಹಣಕ್ಕೆ ಆತ ಒತ್ತಾಯಿಸಿದ. ಆಗ .4.5 ಕೋಟಿಗಳನ್ನು ಸ್ನೇಹಿತರು ಹಾಗೂ ಹಿತೈಷಿಗಳ ಮೂಲಕ ಸಾಲ ಪಡೆದು ನೀಡಿದ್ದೆ. ಹೀಗೆ ಹಣ ಪಡೆದು ಆತ ನನಗೆ ಮೋಸ ಮಾಡಿದ್ದಾನೆ ಎಂದು ನಿವೃತ್ತ ನ್ಯಾಯಾಧೀಶರು ದೂರಿನಲ್ಲಿ ಹೇಳಿದ್ದಾರೆ.

ಎಇಇ ಹುದ್ದೆ ಆಸೆ ತೋರಿಸಿ .30 ಲಕ್ಷ ಟೋಪಿ:

ಸರ್ಕಾರದ ಎಇಇ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ .30 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಯುವರಾಜ್‌ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿ.ನರಸಿಂಹಸ್ವಾಮಿ ಎಂಬುವರೇ ವಂಚನೆಗೊಳಗಾಗಿದ್ದು, ತಮ್ಮ ಪುತ್ರನಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಹೋಗಿ ಯುವರಾಜ್‌ನ ಮೋಸದ ಬಲೆಗೆ ಅವರು ಬಿದ್ದಿದ್ದಾರೆ.

ನನ್ನ ಸ್ನೇಹಿತ ಲೋಕೇಶ್‌ ಮೂಲಕ ಯುವರಾಜ್‌ ಪರಿಚಯವಾಯಿತು. ಆಗ ನನಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಮತ್ತು ಶಾಸಕರು ಗೊತ್ತು. ಅವರ ಮೂಲಕ ನಿಮ್ಮ ಮಗ ರವೀಂದ್ರನಿಗೆ ಸರ್ಕಾರಿ ಎಇಇ ಕೊಡಿಸುತ್ತೇನೆ ಎಂದಿದ್ದ. ಇದಕ್ಕೆ .75 ಲಕ್ಷ ಬೇಡಿಕೆ ಇಟ್ಟಿದ್ದ. ಈ ಮಾತು ನಂಬಿದ ನರಸಿಂಹಸ್ವಾಮಿ ಅವರು, ಯುವರಾಜ್‌ಗೆ ಮುಂಗಡವಾಗಿ .30 ಲಕ್ಷ ಕೊಟ್ಟಿದ್ದರು. ಆದರೆ ಹಣ ಸಂದಾಯವಾದ ಬಳಿಕ ಆತ ವರ್ತನೆ ಬದಲಾಯಿತು. ಹಣ ಮರಳಿಸುವಂತೆ ಕೇಳಿದ್ದಕ್ಕೆ ರೌಡಿಗಳ ಮೂಲಕ ಬೆದರಿಕೆ ಹಾಕಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತರು ಉಲ್ಲೇಖಿಸಿದ್ದಾರೆ.

ಸೈಟ್‌ ಮಾರಾಟದ ಹೆಸರಿನಲ್ಲಿ ಮೋಸ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ವಿವಾದಾತ್ಮಕ ಜಮೀನನ್ನು ಕಡಿಮೆ ಬೆಲೆಗೆ ಕೊಡಿಸುವ ಆಮಿಷವೊಡ್ಡಿ ಮೈಸೂರಿನ ಡಾ.ಗುರುರಾಜ್‌ ರವಿ ಅವರಿಗೆ .6.5 ಕೋಟಿ ಪಡೆದು ಯುವರಾಜ್‌ ಟೋಪಿ ಹಾಕಿದ್ದಾನೆ. ಇನ್ನು ಸಂತ್ರಸ್ತನಿಂದ ಹಣ ಮಾತ್ರವಲ್ಲದೆ .85 ಕೋಟಿ ಮುಂಗಡ ಹಣಕ್ಕೆ ಆತ ಚೆಕ್‌ ಸ್ವೀಕರಿಸಿದ್ದ.

