ಮಾಜಿ ಸಚಿವ MB Patil ಮನೆಯಲ್ಲಿ ವಾಚ್, ವಿದೇಶಿ ಕರೆನ್ಸಿ ಕದ್ದ ಕೆಲಸಗಾರ!
ಮಾಜಿ ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ವಾಚ್, ವಿದೇಶಿ ಕರೆನ್ಸಿ ಕದ್ದು ಕೆಲಸಗಾರ ಒಡಿಶಾಗೆ ಪಲಾಯನಗೈದಿರುವ ಘಟನೆ ನಡೆದಿದ್ದು, ಸದಾಶಿವ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದ್ದಾರೆ.
ಬೆಂಗಳೂರು (ಆ.2): ಇತ್ತೀಚೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಬೆಲೆ ಬಾಳುವ ಕೈ ಗಡಿಯಾರಗಳು ಹಾಗೂ ವಿದೇಶಿ ಕರೆನ್ಸಿ ಕದ್ದು ಪರಾರಿಯಾಗಿದ್ದ ಮನೆ ಕೆಲಸಗಾರನನ್ನು ಸದಾಶಿವ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಜಯಂತ್ ದಾಸ್ ಬಂಧಿತನಾಗಿದ್ದು, ಆರೋಪಿಯಿಂದ .1.30 ಲಕ್ಷ ಮೌಲ್ಯದ ಐದು ಕೈಗಡಿಯಾರಗಳು, .10 ಸಾವಿರ ಬೆಲೆಯ ಮೊಬೈಲ್ ಹಾಗೂ ವಿದೇಶಿ ಕರೆನ್ಸಿ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಪಾಟೀಲ್ ಅವರ ಕುಟುಂಬಕ್ಕೆ ತಿಳಿಯದಂತೆ ಕಳ್ಳತನ ಮಾಡಿ ಆರೋಪಿ, ತನ್ನೂರಿಗೆ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸದಾಶಿವ ನಗರ 18ನೇ ಕ್ರಾಸ್‌ನಲ್ಲಿ ನೆಲೆಸಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ದಾಸ್ ಸೇರಿದಂತೆ ಐವರು ಕೆಲಸ ಮಾಡುತ್ತಿದ್ದರು. ಆ ಮನೆಯ ಹೊರ ಆವರಣದಲ್ಲೇ ಕೆಲಸಗಾರರಿಗೆ ವಸತಿ ಕಲ್ಪಿಸಲಾಗಿತ್ತು.
ಐದು ವರ್ಷದಿಂದ ಅವರ ಮನೆಯಲ್ಲಿ ದಾಸ್ ಕೆಲಸ ಮಾಡುತ್ತಿದ್ದು, ಒಂದೂವರೆ ತಿಂಗಳ ಹಿಂದೆ ಆತ ಕೆಲಸ ತೊರೆದಿದ್ದ. ಪಾಟೀಲ್ ಅವರಿಗೆ ತಿಳಿಯದಂತೆ ಅವರ ಸಂಗ್ರಹದಲ್ಲಿದ್ದ ವಿದೇಶಿ ಕರೆನ್ಸಿ ಹಾಗೂ ಕೈ ಗಡಿಯಾರಗಳನ್ನು ಆತ ಕಳವು ಮಾಡಿದ್ದ. ಇತ್ತೀಚೆಗೆ ತಮ್ಮ ಸಂಗ್ರಹದಲ್ಲಿದ್ದ ವಿದೇಶಿ ಕರೆನ್ಸಿ ಹಾಗೂ ಕೈ ಗಡಿಯಾರಗಳು ಕಾಣದೆ ಹೋದಾಗ ಅನುಮಾನಗೊಂಡ ಮಾಜಿ ಸಚಿವರು, ಕೆಲಸಗಾರರನ್ನು ವಿಚಾರಿಸಿದಾಗ ದಾಸ್ ಮೇಲೆ ಶಂಕೆ ಮೂಡಿತು. ಈ ಬಗ್ಗೆ ಸದಾಶಿವ ನಗರ ಠಾಣೆಯಲ್ಲಿ ಅವರ ಆಪ್ತ ಸಹಾಯಕ ದೂರು ದಾಖಲಿಸಿದ್ದರು. ಅಂತೆಯೇ ತನಿಖೆ ನಡೆಸಿ ಆರೋಪಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ: ಗೆಳೆಯನನ್ನೇ ಹೊಡೆದು ಹತ್ಯೆ
ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇರೆಗೆ ಗೆಳೆಯನನ್ನು ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಕ್ಷಿ ಗಾರ್ಡನ್ ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನಾ (32) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಗೆಳೆಯ ಸಂತೋಷ್ ಅಲಿಯಾಸ್ ಚುಂಟಿ ಎಂಬಾತನನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಈ ಗೆಳೆಯರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಈ ಹಂತದಲ್ಲಿ ಶ್ರೀನಿವಾಸ್ ತಲೆಗೆ ಆರೋಪಿ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದ. ಹಲ್ಲೆಗೊಳಗಾದ ಶ್ರೀನಿವಾಸ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಭಕ್ಷಿ ಗಾರ್ಡನ್‌ನಲ್ಲೇ ಶ್ರೀನಿವಾಸ್ ಮತ್ತು ಸಂತೋಷ್ ನೆಲೆಸಿದ್ದು, ಹಲವು ವರ್ಷಗಳಿಂದ ಇಬ್ಬರ ನಡುವೆ ಸ್ನೇಹವಿತ್ತು. ಇತ್ತೀಚೆಗೆ ತನ್ನ ಪತ್ನಿ ಜತೆ ಶ್ರೀನಿವಾಸ್ ಒಡನಾಟ ಹೊಂದಿದ್ದಾನೆ ಎಂದು ಶಂಕೆಗೊಂಡು ಸಂತೋಷ್, ಪತ್ನಿ ಸಂಗ ಬಿಡುವಂತೆ ಗೆಳೆಯನಿಗೆ ತಾಕೀತು ಮಾಡಿದ್ದ. ಈ ಎಚ್ಚರಿಕೆ ಬಳಿಕವೂ ಸ್ನೇಹ ಮುಂದುವರೆದಿತ್ತು. ಅಂತೆಯೇ ಭಾನುವಾರ ರಸ್ತೆ ಬದಿ ಟೀ ಕುಡಿಯುತ್ತಿದ್ದ ಶ್ರೀನಿವಾಸ್ ಮೇಲೆ ಏಕಾಏಕಿ ಸಂತೋಷ್ ಗಲಾಟೆ ಶುರು ಮಾಡಿದ್ದಾನೆ. ಈ ಹಂತದಲ್ಲಿ ಇಬ್ಬರ ನಡುವೆ ಮಾತಿನ ಸಮರ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.