ಹುಬ್ಬಳ್ಳಿ(ಡಿ.05): ಮಹಾನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ದುಷ್ಕರ್ಮಿಗಳ ತಂಡವೊಂದು ಗುರುವಾರ ತಡರಾತ್ರಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇಲ್ಲಿಯ ಕಿಮ್ಸ್‌ ಬಳಿ ಬಿಟ್ಟು ಹೋಗಿದ್ದಾರೆ. ಆದರೆ ಚಿಕಿತ್ಸೆ ಪ್ರಾರಂಭಿಸುವುದಕ್ಕೂ ಮುನ್ನವೇ ಆತ ಮೃತಪಟ್ಟಿದ್ದಾನೆ.

ಇಲ್ಲಿಯ ಹಳೇಹುಬ್ಬಳ್ಳಿಯ ಶಾರುಖ್‌ ಸೌದಾಗರ (26) ಎಂಬಾತ ಮೃತಪಟ್ಟವ. ದುಷ್ಕರ್ಮಿಗಳು ಈತನನ್ನು ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಕಟ್ಟಿಗೆ ಹಾಗೂ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ತೊಡೆ, ಬೆನ್ನು ಮೂಳೆ ಮುರಿದು ತೀವ್ರ ನೋವು ಅನುಭವಿಸುತ್ತಿದ್ದ. ಗಾಬರಿಗೊಂಡ ದುಷ್ಕರ್ಮಿಗಳು ಗುರುವಾರ ತಡರಾತ್ರಿ ಕಿಮ್ಸ್‌ ಬಳಿ ಶಾರುಖ್‌ನನ್ನು ತಂದು ಬಿಟ್ಟು ಪರಾರಿಯಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶಾರುಖ್‌ನನ್ನು ವಿದ್ಯಾನಗರ ಹೊರ ಠಾಣೆ ಪೊಲೀಸರು ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ, ಅಷ್ಟ​ರಲ್ಲೇ ಮೃತ​ಪ​ಟ್ಟಿ​ದ್ದಾ​ನೆ.

ಮದುವೆ ಸಂಭ್ರಮಾಚರಣೆ ವೇಳೆ  ಸಿಡಿದ ಗುಂಡು ಯುವಕನ ಪ್ರಾಣ ಹೊತ್ತೊಯ್ತು!

ಈ ಕುರಿತು ಪ್ರತಿಕ್ರಿಯೆ ನೀಡಿದ ಕಸಬಾಪೇಟೆ ಇನ್ಸಪೆಕ್ಟರ್‌ ರತನ್‌ಕುಮಾರ ಜೀರಿಗ್ಯಾಳ, ಶಾರುಖ್‌ ಮೇಲೆ ಹಲ್ಲೆ ನಡೆಸಿದವರು ಆತನ ಸ್ನೇಹಿತರು ಎಂದು ತಿಳಿದು ಬಂದಿದ್ದು, ತಮ್ಮ ತಮ್ಮಲ್ಲಿ ನಡೆದ ಗಲಾಟೆಯ ನಡುವೆ ಹೊಡೆದಾಡಿಕೊಂಡಿದ್ದಾರೆ. ರೌಡಿಶೀಟರ್‌ ಸಲೀಂ ಬಳ್ಳಾರಿ ಮತ್ತವರ ತಂಡದ ಹೆಸರು ಕೇಳಿಬಂದ ಹಿನ್ನೆಲೆಯಲ್ಲೂ ತನಿಖೆ ನಡೆಸಿದ್ದೇವೆ. ಈವರೆಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸ್ಥಳ ಪರಿಶೀಲನೆ ಮುಂದುವರಿಸಿದ್ದೇವೆ ಎಂದರು. ಈ ಸಂಬಂಧ ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.