Fake Doctor ನಕಲಿ ವೈದ್ಯರ ಐವಿಎಫ್‌ ಚಿಕಿತ್ಸೆಗೆ ಮಹಿಳೆ ಬಲಿ, 4 ಲಕ್ಷ ರೂ ಪಡೆದು ಟ್ರೀಟ್‌ಮೆಂಟ್!

- 15 ವರ್ಷದಿಂದ ಮಕ್ಕಳಾಗದಿದ್ದ ದಂಪತಿಗೆ ಗಾಳ
- ಗರ್ಭದ ಕಾರಣ ಹೊಟ್ಟೆನೋವೆಂದು ಸುಳ್ಳು ಚಿಕಿತ್ಸೆ
- ಗರ್ಭ, ಕಿಡ್ನಿ, ಹೃದಯ, ಮೆದುಳು ಸಮಸ್ಯೆಗೆ ಬಲಿ

woman dies after ivf treatment by fake doctor in tiptur Karnataka ckm

ತಿಪಟೂರು(ಏ.24): ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಹಣ ಪಡೆದು ನಕಲಿ ವೈದ್ಯ ದಂಪತಿ ನೀಡಿದ್ದ ನಕಲಿ ಐವಿಎಫ್‌ ಚಿಕಿತ್ಸೆಗೆ ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಬೆಳಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳಗರಹಳ್ಳಿ ಗ್ರಾಮದ ಮಲ್ಲಿಕಾರ್ಜುನ್‌ ಪತ್ನಿ ಮಮತಾ(34) ಮೃತ ದುರ್ದೈವಿ.

15 ವರ್ಷಗಳ ಹಿಂದೆ ಮದುವೆಯಾಗಿದ್ದ ಮಮತಾ ಮತ್ತು ಮಲ್ಲಿಕಾರ್ಜುನ್‌ಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಐದಾರು ತಿಂಗಳ ಹಿಂದೆ ಮಂಡ್ಯ ಮೂಲದ ಮಂಜುನಾಥ್‌ ಹಾಗೂ ಉಡುಪಿ ಮೂಲ ವಾಣಿ ಎಂಬ ನಕಲಿ ವೈದ್ಯ ದಂಪತಿಯನ್ನು ಸಂಪರ್ಕಿಸಿದ್ದರು. ಅವರು ಮಕ್ಕಳಾಗುವಂತೆ ಐವಿಎಫ್‌ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿ ದಂಪತಿಯಿಂದ 4 ಲಕ್ಷ ಹಣ ಪಡೆದು 4 ತಿಂಗಳು ಅವೈಜ್ಞಾನಿಕವಾಗಿ ನಕಲಿ ಐವಿಎಫ್‌ ಚಿಕಿತ್ಸೆ ನೀಡಿದ್ದಾರೆ. ನಂತರ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟುಹಣ ಪಡೆದಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಮಮತಾಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆ ದಾಖಲಾದರು. ಆಗ ಮಮತಾ ಗರ್ಭಿಣಿಯೇ ಆಗಿರದಿದ್ದರೂ ಅನಗತ್ಯ ಚಿಕಿತ್ಸೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದು ಬೆಂಗಳೂರಿನ ಸೇಂಟ್‌ ಜಾನ್‌ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಸತತ 3 ತಿಂಗಳು ಲಕ್ಷಾಂತರ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದ ಕಾರಣ ಬೇಸತ್ತ ಪತಿ ಮಮತಾಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿದ್ದರು. ಮಮತಾ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ಆತಂಕದಲ್ಲಿ ಐವಿಎಫ್‌ ಚಿಕಿತ್ಸೆ ಪಡೆದವರು
ಈ ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ, ಅರಸೀಕೆರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಗಳಿಂದ ಲಕ್ಷಾಂತರ ರುಪಾಯಿ ಹಣ ಪಡೆದು ನಕಲಿ ಚಿಕಿತ್ಸೆ ನೀಡಿ ವಂಚಿಸಿದ್ದು, ಈ ಬಗ್ಗೆ ನೊಣವಿನಕೆರೆ ಪೊಲೀಸ್‌ ಠಾಣೆಯಲ್ಲಿ ಜ.19ರಂದು ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್‌ ಕೇವಲ ಎಸ್‌.ಎಸ್‌.ಎಲ್‌.ಸಿ ಪಾಸಾಗಿದ್ದು ಯಾವುದೇ ವೈದ್ಯಕೀಯ ಪದವಿ ಪಡೆದಿದ್ದಿಲ್ಲ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ನಕಲಿ ವೈದ್ಯ ದಂಪತಿಗಳಿಂದ ಐವಿಎಫ್‌ ಚಿಕಿತ್ಸೆ ಪಡೆದಿದ್ದ ಮಮತಾ ಸಾವನ್ನಪ್ಪಿದ್ದು ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೃತ ಮಮತಾ ಜೊತೆ ಇದೇ ಗ್ರಾಮದ ಹಲವು ದಂಪತಿಗಳು ಈ ನಕಲಿ ವೈದ್ಯರಿಂದ ಐವಿಎಫ್‌ ಚಿಕಿತ್ಸೆ ಪಡೆದಿದ್ದು ಅವರೆಲ್ಲರೂ ಆತ್ಕಂಕಕ್ಕೆ ಒಳಗಾಗಿದ್ದಾರೆ. ಏನೇ ಆಗಲಿ ಹಣದಾಸೆಗಾಗಿ ಒಂದು ಅಮಾಯಕ ಜೀವವನ್ನು ಬಲಿ ತೆಗೆದುಕೊಂಡು ನಕಲಿ ವೈದ್ಯ ದಂಪತಿಗೆ ಶಿಕ್ಷೆಯಾಗಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮವಹಿಸಬೇಕೆಂದು ಗ್ರಾಮಸ್ಥರು, ಸಾರ್ವಜನಿಕರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios