ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮದ ವಿಭೂತಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
ಶಹಾಪುರ(ಅ.21): ತಾಲೂಕಿನ ಗ್ರಾಮದ ವಿಭೂತಿಹಳ್ಳಿ ಬಳಿ ಕೆಬಿಜೆಎನ್‌ಎಲ್‌ನ ಡಿಸ್ಟ್ರಿಬ್ಯೂಟರ್ 9ರ ಅಡಿಯಲ್ಲಿ ಬರುವ ಲ್ಯಾಟ್ರಿಲ್ ಕಾಲುವೆಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಅದು ಅನುಮಾನಾಸ್ಪದ ಸಾವು ಎಂದು ಪಾಲಕರು ಆರೋಪಿಸಿದ್ದಾರೆ. ಮೃತ ಯುವಕ ರಸ್ತಾಪುರ ಗ್ರಾಮದ ಆಂಜನೇಯ ಭೀಮಪ್ಪ ದಾಸರ್ (23) ಎಂದು ಗುರುತಿಸಲಾಗಿದೆ.
ಘಟನಾ ವಿವರ:
ಅ.17ರಂದು ಬೆ.6 ಗಂಟೆಗೆ ಆಂಜನೇಯನು ಮನೆಯಿಂದ ಟಂಟಂ ಆಟೋ ತೆಗೆದುಕೊಂಡು ಹೊರಗೆ ಹೋದವನು ರಾತ್ರಿಯಾದರೂ ಮನೆಗೆ ಬರದಿದ್ದನ್ನು ಕಂಡು ಮನೆಯವರು ಯುವಕನ ಗೆಳೆಯರಿಗೆ ಹಾಗೂ ಸಂಬಂಧಿಕರಿಗೆ ವಿಚಾರಿಸಿದ್ದಾರೆ ಹಾಗೂ ಮಗ ಕಾಣೆಯಾಗಿರುವ ಕುರಿತು ಶಹಾಪುರ ಪೊಲೀಸ್ ಠಾಣೆಗೆ ಯುವಕನ ತಂದೆ ಭೀಮಪ್ಪ ದಾಸರ್ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಅ.19 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ರಾಮದ ಬಳಿ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯ ಪಕ್ಕದ ಲ್ಯಾಟ್ರಿಲ್ ದಂಡೆ ಮೇಲೆ ನಿಮ್ಮ ಟಂಟಂ ಆಟೋ ನಿಂತಿರುವುದಾಗಿ ಪರಿಚಯಸ್ಥರೊಬ್ಬರು ಯುವಕನ ತಂದೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ತಂದೆ ಹಾಗೂ ಸಂಬಂಧಿಕರು ಆಟೋ ನಿಲ್ಲಿಸಿರುವ ಸ್ಥಳಕ್ಕೆ ಬಂದಾಗ ಇದು ತಮ್ಮದೇ ಆಟೋ ಎನ್ನುವದು ಖಾತ್ರಿಯಾಗಿದ್ದು, ಅದರಲ್ಲಿ ಯುವಕನ ಮೊಬೈಲ್ ಹಾಗೂ 300 ರು.ಗಳು ದೊರಕಿವೆ. ಕಾಲುವೆ ಮತ್ತು ಸುತ್ತಮುತ್ತ ಜಮೀನಿನಲ್ಲಿ ಯುವಕನಿಗಾಗಿ ಹುಡುಕಾಟ ನಡೆಸುತ್ತಿರುವಾಗ ಆಟೋ ನಿಲ್ಲಿಸಿದ ಜಾಗದಿಂದ ಅಂದಾಜು 2ಕಿಮೀ ದೂರದಲ್ಲಿ ಲ್ಯಾಟ್ರಿಲ್‌ನಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದು, ನನ್ನ ಮಗನಿಗೆ ಈಜು ಬರುತ್ತಿತ್ತು. ಇದರಲ್ಲಿ ಕೇವಲ ಎರಡು ಅಡಿ ನೀರು ಹರಿಯುತ್ತಿದೆ. ಈ ಸ್ವಲ್ಪ ನೀರಲ್ಲಿ ನನ್ನ ಮಗ ಸಾಯಲು ಹೇಗೆ ಸಾಧ್ಯ? ಎಂದು ಮೃತ ಯುವಕನ ತಂದೆ ಸಂಶಯ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಇನ್ಸ್ಟಾಗ್ರಾಮ್ ಸ್ಟಾರ್‌ಗೆ ಗುಂಡಿಕ್ಕಿ ಹತ್ಯೆ
ಶವ ದೊರೆತ ಸ್ಥಳಕ್ಕೆ ಎಎಸ್‌ಐ ಹೊನ್ನಪ್ಪ ಭಜಂತ್ರಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಈ ಲ್ಯಾಟ್ರಿಲ್‌ನಲ್ಲಿ ಒಂದುವರೆಯಿಂದ ಎರಡು ಅಡಿಯುವರೆಗೆ ಮಾತ್ರ ನೀರು ಹರಿಯುತ್ತದೆ. ಈ ಸ್ವಲ್ಪ ಪ್ರಮಾಣದ ನೀರಿನಲ್ಲಿ ಸಾವು ಸಂಭವಿಸೋದು ಸಾಧ್ಯವಿಲ್ಲ. ಅಂಥದರಲ್ಲಿ 23 ವರ್ಷದ ಯುವಕ ಈ ನೀರಿನಲ್ಲಿ ಸಾಯುವುದು ಅಸಾಧ್ಯ. ದಲಿತ ಯುವಕನ ಸಾವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಯುವಕನ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.