Lover Commit Suicide: ಪ್ರೇಮಿ ಸಾವಿವ ಸುಳ್ಳು ಸುದ್ದಿಗೆ ಪ್ರೇಯಸಿ ಬಲಿ..!
* ತಮ್ಮ ಪ್ರೀತಿ ನಿರಾಕರಿಸಿದ್ದ ಪ್ರಿಯತಮೆಯ ಮನೆಯವರ ಒಲಿಸಲು ಯುವಕನ ನಾಟಕ
* ಪೊಲೀಸ್ ಹೆಸರಲ್ಲಿ ಸ್ನೇಹಿತನ ಮೂಲಕ ಹುಸಿ ಕರೆ
* ಪ್ರಿಯತಮನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಪ್ಪಾಗಿ ಭಾವಿಸಿ ಯುವತಿ ಆತ್ಮಹತ್ಯೆ
ಬೆಂಗಳೂರು(ಡಿ.17): ತಮ್ಮ ಮದುವೆಗೆ ವಿರೋಧಿಸಿದ್ದ ಪ್ರಿಯತಮೆ ಕುಟುಂಬದವರ ಒಲೈಕೆಗೆ ಪೊಲೀಸ್(Police) ಹೆಸರಿನಲ್ಲಿ ಗೆಳೆಯನಿಂದ ಯುವಕನೊಬ್ಬ ಮಾಡಿದ ಹುಸಿ ಕರೆ ಕೊನೆಗೆ ಪ್ರಿಯತಮೆ ಸಾವಿಗೆ ಕಾರಣವಾದ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಿದರಕಲ್ಲು ಸಮೀಪ ಬುಧವಾರ ನಡೆದಿದೆ.
ಪ್ರಿಯಕರ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿ ನಂಬಿ ದೊಡ್ಡಬಿದರಕಲ್ಲು ಸಮೀಪದ ಸುವರ್ಣ ನಗರದ ನಿವಾಸಿ ಸಾಕಮ್ಮ(24) ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಸುಳ್ಳು ಕರೆ ಮಾಡಿಸಿ ಪ್ರಿಯತಮೆ ಜೀವಕ್ಕೆ ಎರವಾದ ಆರೋಪದ ಮೇರೆಗೆ ಮೃತಳ ಪ್ರಿಯಕರ ಕಮಲಾ ನಗರದ ಅರುಣ್ ಹಾಗೂ ಆತನ ಗೆಳೆಯ ಗೋಪಾಲ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
Bengaluru Crime News : ಅಂಗವಿಕಲ ಮಗನ ಸಂಪಿಗೆ ಎಸೆದು ಕೊಂದು ತಂದೆ ಆತ್ಮಹತ್ಯೆ
ಹಾಸನ(Hassan) ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಾಕಮ್ಮ ಹಾಗೂ ಅರುಣ್, ಯಶವಂತಪುರ ಸಮೀಪದ ಮೆಟ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೆಡೆ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಸ್ನೇಹವಾಗಿ ಬಳಿಕ ಪ್ರೇಮಕ್ಕೆ(Love) ತಿರುಗಿತ್ತು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು, ಕೊನೆಗೆ ಮದುವೆಯಾಗಲು(Marriage) ನಿರ್ಧರಿಸಿದ್ದರು. ಅಂತೆಯೇ ತಮ್ಮ ಮನೆಯಲ್ಲಿ ತಮ್ಮ ಪ್ರೇಮ ವಿಚಾರವನ್ನು ಇಬ್ಬರು ಪ್ರಸ್ತಾಪಿಸಿದ್ದರು. ಆದರೆ ಈ ಪ್ರೇಮ ವಿವಾಹಕ್ಕೆ(Love Marriage) ಎರಡು ಕುಟುಂಬಗಳು ವಿರೋಧಿಸಿವೆ ಎಂದು ಪೊಲೀಸರು ಹೇಳಿದ್ದಾರೆ.
ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದ ಸಾಕಮ್ಮ, ದೊಡ್ಡಬಿದರಕಲ್ಲು ಹತ್ತಿರದ ಸುವರ್ಣ ನಗರದಲ್ಲಿರುವ ತನ್ನ ತಂಗಿಯ ಮನೆಯಲ್ಲಿ ನೆಲೆಸಿದ್ದಳು. ಕೊನೆಗೆ ಪಟ್ಟುಹಿಡಿದು ತನ್ನ ಕುಟುಂಬದವರನ್ನು ಒಪ್ಪಿಸಿದ ಅರುಣ್, ಬಳಿಕ ಸಾಕಮ್ಮ ಕುಟುಂಬದವರನ್ನು ಭೇಟಿಯಾಗಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದ. ಸಾಕಮ್ಮರ ಪೋಷಕರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಈಕೆ 2ನೇ ಮಗಳಾಗಿದ್ದಳು. ಆಕೆಯ ತಂಗಿ ಪ್ರೀತಿಸಿ ವಿವಾಹವಾಗಿದ್ದ ಕಾರಣ, ಸಾಕಮ್ಮಳ ಪ್ರೀತಿಗೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಕಮ್ಮಳ ತಂಗಿ ಮತ್ತು ಆಕೆಯ ಗಂಡ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಸಾಕಮ್ಮ ಮನೆಯವರ ಒಲೈಕೆಗೆ ತನ್ನ ಪರಿಚಿತರ ಮೂಲಕ ಆತ ಒತ್ತಡ ಹೇರುತ್ತಿದ್ದ. ಆದರೆ ಇದ್ಯಾವುದಕ್ಕೂ ಬಗ್ಗದ ಅವರು ಹಠ ಮುಂದುವರೆಸಿದ್ದರು ಎನ್ನಲಾಗಿದೆ.
ಜೀವವೇ ಬಲಿ:
ಕೊನೆಗೆ ಪೊಲೀಸರ ಹೆಸರಿನಲ್ಲಿ ಸಾಕಮ್ಮ ಕುಟುಂಬದವರನ್ನು ಬೆದರಿಸಿ ಮದುವೆಗೆ ಒಪ್ಪಿಸಲು ಅರುಣ್ ಯೋಜಿಸಿದ್ದ. ಅದರಂತೆ ಸಾಕಮ್ಮ ಅವರ ಭಾವನಿಗೆ ಬುಧವಾರ ಬೆಳಗ್ಗೆ ಬಸವೇಶ್ವರ ನಗರ ಪೊಲೀಸರ ಹೆಸರಿನಲ್ಲಿ ತನ್ನ ಗೆಳೆಯ ಗೋಪಾಲ್ ಮೂಲಕ ಅರುಣ್ ಕರೆ ಮಾಡಿಸಿದ್ದ. ‘ನಾನು ಬಸವೇಶ್ವರ ನಗರದ ಪೊಲೀಸ್ ಮಾತನಾಡುತ್ತಿರುವುದು. ನಮ್ಮ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ಅರುಣ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನಿಗೆ ನಿಮ್ಮ ನಾದಿನಿ ಸಾಕಮ್ಮಳನ್ನು ಕೊಟ್ಟು ವಿವಾಹ ಮಾಡದೆ ಹೋದರೆ ನಿಮ್ಮ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗುತ್ತದೆ. ನೀವು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಗೋಪಾಲ್ ಬೆದರಿಸಿದ್ದ. ಈ ಕರೆಯನ್ನು ನಂಬಿದ ಸಾಕಮ್ಮ ಭಾವ, ಮನೆಯಲ್ಲಿ ಅರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದರು. ತನ್ನ ಪ್ರಿಯಕರ ಆತ್ಮಹತ್ಯೆ ವಿಚಾರ ತಿಳಿದು ಆಘಾತಗೊಂಡ ಸಾಕಮ್ಮ, ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Woman Suicide: ದಂಪತಿ ನಡುವೆ ಕೌಟುಂಬಿಕ ಜಗಳ: ಪತ್ನಿ ಆತ್ಮಹತ್ಯೆಗೆ ಶರಣು
ಪ್ರಿಯಕರನಿಲ್ಲದೇ ಬದುಕಲು ಸಾಧ್ಯವಿಲ್ಲ
ಮೃತಳ ಕೋಣೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ಅರುಣ್ ಜತೆ ಮದುವೆಗೆ ಕುಟುಂಬದವ ವಿರೋಧದಿಂದ ನೊಂದಿದ್ದಾಗಿ ಸಾಕಮ್ಮ ಹೇಳಿದ್ದಾಳೆ. ಪ್ರಿಯಕರ ಅರುಣ್ ಇಲ್ಲದೆ ನನಗೆ ಬದುಕು ಸಾಧ್ಯವಿಲ್ಲ. ಆತ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ತಾನು ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ.
ಈ ಬಗ್ಗೆ ತನಿಖೆ ನಡೆಸಿದ ಪೀಣ್ಯ ಪೊಲೀಸರು, ಮೃತಳ ಭಾವನಿಗೆ ಬಂದಿದ್ದ ಕೊನೆ ಕರೆ ಆಧರಿಸಿ ಗೋಪಾಲ್‌ನನ್ನು ವಶಕ್ಕೆ ಪಡೆದು ಆತ್ಮಹತ್ಯೆ ಸುಳ್ಳಿನ ಕತೆ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಿ ಒಂದು ಅಮಾಯಕಳ ಜೀವನ ಅಂತ್ಯವಾಗಿತ್ತು. ಬಳಿಕ ಸಾಕಮ್ಮ ತಾಯಿ ನೀಡಿದ ದೂರಿನ ಮೇರೆಗೆ ಅರುಣ್ ಹಾಗೂ ಗೋಪಾಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.