Bengaluru Breaking News: ಊಟಕ್ಕೆಂದು ಬ್ರಿಗೇಡ್‌ ರೋಡಿನ ಶಾಪಿಂಗ್‌ ಕಾಂಪ್ಲೆಕ್ಸ್‌ಗೆ ಬಂದಿದ್ದ ಯುವ ಪ್ರೇಮಿಗಳು ಕಾಲು ಜಾರಿ ನಾಲ್ಕನೇ ಮಹಡಿಯಿಂದ ಬಿದ್ದಿದ್ದಾರೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. 

ಬೆಂಗಳೂರು ಮೇ 21: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಯುವ ಪ್ರೇಮಿಗಳಿಬ್ಬರು ಊಟಕ್ಕೆಂದು ಬ್ರಿಗೇಡ್‌ ರೋಡ್‌ನ ಶಾಪಿಂಗ್‌ ಕಾಂಪ್ಲೆಕ್ಸ್‌ ಒಂದಕ್ಕೆ ಬಂದಾಗ, ಕಾಲು ಜಾರಿ ಬಿದ್ದಿದ್ದಾರೆ. ನಾಲ್ಕನೇ ಮಹಡಿಯ ಮೆಟ್ಟಿಲಿಂದ ಜಾರಿ ಬಿದ್ದು ಯುವತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಮತ್ತು ಯುವಕನ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಕೂಕ್‌ಟೌನ್‌ನ ನಿವಾಸಿ ಲಿಯಾ (18) ಮೃತಪಟ್ಟ ಯುವತಿ ಎಂದು ಪೊಲೀಸರು ಗುರುತಿಸಿದ್ದಾರೆ. ಇನ್ನು ಹುಡುಗ ಕೂಡ 18 ವರ್ಷದವನಾಗಿದ್ದು ಅವನ ಹೆಸರು ಕ್ರಿಸ್‌ ಪೀಟರ್‌ ಎಂದು ಗುರುತಿಸಲಾಗಿದೆ. ಹುಡುಗ ಬೆಂಗಳೂರಿನ ಎಚ್‌ಎಎಲ್‌ ನಿವಾಸಿಯಾಗಿದ್ದು, ಇಬ್ಬರೂ ಸೆಂಟ್‌ ಜೋಸೆಫ್‌ ಕಾಮರ್ಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

ಲಿಯಾ ಮತ್ತು ಕ್ರಿಸ್‌ ಪೀಟರ್‌ ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದವರು. ಇಂದು ಮದ್ಯಾಹ್ನ ಊಟಕ್ಕೆಂದು ಬ್ರಿಗೇಡ್‌ ರಸ್ತೆಯ ಶಾಪಿಂಗ್‌ ಕಾಂಪ್ಲೆಕ್ಸ್‌ ಒಂದಕ್ಕೆ ಬಂದಿದ್ದಾರೆ. ಅಲ್ಲಿ ಊಟ ಮುಗಿಸಿ, ವಾಶ್‌ರೂಂಗೆ ತೆರಳಿ ಕೆಳಕ್ಕೆ ಇಳಿಯುವಾಗ ಇಬ್ಬರೂ ಮೆಟ್ಟಿಲಿನಿಂದ ಜಾರಿದ್ದಾರೆ. ಅಚಾನಕ್ಕಾಗಿ ಬಿದ್ದ ಕಾರಣ ಅವರನ್ನು ಯಾರೂ ರಕ್ಷಿಸಲೂ ಸಾಧ್ಯವಾಗಲಿಲ್ಲ. ಹುಡುಗಿ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಕ್ರಿಸ್‌ ಪೀಟರ್‌ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ. 

