ಪ್ರೀತಿಸಿದವಳು ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಮನೆಯಲ್ಲಿ‌ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ಜು.24): ಪ್ರೀತಿಸಿದವಳು ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಮನೆಯಲ್ಲಿ‌ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಯುವ ಮುನ್ನ ಆಡಿಯೊ ಮಾಡಿ ಯುವಕ ಸೂಸೈಡ್ ಮಾಡಿಕೊಂಡಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ಯುವಕನನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಜುಲೈ 23ರಂದು ಈ ಘಟನೆ ನಡೆದಿದೆ. ಮಡಿವಾಳದ ಮಾರುತಿ ನಗರದಲ್ಲಿ ಮಣಿಕಂಠ ವಾಸವಾಗಿದ್ದ. ಕಳೆದ‌ ಆರು ತಿಂಗಳ ಹಿಂದೆ ಯುವತಿಯನ್ನ ಪ್ರೀತಿಸುತ್ತಿದ್ದ‌. ಈ ಪ್ರೀತಿಗೆ ಯುವತಿಯಿಂದಲೂ‌ ಒಪ್ಪಿಗೆಯಿತ್ತು ಎನ್ನಲಾಗಿದೆ. ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು‌ ಮೂಡಿ ದೂರವಾಗಿದ್ದರು. ಪ್ರೀತಿಯ ಕೊರಗಿನಲ್ಲಿ ಮಣಿಕಂಠ ಕಾಲ‌ ಕಳೆಯುತ್ತಿದ್ದ. ಜುಲೈ 23ರಂದು ಮನೆಗೆ ಬಂದ ಮಣಿಕಂಠ ಮಲಗುವುದಾಗಿ ರೂಮ್ ಗೆ ಹೋಗಿದ್ದ. ಎಷ್ಟೊತ್ತಾದರೂ ಬಾಗಿಲು ತಟ್ಟಿದ್ದರೂ‌ ಕದ ತೆರೆದಿರುವುದನ್ನು ಕಂಡ ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ‌ ಸಂಬಂಧ‌ ಮಡಿವಾಳ‌ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ನೇಣಿಗೆ ಶರಣು
ಹೊಳವನಹಳ್ಳಿ: ಸಾಂಸಾರಿಕ ಜೀವನದಲ್ಲಿ ಮನನೊಂದು ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಮಾವತ್ತೂರು ಗ್ರಾಮದ ಹನುಮಂತರಾಯಪ್ಪ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಾಂಸಾರಿಕ ಜೀವನದಲ್ಲಿ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ್‌ ಪಿಎಸ್‌ಐ ಮಹಾಲಕ್ಷ್ಮಮ್ಮ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಪ್ರೀತಿ ಮಾಡಲ್ಲ ಎಂದ ನರ್ಸ್‌ ಕೊಂದು ಯುವಕ ಆತ್ಮಹತ್ಯೆ: ಪ್ರೀತಿಗೆ ‘ಬ್ರೇಕ್‌ ಅಪ್‌’ ಹೇಳಿದ ಪ್ರೇಯಸಿಯನ್ನು ಪ್ರಿಯಕರ ಕತ್ತು ಹಿಸುಕಿ ಕೊಲೆ ಮಾಡಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ ಎಂಬಾತ ಮದ್ಲೂರು ಗ್ರಾಮದ ರೇಣುಕಾಳನ್ನು ಹತ್ಯಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೇಣುಕಾ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದಳು. ರಾಮಚಂದ್ರ ಕಿತ್ತೂರು ರಾಣಿ ಚನ್ನಮ್ಮ ವಿವಿಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದು, ಇಬ್ಬರ ಕುಟುಂಬಗಳಿಗೆ ಪರಿಚಯ ಕೂಡ ಇತ್ತು. ಆದರೆ ಇಬ್ಬರ ನಡುವಿನ ವಿರಸವೇ ಸಾವಿಗೆ ಕಾರಣ ಎಂದು ರಾಮಚಂದ್ರ ಡೆತ್‌ನೋಟ್‌ ಬರೆದಿಟ್ಟಿದ್ದಾನೆ.