ಬೆಂಗಳೂರು ಪೊಲೀಸರು 'ವರ್ಕ್ ಫ್ರಮ್ ಹೋಮ್' ಹೆಸರಿನಲ್ಲಿ ಆನ್‌ಲೈನ್ ವಂಚನೆ ಮಾಡುತ್ತಿದ್ದ 12 ಮಂದಿ ಅಂತರರಾಜ್ಯ ಗ್ಯಾಂಗ್‌ನ ಸದಸ್ಯರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ. ವಂಚಕರು 400ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸಿ, ಜನರಿಗೆ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದರು. ಬ್ಯಾಂಕ್ ಖಾತೆ, ಮೊಬೈಲ್, ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು (ಮೇ 14): 'ವರ್ಕ್ ಫ್ರಮ್ ಹೋಮ್' ಕೆಲಸ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ ಅಂತರರಾಜ್ಯ ಆನ್‌ಲೈನ್ ಗ್ಯಾಂಗ್‌ನ ಚಕ್ರವ್ಯೂಹವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶ ರಾಜ್ಯದಲ್ಲಿ ಸೈಬರ್ ವಂಚನೆ ಮಾಡುವುದಕ್ಕೆ 400ಕ್ಕೂ ಅಧಿಕ ಸಿಮ್ ಕಾರ್ಡ್‌ಗಳನ್ನು ಬಳಸುತ್ತಾ ವಂಚನೆ ಮಾಡುತ್ತಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಂಚನೆಯ ವಿಧಾನ ಹೇಗಿತ್ತು?
ಈ ಗ್ಯಾಂಗ್ ಮೊದಲಿಗೆ ಅನಾಮಧೇಯ ಸಂಖ್ಯೆಯಿಂದ ಜನರಿಗೆ ಸಂದೇಶ ಕಳುಹಿಸುತ್ತದೆ. ನೀವು ಮನೆಯಲ್ಲಿರುವಾಗಲೇ ಕೆಲಸ ಮಾಡಿ (ವರ್ಕ್ ಪ್ರಂ ಹೋಮ್) ದಿನಕ್ಕೆ ₹1,000–₹2,000 ಸಂಪಾದಿಸಿ' ಎಂಬ ಸಂದೇಶವನ್ನು ಕಳಿಸುತ್ತಾರೆ. ಇದಕ್ಕೆ ಜನರು ತುಂಬಾ ಬೇಗನೇ ಆಕರ್ಷಿತರಾಗಿ, ಸಂದೇಶ ಬಂದ ನಂಬರ್‌ಗೆ ಅಥವಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪರ್ಕ ಮಾಡುತ್ತಿದ್ದರು. ಈ ವೇಳೆ ವಾಪಸ್ ಸಂದೇಶ ಕಳಿಸುವ ಹಾಗೂ ಕರೆ ಮಾಡುವ ಜನರನ್ನು ವರ್ಕ್ ಫ್ರಮ್ ಹೋಮ್ ಕೆಲಸಕ್ಕೆ ನೇಮಕ ಆಗಿದ್ದೀರಿ ಎಂದು ತಕ್ಷಣವೇ 800 ರೂ. ಹಣವನ್ನು ಪಾವತಿಸಿ ಜನರ ನಂಬಿಕೆ ಗಳಿಸುತ್ತಾರೆ.
ಇದಾದ ಬಳಿಕ ದಿನ ಕಳೆದಂತೆ ಜನರಿಗೆ ಸುಮಾರು 5 ರಿಂದ 10 ನಿಮಿಷ ವಿಡಿಯೋ ನೋಡುವ ಅಥವಾ ಲೈಕ್ ಮಾಡುವ ಕೆಲಸವನ್ನು ಕೊಟ್ಟು ನಿಮ್ಮ ಹಣ ಹೆಚ್ಚು ಜಮೆ ಆಗಿದೆ. ನೀವು ಈ 'ಹೆಚ್ಚಿನ ಹಣವನ್ನು ಡ್ರಾ ಮಾಡಬೇಕಾದರೆ' ಕಚೇರಿ ಶುಲ್ಕವಾಗಿ ₹10,000 ಪಾವತಿಸಬೇಕೆಂದು ಹೇಳುತ್ತಾರೆ. ಇನ್ನು ಕಂಪನಿ ನಮಗೆ 1 ಸಾವಿರ ರೂ. ಕೊಟ್ಟಿದೆ ಎಂಬ ಧೈರ್ಯದಿಂದ 10 ಸಾವಿರ ರೂ. ಪಾವತಿ ಮಾಡಿದರೆ, ತಕ್ಷಣವೇ 10 ದಿನದ ಕೆಲಸದ ಹಣವೆಂದು ₹20,000 ಮರುಪಾವತಿ ಮಾಡುತ್ತಾರೆ. ಈ ಮೂಲಕ ಜನರೊಂದಿಗೆ ಮತ್ತಷ್ಟು ವಿಶ್ವಾಸ ಹುಟ್ಟಿಸುತ್ತಿದ್ದರು.
