ತಮಿಳುನಾಡಿನ ಸೇಲಂ ಮೂಲದ ಶರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು. ರೇಸ್‌ಕೋರ್ಸ್ ರಸ್ತೆಯ ರೆನೈಸನ್ಸ್‌ ಹೋಟೆಲ್‌ನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು 

ಬೆಂಗಳೂರು(ಏ.09):  ನಗರದ ರೇಸ್‌ಕೋರ್ಸ್‌ ರಸ್ತೆಯ ಪ್ರತಿಷ್ಠಿತ ಹೋಟೆಲ್‌ವೊಂದರ 19ನೇ ಮಹಡಿಯಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಮಿಳುನಾಡಿನ ಸೇಲಂ ಮೂಲದ ಶರಣ್ ಕುಮಾರ್(27) ಆತ್ಮಹತ್ಯೆ ಮಾಡಿಕೊಂಡವರು. ರೇಸ್‌ಕೋರ್ಸ್ ರಸ್ತೆಯ ರೆನೈಸನ್ಸ್‌ ಹೋಟೆಲ್‌ನಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಶರಣ್ ಕುಮಾ‌ರ್ ಏ.6ರಂದು ರೆನೈಸನ್ಸ್ ಹೋಟೆಲ್ ಗೆ ಬಂದು ಒಂದು ದಿನಕ್ಕೆ ರೂಮ್ ಬಾಡಿಗೆಗೆ ಪಡೆದಿದ್ದ. ಭಾನುವಾರವೇ ರೂಮ್ ಖಾಲಿ ಮಾಡಬೇಕಿತ್ತು. ಆದರೆ, ಮತ್ತೆರಡು ದಿನ ಇರುವುದಾಗಿ ಶರಣ್ ಕುಮಾರ್ ಹೋಟೆಲ್ ಗೆ ಸಿಬ್ಬಂದಿಗೆ ತಿಳಿಸಿದ್ದ. ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಹೋಟೆಲ್‌ನ 19ನೇ ಅಂತಸ್ತಿನ ಬಾಲ್ಕನಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆನ್‌ಲೈನ್ ವಂಚನೆಗೆ 2 ಲಕ್ಷ ಕಳೆದುಕೊಂಡ ಬಾಲಕ ಆತ್ಮಹತ್ಯೆ; ಪೋಷಕರು ಮಾಡಬೇಕಾದ್ದೇನು?

ಜೋರಾದ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಹೊರಗೆ ಓಡಿ ಬಂದು ನೋಡಿದಾಗ ಶರಣ್ ಕುಮಾ‌ರ್ ಮೃತದೇಹ ರಕ್ತಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ವಿಷಯ ತಿಳಿದು ಹೈಗೌಂಡ್ಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಮೃತ ಶರಣ್ ಕುಮಾರ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತ ಉಳಿದುಕೊಂಡಿದ್ದ ರೂಮ್‌ನಲ್ಲಿಯೂ ಸದ್ಯಕ್ಕೆ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ನಗರಕ್ಕೆ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.