Bengaluru: ವರದಕ್ಷಿಣೆ ಹಿಂಸೆ: ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಪತಿ ಹಾಗೂ ಆತನ ಪೋಷಕರ ವರದಕ್ಷಿಣೆ ಕಿರಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ತೂಬರಹಳ್ಳಿ ನಿವಾಸಿ ಮಾಧುರಿ(28) ಮೃತ ದುರ್ದೈವಿ. ಜ.26ರ ರಾತ್ರಿ 8.30ಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಬೆಂಗಳೂರು (ಫೆ.01): ಪತಿ ಹಾಗೂ ಆತನ ಪೋಷಕರ ವರದಕ್ಷಿಣೆ ಕಿರಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ತೂಬರಹಳ್ಳಿ ನಿವಾಸಿ ಮಾಧುರಿ (28) ಮೃತ ದುರ್ದೈವಿ. ಜ.26ರ ರಾತ್ರಿ 8.30ಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ಆಕೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಚಿಕಿತ್ಸೆ ವೇಳೆ ಮಾಧುರಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಗುರುಪ್ರಸಾದ್, ಮಾವ ರಾಘವೇಂದ್ರ ರಾವ್ ಹಾಗೂ ಅತ್ತೆ ಸುಧಾ ವಿರುದ್ಧ ವರಕ್ಷಿಣೆ ನಿಷೇಧ ಕಾಯ್ದೆಯಡಿ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇವನಹಳ್ಳಿ ಮೂಲದ ಮಾಧುರಿ ಮತ್ತು ತೂಬರಹಳ್ಳಿಯ ಗುರುಪ್ರಸಾದ್ 2016ರಲ್ಲಿ ವಿವಾಹವಾಗಿದ್ದರು. ಇಬ್ಬರು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಆರು ವರ್ಷದ ಮಗ ಇದ್ದಾನೆ.
ಗುರುಪ್ರಸಾದ್‌ಗೆ ಬೇರೆ ಹೆಂಗಸಿನ ಜತೆಗೆ ಅಕ್ರಮ ಸಂಬಂಧವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದ ಮಾಧುರಿಗೆ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಗುರುಪ್ರಸಾದ್ ಹಲ್ಲೆ ನಡೆಸಿದ್ದ. ಅತ್ತೆ-ಮಾವ ಸಹ ಮಗನ ಪರವಾಗಿ ಮಾತನಾಡುತ್ತಿದ್ದರು. ತವರು ಮನೆಗೆ ತೆರಳಿ ವರದಕ್ಷಿಣೆಯಾಗಿ ಹಣ ತರುವಂತೆ ಒತ್ತಾಯಿಸುತ್ತಿದ್ದರು.
ಮೂರೂವರೆ ವರ್ಷದ ಬಾಲಕಿ ರೇಪ್, ಹತ್ಯೆ: ತಾಯಿಯ ಪ್ರಿಯತಮನಿಂದಲೇ ಕೃತ್ಯ
ಈ ನಡುವೆ ಜ.25ರಂದು ಮಾಧುರಿ ಜತೆಗೆ ಜಗಳ ತೆಗೆದ ಗುರುಪ್ರಸಾದ್ ತವರು ಮನೆಗೆ ಹೋಗಿ ಹಣ ತರುವಂತೆ ಗಲಾಟೆ ಮಾಡಿದ್ದ. ಅತ್ತೆ-ಮಾವ ಸಹ ನನ್ನ ಮಗನಿಗೆ ತಕ್ಕ ಹೆಂಡತಿಯಲ್ಲ. ಮನೆ ಬಿಟ್ಟು ಹೋಗು ಎಂದು ನಿಂದಿಸಿದ್ದರು. ಇದರಿಂದ ಮನನೊಂದು ಮಾಧುರಿ ಜ.26ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.