ಘಟನೆಯ ನಂತರ ಯುವತಿಯನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ತಲುಪುವುದರೊಳಗೆ ಆಕೆ ಮೃತಪಟ್ಟಿದ್ದಾಳೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಯುವತಿ ಮೊದಲು ಜಾರಿದ್ದಾಳೆ, ಅವಳನ್ನು ಹಿಡಿಯಲು ಹೋದ ಹುಡುಗ ಕೂಡ ಅವಳ ಜತೆಗೇ ಕೆಳಕ್ಕೆ ಬಿದ್ದಿದ್ದಾನೆ. ಕೆಳಗೆ ಬೀಳುವಾಗ ಯುವತಿಯ ಮೇಲೆ ಯುವಕ ಬಿದ್ದ ಕಾರಣ ಆತ ಜೀವಂತ ಉಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಪ್ರತಿಷ್ಠಿತ ಸೆಂಟ್‌ ಜೋಸೆಫ್ಸ್‌ ಕಾಮರ್ಸ್‌ ಕಾಲೇಜಿನಲ್ಲಿ ಎರಡನೇ ವರ್ಷದ ಡಿಗ್ರೀ ಓದುತ್ತಿದ್ದರು. 

ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ದರೋಡೆ, ಸಹಾಯ ಕೇಳುವ ನೆಪದಲ್ಲಿ ಬಂದವರಿಂದ ಕೃತ್ಯ

ಪೊಲೀಸರಿಗೆ ಯುವಕ ಹೇಳಿದ್ದೇನು?:

ಘಟನೆ ಬಗ್ಗೆ ಪೊಲೀಸರ ಜತೆ ಮಾತನಾಡಿರುವ ಹುಡುಗ ಕ್ರಿಸ್‌ ಪೀಟರ್‌, ಲಿಯಾ ಮತ್ತು ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಇಂದು ಮೂರನೇ ಶನಿವಾರವಾದ್ದರಿಂದ ರಜೆಯಿತು. ಮನೆಯಲ್ಲೇ ಕುಳಿತು ಬೇಜಾರಾದ ಕಾರಣ, ಶಾಪಿಂಗ್‌ ಹೋಗೋಣವೆಂದು ಲಿಯಾಳನ್ನು ಕರೆದೆ. ಸಂಜೆ ಸ್ನೇಹಿತನೊಬ್ಬನ ಹುಟ್ಟುಹಬ್ಬ ಆಚರಣೆ ಬ್ರಿಗೇಡ್‌ ರಸ್ತೆಯ ಪಬ್‌ ಒಂದರಲ್ಲಿ ಇಟ್ಟುಕೊಳ್ಳಲಾಗಿತ್ತು. ಅದಕ್ಕಾಗಿಯೇ ಬ್ರಿಗೇಡ್‌ ರಸ್ತೆಗೆ ಶಾಪಿಂಗ್‌ ಹೋಗಿ ಅಲ್ಲೇ ಊಟ ಮಾಡಿದೆವು ಎಂದು ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ:22ನೇ ಮಹಡಿಯಿಂದ ಜಿಗಿದು ಯುವಕ ಯುವತಿ ಆತ್ಮಹತ್ಯೆ

ಶಾಪಿಂಗ್‌ ಮುಗಿಸಿ ಗೆಳೆಯನ ಹುಟ್ಟುಹಬ್ಬ ಆಚರಣೆ ಮಾಡಲು ಹೊರಟಿದ್ದ ಯುವ ಪ್ರೇಮಿಗಳು ದುರಂತ ಅಂತ್ಯಕಂಡಿದ್ದಾರೆ. ಒಂದೆಡೆ ಲಿಯಾ ಪ್ರಾಣವನ್ನೇ ಬಿಟ್ಟರೆ, ಕ್ರಿಸ್‌ ಪೀಟರ್‌ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಅತ್ತ ಗೆಳೆಯರು ಕೂಡ ಹುಟ್ಟುಹಬ್ಬದ ಸಂತಸ ಬದಿಗೊತ್ತಿ, ನೋವಿನಲ್ಲಿದ್ದಾರೆ.