Asianet Suvarna News Asianet Suvarna News

80000 ಸಂಬ್ಳದ ಕೆಲ್ಸ ಬಿಟ್ಟು ಸರ್ಕಾರಿ ನೌಕ್ರಿಗೆ ಅಡ್ಡದಾರಿ ಹಿಡಿದವ ಜೈಲಿಗೆ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ನಿಗಮ, ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗಾಗಿ ನಡೆಸುತ್ತಿರುವ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿದ ಆರೋಪದ ಮೇಲೆ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ಆಕಾಶ ಮಂಠಾಳೆ, ಇಂಜಿನಿಯರಿಂಗ್‌ ಪದವೀಧರ. 80 ಸಾವಿರ ಸಂಬಳದ ಖಾಸಗಿ ನೌಕರಿ ಬಿಟ್ಟು, ಸರಕಾರಿ ನೌಕರಿ ಆಸೆಯಿಂದ ಅಡ್ಡದಾರಿ ಹಿಡಿದು ಈಗ ಜೈಲು ಸೇರುವಂತಾಗಿದೆ.

Yadagiri KEA Exam Irregularity Accused Akash arrested rav
Author
First Published Oct 30, 2023, 5:32 AM IST

ಕಲಬುರಗಿ (ಅ.30) :  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ನಿಗಮ, ಮಂಡಳಿಯಲ್ಲಿನ ವಿವಿಧ ಹುದ್ದೆಗಳಿಗಾಗಿ ನಡೆಸುತ್ತಿರುವ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿದ ಆರೋಪದ ಮೇಲೆ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ಆಕಾಶ ಮಂಠಾಳೆ, ಇಂಜಿನಿಯರಿಂಗ್‌ ಪದವೀಧರ. 80 ಸಾವಿರ ಸಂಬಳದ ಖಾಸಗಿ ನೌಕರಿ ಬಿಟ್ಟು, ಸರಕಾರಿ ನೌಕರಿ ಆಸೆಯಿಂದ ಅಡ್ಡದಾರಿ ಹಿಡಿದು ಈಗ ಜೈಲು ಸೇರುವಂತಾಗಿದೆ.

ಅಫಜಲ್ಪುರದಲ್ಲಿರುವ ಮಹಾಂತೇಶ್ವರ ಸಂಸ್ಥೆಯ ಕಾಲೇಜಲ್ಲಿ ಪರೀಕ್ಷೆ ಬರೆಯಲು ಬರುತ್ತಿದ್ದಂತೆಯೇ ಪೊಲೀಸರ ಕಾರ್ಯಾಚರಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಆತ ಹಲವು ಆಸಕ್ತಿಕರ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾನೆ.

ಎಸ್‌ಐ ಪರೀಕ್ಷೆ ಅಕ್ರಮ ಸಂಚುಕೋರನೇ ಕೆಇಎ ಅಕ್ರಮಕ್ಕೂ ಕಿಂಗ್‌ಪಿನ್‌!

ಸರಕಾರಿ ನೌಕರಿ ಮೇಲಿನ ಆಸೆಯಿಂದ ಅಡ್ಡದಾರಿ ಹಿಡಿದ ಯುವಕ:

ಆಕಾಶ್‌, ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವೀಧರ, ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನ ಭವಾನಿ ಕಾಲೋನಿ ನಿವಾಸಿ. ಬೆಂಗಳೂರಲ್ಲಿ ಖಾಸಗಿ ಕಂಪನಿಯೊಂದರಲ್ಲಿ 80 ಸಾವಿರ ಸಂಬಳದ ನೌಕರಿ ಹೊಂದಿದ್ದ ಈತನಿಗೆ ಸರಕಾರಿ ನೌಕರಿ ಮೇಲಾಸೆ. ಹೇಗಾದರೂ ಮಾಡಿ ನೌಕರಿ ಗಿಟ್ಟಿಸಲೇಬೇಕೆಂದು ನಿರ್ಧರಿಸಿದ್ದ.

25 ಲಕ್ಷಕ್ಕೆ ಡೀಲ್‌, 8 ಲಕ್ಷ ಅಡ್ವಾನ್ಸ್‌ ಪಾವತಿ

ತನ್ನ ಮಾವನಾದ ವಿಜಯಕುಮಾರ್‌ ಬಿರಾದಾರ್‌ ಜೊತೆ ಸೇರಿ ತಾನು ಅರ್ಜಿ ಹಾಕಿದ್ದ ಕೆಇಎ ಪರೀಕ್ಷೆಯಲ್ಲಿ ಪಾಸಾಗಲು ಬ್ಲೂಟೂತ್‌ ನೆರವು ಪಡೆಯಲೆಂದೇ ಅಫಜಲ್ಪುರದ ರುದ್ರಗೌಡ ಪಾಟೀಲ್‌ರನ್ನು ಭೇಟಿಯಾಗಿ 25 ಲಕ್ಷ ರುಪಾಯಿಗೆ ಡೀಲ್‌ ಕುದುರಿಸಿದ್ದಾಗಿ ಹೇಳಿದ್ದಾನೆ. ಡೀಲ್‌ನ 25 ಲಕ್ಷ ರುಪಾಯಿ ಹಣದಲ್ಲಿ ಅದಾಗಲೇ 8 ಲಕ್ಷ ರು ಮುಂಗಡ ಹಣವನ್ನು ರುದ್ರಗೌಡನಿಗೆ ಕಲಬುರಗಿಯ ಅವರ ಮನೆಯಲ್ಲೇ ಕೊಟ್ಟು ಬ್ಲೂಟೂತ್‌ ಉಪಕರಣವನ್ನು ಆತನಿಂದ ಪಡೆದಿದ್ದಾನೆ. ಪರೀಕ್ಷೆಯ ದಿನ ಸರಿ ಉತ್ತರಗಳನ್ನು ಬ್ಲೂಟೂತ್‌ ಮೂಲಕ ಪೂರೈಸಬೇಕು. ನೌಕರಿಯಾದ ನಂತರ ಇನ್ನುಳಿದ ಹಣ ಪಾವತಿಸುವ ಬಗ್ಗೆ ಆರ್‌ಡಿಪಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾಗಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ.