ಆ ಬಳಿಕ ' ನೀವು ಕೆಲಸಕ್ಕೆ ಸೇರಿದ ನಂತರ ನಿಮ್ಮ ಕೈ ಕೆಳಗೆ ನೂರಾರು ಜನರು ಕೆಲಸಕ್ಕೆ ಸೇರಿದ್ದು, ನಿಮಗೆ ಕಮೀಷನ್ ಸೇರಿದಂತೆ ಹೆಚ್ಚು ಹಣ ಪಾವತಿ ಮಾಡಬೇಕಿದೆ. ಆದ್ದರಿಂದ, ನಿಮ್ಮ ಕಚೇರಿ ಖಾತೆಯಲ್ಲಿ ₹10 ಲಕ್ಷ ಡಿಪಾಜಿಟ್ ಆಗಿದೆ. ಇದನ್ನು ನಿಮ್ಮ ಬ್ಯಾಂಕ್ ಖಾತೆಗೆ ರಿಲೀಸ್ ಮಾಡಲು ಈ ಬ್ಯಾಂಕ್ ಶುಲ್ಕ, ಪ್ಲಾಟ್‌ಫಾರ್ಮ್‌ಗೆ ಸೇವಾ ಶುಲ್ಕ ಎಂದೆಲ್ಲಾ ಹೇಳಿ 5 ಲಕ್ಷ ರೂ. ಕಟ್ಟಬೇಕು ಎಂದು ಕೇಳುತ್ತಾರೆ. ಇದನ್ನು ನಂಬಿಕೊಂಡು ಲಕ್ಷಾಂತರ ರೂ. ಹಣವನ್ನು ಪಾವತಿ ಮಾಡಿದ ನಂತರ ಜನರ ಸಂಪರ್ಕ ಕಡಿತ ಮಾಡುತ್ತಾರೆ. ಹೀಗೆ, ದಿನಕ್ಕೆ ಸಾವಿರಾರು ಜನರಿಗೆ ಕೋಟ್ಯಂತರ ರೂ. ಹಣವನ್ನು ವಂಚನೆ ಮಾಡುತ್ತಿದ್ದರು. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಕೂಡ ವರ್ಕ್ ಫ್ರಮ್ ಹೋಂ ಕೆಲಸದ ಆಮಿಷಕ್ಕೆ ಒಳಗಾಗಿ ಸುಮಾರು ₹5 ಲಕ್ಷ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.
ಆಡುಗೋಡಿ ಪೊಲೀಸ್ ಠಾಣೆಗೆ ದೂರು, ಪರಿಶೀಲನೆ ಆರಂಭ:
ಬೆಂಗಳೂರಿನ ನಿವಾಸಿಯೊಬ್ಬರು ವರ್ಕ್ ಫ್ರಮ್ ಹೋಮ್ ಕೆಲಸ ವಂಚನೆಗೆ ಒಳಗಾಗಿರುವು ಗೊತ್ತಾಗುತ್ತಿದ್ದಂತೆ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಹಣ ಜಮೆ ಮಾಡಲಾದ ಬ್ಯಾಂಕ್ ಖಾತೆ ಉತ್ತರ ಪ್ರದೇಶ ಮೂಲದವರದ್ದು ಎಂದು ಪತ್ತೆ ಹಚ್ಚಿದರು. ಪೋಲೀಸರು ಬ್ಯಾಂಕ್ ಖಾತೆ ಮಾಲಿಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು. ಆದರೆ, ವಿಚಾರಣೆ ವೇಳೆ ಆ ಎಲ್ಲ ಖಾತೆಗಳು ಮುಂಬೈ ಮೂಲದ ವ್ಯಕ್ತಿಗಳಿಂದ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು.
