ಬೆಂಗಳೂರು ಬಿಜೆಪಿ ಕಚೇರಿ ಬಳಿ ಸ್ಫೋಟ: ಉಗ್ರಬ್ಬರಿಗೆ 7 ವರ್ಷ ಜೈಲು ಶಿಕ್ಷೆ
2013ರಲ್ಲಿ ರಾಜಧಾನಿಯ ಮಲ್ಲೇಶ್ವರದ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಸಮೀಪ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತಮಿಳುನಾಡು ಮೂಲದ ನಿಷೇಧಿತ ಅಲ್ ಉಮ್ಮಾ ಸಂಘಟನೆಯ ಇಬ್ಬರು ಉಗ್ರರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬೆಂಗಳೂರು (ಏ.22): 2013ರಲ್ಲಿ ರಾಜಧಾನಿಯ ಮಲ್ಲೇಶ್ವರದ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಸಮೀಪ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತಮಿಳುನಾಡು ಮೂಲದ ನಿಷೇಧಿತ ಅಲ್ ಉಮ್ಮಾ ಸಂಘಟನೆಯ ಇಬ್ಬರು ಉಗ್ರರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರು. ದಂಡವನ್ನು ವಿಧಿಸಿ ನಗರದ 50ನೇ ಸಿಸಿಎಚ್ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ತಮಿಳುನಾಡಿನ ಕೊಯಮತ್ತೂರಿನ ಅಂಬಾಸಮುದ್ರದ ಡ್ಯಾನಿಯಲ್ ಪ್ರಕಾಶ್ ಹಾಗೂ ಜಾನ್ ನಾಸಿರ್ ಶಿಕ್ಷೆಗೊಳಗಾದ ಉಗ್ರರಾಗಿದ್ದು, ಬಿಜೆಪಿ ಕಚೇರಿ ಬಳಿ ವಿಧ್ವಂಸಕ ಕೃತ್ಯಕ್ಕೆ ಜಿಲೆಟಿನ್ ಹಾಗೂ ಅಮೋನಿಯಂ ನೈಟ್ರೇಟ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಅಲ್ ಉಮ್ಮಾ ಸಂಘಟನೆಗೆ ಈ ಇಬ್ಬರೂ ಪೂರೈಸಿದ್ದರು.
ಈ ಸಂಬಂಧ ಡ್ಯಾನಿಯಲ್ ಹಾಗೂ ಜಾನ್ ನಾಸಿರ್‌ನನ್ನು ತಮಿಳುನಾಡಿನಲ್ಲಿ ಬಂಧಿಸಿದ್ದ ಆಗಿನ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು, ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಗಂಗಾಧರ್ ಅವರು, ಉಗ್ರರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರು. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಇಬ್ಬರಿಗೆ 6 ತಿಂಗಳು ಹೆಚ್ಚುವರಿ ಶಿಕ್ಷೆ ನೀಡಿ ನ್ಯಾಯಾಧೀಶರು ಆದೇಶಿದ್ದಾರೆ. ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ರವೀಂದ್ರ ವಾದ ಮಂಡಿಸಿದ್ದರು.
ಬ್ರಾಹ್ಮಣರೇಕೆ ರಾಜಕಾರಣದಲ್ಲಿ ಮೇಲೆ ಬರುತ್ತಿಲ್ಲ?: ಅಶೋಕ ಹಾರನಹಳ್ಳಿ
10 ವರ್ಷಗಳ ಹಿಂದೆ ನಡೆದಿದ್ದ ವಿಧ್ವಂಸಕ ಕೃತ್ಯ: 2013ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಬಳಿ ಕಿಡಿಗೇಡಿಗಳು ಬಾಂಬ್ ಸ್ಫೋಟಿಸಿದ್ದರು. ಈ ಕೃತ್ಯದ ಸಂಬಂಧ ಪ್ರತ್ಯೇಕ ಪ್ರಕರಣಗಳು ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಪೊಲೀಸರ ತನಿಖೆಯಲ್ಲಿ ಕೃತ್ಯದಲ್ಲಿ ಅಲ್ ಉಮ್ಮಾ ಸಂಘಟನೆಯ ಪಾತ್ರ ಬಯಲಾಗಿತ್ತು. ಆ ಸಂಘಟನೆಯ ಕುಖ್ಯಾತ ಭಯೋತ್ಪಾದಕ ಕಿಚನ್ ಬುಖಾರಿ ಸೇರಿದಂತೆ ಹಲವು ಮಂದಿ ಬಂಧಿತರಾಗಿದ್ದರು. ಅಂತೆಯೇ ಕೃತ್ಯಕ್ಕೆ ಸ್ಫೋಟಕ ವಸ್ತುಗಳನ್ನು ಪೂರೈಸಿದ್ದ ಡ್ಯಾನಿಯಲ್ ಹಾಗೂ ಜಾನ್ ನಾಸಿರ್‌ನನ್ನು ಘಟನೆ ನಡೆದ ಮೂರು ವರ್ಷಗಳ ಬಳಿಕ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ತಂಡ ತಮಿಳುನಾಡಿನಲ್ಲಿ ಬಂಧಿಸಿತ್ತು.