ಡೀಲ್‌ ಮಾಡಿಕೊಂಡು ಪರೀಕ್ಷೆಗೆ ಬಂದಿದ್ದ ಈತ, ಪರೀಕ್ಷಾ ಕೇಂದ್ರದೊಳಗೆ ಹೋಗುವ ಮುನ್ನವೇ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಇದೀಗ ಜೈಲು ಸೇರಿದ್ದಾನೆ.

ಕೆಇಎ ಪರೀಕ್ಷೆಯ 2ನೇ ದಿನ ತುಂಬಾ ಕಟ್ಟುನಿಟ್ಟು

ಯಾದಗಿರಿ/ಕಲಬುರಗಿ:  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವಿವಿಧ ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗಾಗಿ ನಡೆಯುತ್ತಿರುವ ಪರೀಕ್ಷೆಯಲ್ಲಿ ಬ್ಲೂಟೂತ್‌ ಅಕ್ರಮ ನಡೆದ ಹಿನ್ನೆಲೆಯಲ್ಲಿ ಎಚ್ಚೆತ್ತ ಆಡಳಿತ, ಭಾನುವಾರ 2ನೇ ದಿನದ ಪರೀಕ್ಷೆಯನ್ನು ಪೊಲೀಸ್‌ ಸರ್ಪಗಾವಲಿನಲ್ಲಿ ನಡೆಸಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ಮೆಟಲ್‌ ಡಿಟೆಕ್ಟರ್‌ ಗಳ ಮೂಲಕ ಸಾದ್ಯಂತವಾಗಿ ತಪಾಸಿಸಿ ಒಳಗೆ ಬಿಡಲಾಯಿತು. ವಿಶೇಷವಾಗಿ ಪ್ರತಿಯೊಬ್ಬ ಅಭ್ಯರ್ಥಿಯ ಕಿವಿ ತಪಾಸಣೆ ನಡೆಸಲಾಯ್ತು. ಕೈಗಡಿಯಾರ, ಬಳೆ, ಕಿವಿಯೋಲೆ, ಮೂಗುತಿ, ತಾಳಿ, ಫುಲ್ ಶರ್ಟ್, ಶೂಸ್ ಧರಿಸುವಂತಿಲ್ಲ. ವಾಚ್, ಕೀ ಸೇರಿದಂತೆ ಯಾವುದೇ ವಸ್ತುವನ್ನು ಜೇಬಿನಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಲೋಹದ ವಸ್ತುಗಳನ್ನು ಒಳಗೆ ಕೊಂಡೊಯ್ಯದಂತೆ ತಡೆಯಲಾಯಿತು.

ದೂರದ ಊರಿಂದ ಬಂದ ಕೆಲವರು ಫುಲ್‌ ತೋಳ ಅಂಗಿಯನ್ನು ಧರಿಸಿದ್ದರು. ಅವರನ್ನು ಪರೀಕ್ಷಾ ಕೇಂದ್ರದ ಹೊರಗಡೆ ಸಾಲಾಗಿ ನಿಲ್ಲಿಸಲಾಗಿತ್ತು. ಒಂದು ಹಂತದಲ್ಲಿ ಪರೀಕ್ಷಾ ಹಾಲ್‌ನ ಸಿಬ್ಬಂದಿ ಇವರ ಅಂಗಿಯ ತೋಳುಗಳನ್ನೇ ಕತ್ತರಿಸಿ ಹಾಕುವ ನಿರ್ಣಯ ಕೈಗೊಂಡು, ಕತ್ತರಿ ಇತ್ಯಾದಿಗಳನ್ನು ತಂದರಾದರೂ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ ಅದನ್ನು ಕೈಬಿಡಲಾಯ್ತು.

ಬೆಳಗ್ಗೆ 10.30ಕ್ಕೆ ಪರೀಕ್ಷೆ ಇದ್ದರೆ, 2 ಗಂಟೆಗೂ ಮುನ್ನವೇ ತಪಾಸಣೆ ಆರಂಭವಾಗಿತ್ತು. ಹೀಗಾಗಿ, ಪರೀಕ್ಷಾ ಕೇಂದ್ರಗಳ ಹೊರಗೆ ನೂರಾರು ಪರೀಕ್ಷಾರ್ಥಿಗಳು ಸಾಲು, ಸಾಲಾಗಿ ನಿಂತ ದೃಶ್ಯ ಕಂಡು ಬಂತು. ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು.

Follow Us:
Download App:
  • android
  • ios