ಚೈನ್ ಲಿಂಕ್ ರೀತಿಯ ಅಕೌಂಟ್ ಬಳಕೆ ಮತ್ತು ಕಮೀಷನ್ ವ್ಯವಸ್ಥೆ:
ಸೈಬರ್ ವಂಚನೆ ಮಾಡುತ್ತಿದ್ದ ಆರೋಪಿಗಳು ಉತ್ತರ ಪ್ರದೇಶದ ಕಾಲೇಜು ಓದುವ ಮತ್ತು ಇತರೆ ಗ್ರಾಮೀಣ ಪ್ರದೇಶದ ಯುವಕರಿಂದ ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆಗಳನ್ನು ಪಡೆಯುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿ ಖಾತೆಗೆ ₹1,500 ಕಮೀಷನ್ ನೀಡುತ್ತಿದ್ದರು. ರಾಜ್ಯಮಟ್ಟದ ಬ್ಯಾಂಕ್‌ಗೆ ₹20,000 ಹಾಕಿದರೆ ಸ್ಥಳೀಯ ಬ್ಯಾಂಕ್‌ಗೆ ₹3,000 ನೀಡಲಾಗುತ್ತಿತ್ತು. ಈ ರೀತಿಯ ಸರಣಿ ಲಿಂಕ್ ಮೂಲಕ ಹಣವನ್ನು ವರ್ಗಾವಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು.
ಸೈಬರ್ ವಂಚಕರ ಕಚೇರಿ ಮೇಲೆ ದಾಳಿ:
ದೇಶದ ಜನರಿಗೆ ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಆರೋಪಿಗಳ ಸುಳಿವು ಹಿಡಿದು ಹೋದ ಬೆಂಗಳೂರು ಪೊಲೀಸರು ಸೀದಾ ವಂಚಕರು ಕೆಲಸ ಮಾಡುತ್ತಿದ್ದ ಕಚೇರಿ ಗುರುತಿಸಿದ್ದಾರೆ. ಎಲ್ಲ ವಂಚಕರು ಪ್ರಯಾಗ್ ರಾಜ್‌ನ ಕಮಲಾನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದುಬಂದು ಏಕಾಏಕಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 10 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಇವರೊಂದಿಗೆ ವಂಚನೆ ಮಾಡುತ್ತಿದ್ದ ಇನ್ನಿಬ್ಬರನ್ನು ಬೇರೆ ಕಡೆಗಳಿಂದ ಬಂಧಿಸಲಾಗಿದೆ. ಒಟ್ಟಾರೆಯಾಗಿ ಸೈಬರ್ ವಂಚನೆ ಮಾಡುತ್ತಿದ್ದ ಒಟ್ಟು 12 ಮಂದಿ ಬಂಧಿತರು.
ಬಂಧಿತರಿಂದ ವಶಪಡಿಸಿಕೊಳ್ಳಲಾದ ವಸ್ತುಗಳು:
400 ಮೊಬೈಲ್ ಸಿಮ್‌ಗಳು
160 ಎಟಿಎಂ ಕಾರ್ಡ್‌ಗಳು
17 ಚೆಕ್ ಬುಕ್‌ಗಳು
27 ಮೊಬೈಲ್ ಫೋನ್‌ಗಳು
22 ಬ್ಯಾಂಕ್ ಪಾಸ್ ಬುಕ್‌ಗಳು
₹15,000 ನಗದು
ಬಂಧಿತರ ಪಟ್ಟಿ: ಹರ್ಷವರ್ಧನ್, ಸೋನು, ಆಕಾಶ್ ಕುಮಾರ್ ಯಾದವ್, ಗೋರಖ್ ನಾಥ್ ಯಾದವ್, ಸಂಜೀತ್ ಕುಮಾರ್, ಆಕಾಶ್ ಕುಮಾರ್, ಅಮಿತ್ ಯಾದವ್, ಗೌರವ್ ಪ್ರತಾಪ್ ಸಿಂಗ್, ಬ್ರಿಜೇಶ್ ಸಿಂಗ್, ರಾಜ್ ಮಿಶ್ರಾ, ತುಷಾರ್ ಮಿಷ್ರಾ, ಗೌತಮ್ ಶೈಲೇಶ್.


