ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ವಿಚಾರಣೆಗೆ ಬಂದಿದ್ದಾಗ ವಕೀಲರೊಬ್ಬರ ಮೇಲೆ ಆರೋಪಿತ ಮಹಿಳೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ನೃಪತುಂಗ ರಸ್ತೆಯ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಆವರಣದಲ್ಲಿ ಶುಕ್ರವಾರ ನಡೆದಿದೆ. 

ಬೆಂಗಳೂರು (ಏ.22): ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ವಿಚಾರಣೆಗೆ ಬಂದಿದ್ದಾಗ ವಕೀಲರೊಬ್ಬರ ಮೇಲೆ ಆರೋಪಿತ ಮಹಿಳೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ನೃಪತುಂಗ ರಸ್ತೆಯ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಆವರಣದಲ್ಲಿ ಶುಕ್ರವಾರ ನಡೆದಿದೆ. ಆರ್‌.ಟಿ.ನಗರದ ವಿ.ಕೃಷ್ಣರೆಡ್ಡಿ ಹಲ್ಲೆಗೊಳಗಾದ ವಕೀಲರಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ದೊಡ್ಡಬಿದರಕಲ್ಲು ನಿವಾಸಿ ಕಾಂಚನಾ ನಾಚಪ್ಪ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆ ಮುಗಿಸಿ ಹೊರಬರುವಾಗ ತನ್ನ ಎದುರಾಳಿ ಪರ ವಕೀಲರ ಮೇಲೆ ಕಾಂಚನಾ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡಬಿದರಕಲ್ಲು ಬಳಿ ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ಕಾಂಚನಾ, 2019ರಲ್ಲಿ ಹರೀಶ್‌ ಎಂಬುವರ ಬಳಿ ಚೆಕ್‌ ಕೊಟ್ಟು .4.50 ಲಕ್ಷ ಸಾಲ ಪಡೆದಿದ್ದರು. ಆದರೆ ಸಕಾಲಕ್ಕೆ ಆಕೆ ಸಾಲ ಮರಳಿಸದ ಕಾರಣಕ್ಕೆ ಚೆಕ್‌ ಬಳಸಿ ಹಣ ಪಡೆಯಲು ಹರೀಶ್‌ ಮುಂದಾಗಿದ್ದರು. ಆದರೆ ಆ ವೇಳೆ ಚೆಕ್‌ ಬೌನ್ಸ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಂಚನಾ ವಿರುದ್ಧ ನ್ಯಾಯಾಲಯದಲ್ಲಿ ಹರೀಶ್‌ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಹರೀಶ್‌ ಪರ ಕೃಷ್ಣ ರೆಡ್ಡಿ ವಕಾಲತ್ತು ವಹಿಸಿದ್ದರು. ಅಂತೆಯೇ ಶುಕ್ರವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ಕಾಂಚನಾ ನ್ಯಾಯಾಲಯಕ್ಕೆ ಸಂಧಾನ ಮೂಲಕ ಪ್ರಕರಣ ಇತ್ಯರ್ಥಿಪಡಿಸುವುದಾಗಿ ತಮ್ಮ ವಕೀಲರ ಮೂಲಕ ಮನವಿ ಮಾಡಿದ್ದಳು. 

ಬೆಂಗಳೂರು ಬಿಜೆಪಿ ಕಚೇರಿ ಬಳಿ ಸ್ಫೋಟ: ಉಗ್ರಬ್ಬರಿಗೆ 7 ವರ್ಷ ಜೈಲು ಶಿಕ್ಷೆ

ಇದಕ್ಕೆ ಕೃಷ್ಣ ರೆಡ್ಡಿ ಆಕ್ಷೇಪಿಸಿದ್ದರು. ಬಳಿಕ ನ್ಯಾಯಾಲಯ ಮೇ 8ಕ್ಕೆ ವಿಚಾರಣೆ ಮುಂದೂಡಿತು. ನ್ಯಾಯಾಲಯದ ಕಲಾಪ ಮುಗಿಸಿ ಹೊರ ಬಂದ ಎದುರಾಳಿ ವಕೀಲರ ಮೇಲೆ ಕಾಂಚನಾ ಸಿಟ್ಟಿನಿಂದ ತನ್ನ ಬ್ಯಾಗ್‌ನಲ್ಲಿ ತಂದಿದ್ದ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾಳೆ. ಕೂಡಲೇ ವಕೀಲರ ರಕ್ಷಣೆಗೆ ಇತರೆ ವಕೀಲರು ಧಾವಿಸಿದ್ದಾರೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ಹಲ್ಲೆಗೊಳಗಾದ ವಕೀಲರು ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.