ಗ್ರಾಪಂ ಸದಸ್ಯ ಡ್ಯಾನಿಯಲ್ ಪ್ರಕಾಶ್: ನಿಷೇಧಿತ ಅಲ್ ಉಮ್ಮಾ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿದ್ದ ಡ್ಯಾನಿಯಲ್ ಪ್ರಕಾಶ್, ತನ್ನೂರಾದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಂಬಾಸಮುದ್ರದಲ್ಲಿ ರಾಜಕೀಯದಲ್ಲಿ ಕೂಡ ಸಕ್ರಿಯವಾಗಿದ್ದ. ತಮಿಳುನಾಡಿನ ಪ್ರಾದೇಶಿಕ ಪಕ್ಷವೊಂದರ ಕಾರ್ಯಕರ್ತನಾಗಿದ್ದ ಆತ, ಅಲ್ಲಿನ ಗ್ರಾ.ಪಂ. ಸದಸ್ಯನಾಗಿ ಸಹ ಆಯ್ಕೆಯಾಗಿದ್ದ. ಈತನ ಬಂಧನದ ವೇಳೆ ಭಾರೀ ಹೈಡ್ರಾಮಾವೇ ನಡೆದಿತ್ತು. ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಮಧ್ಯಪ್ರವೇಶದ ಬಳಿಕ ಆತನನ್ನು ಬಂಧಿಸಿ ಬೆಂಗಳೂರಿಗೆ ವೆಂಕಟೇಶ್ ಪ್ರಸನ್ನ ತಂಡ ಕರೆತಂದಿತ್ತು.
ಮೈಸೂರು ಮೂಲಕ ಸ್ಫೋಟಕ ವಸ್ತು ಸಾಗಾಟ: ತನ್ನೂರಿನ ಕಲ್ಲು ಕ್ವಾರೆಗಳಲ್ಲಿ ಬಂಡೆಗಳನ್ನು ಸಿಡಿಸಲು ಬಳಸುತ್ತಿದ್ದ ಜಿಲೆಟಿನ್ ಹಾಗೂ ಅಮೋನಿಯಂ ನೈಟ್ರೇಟ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಅಲ್ ಉಮ್ಮಾ ಸಂಘಟನೆ ಸದಸ್ಯರಿಗೆ ಡ್ಯಾನಿಯಲ್ ಹಾಗೂ ನಾಸಿರ್ ರವಾನಿಸಿದ್ದರು. ಈ ಸ್ಫೋಟಕ ವಸ್ತುಗಳನ್ನು ತಮಿಳುನಾಡಿನಿಂದ ಖಾಸಗಿ ಬಸ್‌ನಲ್ಲಿ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ತಂದು ಕಿಚನ್ ಬುಖಾರಿಗೆ ಮತ್ತೊಬ್ಬ ಶಂಕಿತ ಉಗ್ರ ಆಲಿಖಾನ್ ಕುಟ್ಟಿತಲುಪಿಸಿದ್ದ. ಈ ಸ್ಫೋಟಕ ವಸ್ತುಗಳನ್ನು ಬಳಸಿಕೊಂಡು ಬಾಂಬ್ ಅನ್ನು ದುಷ್ಕರ್ಮಿಗಳು ಸಿದ್ಧಪಡಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ ನಾಯಕರೇ ಟಾರ್ಗೆಟ್: ಅಂದು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡೇ ಅಲ್ ಉಮ್ಮಾ ಸಂಘಟನೆ ವಿಧ್ವಂಸ ಕೃತ್ಯ ಎಸಗಿತ್ತು. ಆದರೆ ಬಿಜೆಪಿ ಕಚೇರಿ ಬಳಿ ಪೊಲೀಸ್ ಭದ್ರತೆ ಹಿನ್ನಲೆಯಲ್ಲಿ ಶಂಕಿತ ಉಗ್ರರು, ಕೊನೆಗೆ ಬಿಜೆಪಿ ಕಚೇರಿಗೆ ಅನತಿ ದೂರದಲ್ಲಿ ನಿಂತಿದ್ದ ಪೊಲೀಸ್ ವಾಹನದ ಬಳಿ ಬೈಕ್‌ನಲ್ಲಿ ಬಾಂಬ್ ಅಡಗಿಸಿಟ್ಟು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತ: ನಾಡಿದ್ದು ಅಂತಿಮ ಕಣ ರೆಡಿ
ಅಂದು ಏನಾಗಿತ್ತು?: 2013ರ ವಿಧಾನಸಭಾ ಚುನಾವಣೆ ವೇಳೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಬಳಿ ಕಿಡಿಗೇಡಿಗಳು ಬಾಂಬ್ ಸ್ಫೋಟಿಸಿದ್ದರು. ಪೊಲೀಸರ ತನಿಖೆಯಲ್ಲಿ ಅಲ್ ಉಮ್ಮಾ ಸಂಘಟನೆಯ ಪಾತ್ರ ಬಯಲಾಗಿತ್ತು. ಆ ಸಂಘಟನೆಯ ಕುಖ್ಯಾತ ಭಯೋತ್ಪಾದಕ ಕಿಚನ್ ಬುಖಾರಿ ಸೇರಿದಂತೆ ಹಲವು ಮಂದಿ ಬಂಧಿತರಾಗಿದ್ದರು. ಅಂತೆಯೇ ಕೃತ್ಯಕ್ಕೆ ಸ್ಫೋಟಕ ವಸ್ತುಗಳನ್ನು ಪೂರೈಸಿದ್ದ ಡ್ಯಾನಿಯಲ್ ಹಾಗೂ ಜಾನ್ ನಾಸಿರ್‌ನನ್ನು ಘಟನೆ ನಡೆದ 3 ವರ್ಷಗಳ ಬಳಿಕ ತಮಿಳುನಾಡಿನಲ್ಲಿ ಬಂಧಿಸಿತ್ತು.