ನನಗೆ 2018ರಲ್ಲಿ ತಮ್ಮ ಗೆಳೆಯರ ಮೂಲಕ ಅವರಿಗೆ ಯುವರಾಜ ಪರಿಚಯವಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಲ್ವರು ಸಹೋದರರಿಗೆ ಸೇರಿದ .150 ಕೋಟಿ ಮೌಲ್ಯದ ಜಮೀನು ವಿವಾದದಲ್ಲಿದ್ದು, ಈ ವ್ಯಾಜ್ಯ ಇತ್ಯರ್ಥಪಡಿಸಿ ಬೇರೆಯವರಿಗೆ ಮಾರಾಟ ಮಾಡಿದರೆ ಒಳ್ಳೆಯ ಲಾಭ ಸಿಗಲಿದೆ ಎಂದಿದ್ದ. ಈ ಮಾತು ನಂಬಿದ ಅವರು, ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಆತನನ್ನು ಭೇಟಿಯಾಗಿ ಮೊದಲ ಹಂತದಲ್ಲಿ .2 ಕೋಟಿ ಹಣ ನೀಡಿದ್ದರು. ಬಳಿಕ ದೇವನಹಳ್ಳಿಗೆ ತೆರಳಿ ಆ ವಿವಾದಿತ ಭೂಮಿ ಸಹ ನೋಡಿ ಬಂದಿದ್ದರು. 2019ರ ಜನವರಿಯಿಂದ 2020ರ ಅಕ್ಟೋಬರ್‌ವರೆಗೆ ಆರ್‌ಟಿಜಿಎಸ್‌ನಲ್ಲಿ ಯುವರಾಜನ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ .6.50 ಕೋಟಿ ಹಣವನ್ನು ವರ್ಗಾಯಿಸಿದ್ದರು. ತರುವಾಯ ಗುರುರಾಜ್‌ಗೆ ಕರೆ ಮಾಡಿದ ಯುವರಾಜ್‌, ‘ಜಮೀನು ಖರೀದಿಗೆ ಗಿರಾಕಿ ಸಿಕ್ಕಿದ್ದಾರೆ. ರೈತರಿಗೆ ತೋರಿಸಲು ನಿಮ್ಮ ಕಡೆಯಿಂದ .85 ಕೋಟಿ ಚೆಕ್‌ ಬೇಕಿದೆ’ ಎಂದು ಹೇಳಿದ್ದನು. ಅಂತೆಯೇ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಭೇಟಿಯಾಗಿ ಮೈಸೂರಿನ ಕುವೆಂಪುನಗರ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯ ಚೆಕ್‌ಗಳಲ್ಲಿ .25 ಕೋಟಿ ಮೊತ್ತದ 3 ಚೆಕ್‌ ಮತ್ತು .10 ಕೋಟಿಗೆ ಮತ್ತೊಂದು ಚೆಕ್‌ ಕೊಟ್ಟಿದ್ದರು. ಚೆಕ್‌ ವಾಪಸ್‌ ಪಡೆಯಲು ಆರೋಪಿಗೆ ಸಂಜೆ ಉದ್ಯಮಿ ಕರೆ ಮಾಡಿದಾಗ ‘ತುರ್ತಾಗಿ ದೆಹಲಿಗೆ ತೆರಳಬೇಕಾಗಿತ್ತು ವಾಪಸ್‌ ಬಂದ ಕೂಡಲೇ ಕೊಡುತ್ತೇನೆ’ ಎಂದರು. ಹೀಗೆ ಸುಳ್ಳು ಹೇಳಿ ವಂಚಿಸಿದ್ದಾನೆ ಎಂದು ಗುರುರಾಜ್‌ ಆರೋಪಿಸಿದ್ದಾರೆ.