ರೇಣುಕಾ ಕಳ್ಳರಿಂದ ತಪ್ಪಿಸಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಸ್ಥಳಕ್ಕೆ ಪಿಎಸ್ಐ ಪ್ರವೀಣ ಕೋಟಿ ಭೇಟಿ ನೀಡಿ ಪರಿಶೀಲಿಸಿದ್ದು, ಮಾಂಗಲ್ಯ ಸರ ಸ್ಥಳದಲ್ಲಿಯೇ ಸಿಕ್ಕಿದೆ. ಗಾಯಾಳು ಮಹಿಳೆಯನ್ನು ಬೆಳವಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ಬೈಲಹೊಂಗಲ(ಮಾ.14):  ಮಹಿಳೆಯೊಬ್ಬಳು ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಕಳ್ಳರನ್ನು ಎದುರಿಸಿ ತನ್ನ ಮಾಂಗಲ್ಯ ಸರವನ್ನು ಉಳಿಸಿಕೊಂಡಿರುವ ಘಟನೆ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ರೇಣುಕಾ ಕೆಂಚಪ್ಪ ದೊಡ್ಲಿ(27) ದುಷ್ಕರ್ಮಿಗಳ ಸಂಚಿಗೆ ಪ್ರತಿರೋದ ವ್ಯಕ್ತಪಡಿಸಿ ತನ್ನ ಮಾಂಗಲ್ಯ ಸರವನ್ನು ಉಳಿಸಿಕೊಂಡಿದ್ದಾಳೆ.

ಘಟನೆ ವಿವರ:

ಗ್ರಾಮದ ಹೆದ್ದಾರಿಯಲ್ಲಿ ರೇಣುಕಾ ಕೆಂಚಪ್ಪ ದೊಡ್ಲಿ ಮತ್ತು ಗೀತಾ ಸೋಮಲಿಂಗಪ್ಪ ಕುರಿ ಎಂಬ ಇಬ್ಬರು ಮಹಿಳೆಯರು ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರೇಣುಕಾಳ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ದೋಚಲು ಯತ್ನಿಸಿದ್ದಾರೆ. ಆಗ ರೇಣುಕಾ ಕುತ್ತಿಗೆಗೆ ಕೈ ಹಾಕಿದ ಕಳ್ಳನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಆಗ ಕಳ್ಳ ಚಾಕುವಿನಿಂದ ರೇಣುಕಾಳ ಕುತ್ತಿಗೆ ಮತ್ತು ಕೈಗೆ ಇರಿದಿದ್ದಾನೆ. ಘಟನೆಯಲ್ಲಿ ಮಹಿಳೆಯ ಕೈಗೆ ತೀವ್ರ ಗಾಯವಾಗಿದ್ದು, ಕುತ್ತಿಗೆಗೆ ಕೂಡ ಗಾಯವಾಗಿದೆ. ರಕ್ತ ಸೋರುತ್ತಿದ್ದರೂ ರೇಣುಕಾ ಕೂಡಲೇ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಅಲ್ಲದೇ, ಕಳ್ಳರನ್ನು ಬೆನ್ನಟ್ಟಿದ್ದು, ಆಗ ಕತ್ತಲಲ್ಲಿ ಕಳ್ಳರು ಮರೆಯಾಗಿದ್ದಾರೆ. 

ಬೆಂಗಳೂರು ಹೊರ ವಲಯದಲ್ಲಿ ವಕೀಲರ ಬೆನ್ನಿಗೆ ಚಾಕು ಇರಿದ ದುಷ್ಕರ್ಮಿ!

ರೇಣುಕಾ ಕಳ್ಳರಿಂದ ತಪ್ಪಿಸಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಸ್ಥಳಕ್ಕೆ ಪಿಎಸ್ಐ ಪ್ರವೀಣ ಕೋಟಿ ಭೇಟಿ ನೀಡಿ ಪರಿಶೀಲಿಸಿದ್ದು, ಮಾಂಗಲ್ಯ ಸರ ಸ್ಥಳದಲ್ಲಿಯೇ ಸಿಕ್ಕಿದೆ. ಗಾಯಾಳು ಮಹಿಳೆಯನ್ನು ಬೆಳವಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.