ಪ್ರಿಯಕರನೊಡನೆ ಸೇರಿ ಪತಿ ಕೊಲೆ ಮಾಡಿ ನಾಪತ್ತೆ ಕೇಸ್ ದಾಖಲಿಸಿದ್ದ ಪತ್ನಿ ಅಂದರ್!
Crime News: ಪತ್ನಿಯ ಪ್ರಿಯಕರ ಬಲ್ಲುವಿನ ಆತ್ಮೀಯ ಸ್ನೇಹಿತನಾಗಿದ್ದು, ಆಗಾಗ ಮನೆಗೆ ಬರುತ್ತಿದ್ದನು. ಈ ವೇಳೆ ಬಲ್ಲು ಪತ್ನಿ ಮತ್ತು ಪ್ರಿಯಕರನ ನಡುವೆ ಸಂಬಂಧ ಬೆಳದಿತ್ತು
ಭೋಪಾಲ್ (ಜು. 04): ನಾಪತ್ತೆಯಾಗಿದ್ದ ಪತಿ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಣ್ಣೀರಿಟ್ಟು ನಾಟಕವಾಡಿದ್ದ ಮಹಿಳೆ, ತನ್ನ ಪ್ರಿಯಕರನ ಸಹಾಯದಿಂದ ಆತನನ್ನು ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ (Madhya Pradesh) ದಾಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಮಹಿಳೆ ಸಾವಿತ್ರಿ ಪಟೇಲ್ ಕಳೆದ ನಾಲ್ಕು ವರ್ಷಗಳಿಂದ ತನ್ನ ಗಂಡನ ಆತ್ಮೀಯ ಸ್ನೇಹಿತನಾಗಿದ್ದ ಹಲ್ಲೆ ರೈಕ್ವಾರ್ ಎಂಬ ತನ್ನ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದಳು ಎಂದು ದೈನಿಕ ಭಾಸ್ಕರ್ ವರದಿ ಮಾಡಿದೆ. ಪತಿ ಬಲ್ಲು ಪಟೇಲ್ ತಮ್ಮ ಪ್ರೇಮಕಥೆಗೆ ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಬಲ್ಲು ಪಟೇಲ್ ಕೊಲೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.
ಕಳೆದ ರಾತ್ರಿಯಿಂದ ಪತಿ ಬಲ್ಲು ಮನೆಗೆ ಬಂದಿಲ್ಲ ಎಂದು ಸಾವಿತ್ರಿ ಕಣ್ಣೀರು ಹಾಕುತ್ತಾ ಕೊಲೆಯಾದ ದಿನವಾದ ಜೂ.28ರಂದು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದಾಗ, ಪತಿ ಬಲ್ಲು ದೇಹವು ಕೃಷಿ ಹೊಲದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ತನಿಖೆಯ ಸಂದರ್ಭದಲ್ಲಿ, 36 ವರ್ಷದ ಸಾವಿತ್ರಿ ಪೊಲೀಸರನ್ನು ದಾರಿತಪ್ಪಿಸಲು ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಲೇ ಇದ್ದಳು, ಇದು ಅನುಮಾನಗಳಿಗೆ ಕಾರಣವಾಗಿದ್ದು, ಆಕೆಯ ಮೊಬೈಲ್ ಫೋನ್ ಕರೆ ವಿವರಗಳನ್ನು ಪೊಲೀಸರು ಪಡೆದಿದ್ದಾರೆ. ಈ ವೇಳೆ ಅವಳು ರಾಯ್ಕ್ವಾರ್‌ನೊಂದಿಗೆ ಫೋನ್‌ನಲ್ಲಿ ಸಾಕಷ್ಟು ಮಾತನಾಡಿದ್ದು, ಕೊಲೆಯಾದ ದಿನವೂ ಅವರು ಮಾತನಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗ್ಯಾಸ್ ಗನ್ ಬಳಸಿ ಪತಿಯನ್ನು ಕೊಂದ ಪತ್ನಿ
ಈ ಬೆನ್ನಲ್ಲೇ ಪೊಲೀಸರು ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ರೈಕ್ವಾರ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಇನ್ನು ಬಲ್ಲು ಒಬ್ಬ ರೈತನಾಗಿದ್ದು, ಸಾಕಷ್ಟು, ಮದ್ಯ ಸೇವಿಸುತ್ತಿದ್ದ ಮತ್ತು ತನ್ನ ಮತ್ತು ತನ್ನ ಮಕ್ಕಳಿಗೆ ನಿತ್ಯವೂ ಮನೆಯಲ್ಲಿ ಹಿಂಸೆ ನೀಡುತ್ತಿದ್ದ ಎಂದು ಸಾವಿತ್ರಿ ಪೊಲೀಸರಿಗೆ ತಿಳಿಸಿದ್ದಾಳೆ.
ರಾಯ್ಕ್ವಾರ್ ಬಲ್ಲುವಿನ ಆತ್ಮೀಯ ಸ್ನೇಹಿತನಾಗಿದ್ದು, ಆಗಾಗ ಮನೆಗೆ ಬರುತ್ತಿದ್ದನು. ಈ ವೇಳೆ ಬಲ್ಲು ಪತ್ನಿ ಮತ್ತು ರಾಯ್ಕ್ವಾರ್ ನಡುವೆ ಸಂಬಂಧ ಬೆಳದಿತ್ತು. ಆದರೆ ತನ್ನ ಆತ್ಮೀಯ ಸ್ನೇಹಿತ ಮತ್ತು ಅವನ ಹೆಂಡತಿಯ ನಡುವಿನ ಸಂಬಂಧದ ಬಗ್ಗೆ ಬಲ್ಲುವಿಗೆ ತಿಳಿದಿರಲಿಲ್ಲ. ಈಗ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಬಲ್ಲು ಕೊಲೆ ಮಾಡಿದ್ದು, ಪೊಲೀಸರು ಇಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ.