ಆಕೆಯೇ ನನಗೆ ಚಪ್ಪಲಿಯಿಂದ ಹೊಡೆದರು: ಝೋಮ್ಯಾಟೋ ಬಾಯ್
ನಾನು ತಪ್ಪು ಮಾಡಿಲ್ಲ, ನನಗೆ ನ್ಯಾಯ ಕೊಡಿಸಿ| ಮಹಿಳೆಯೇ ನನ್ನ ಮೇಲೆ ಹಲ್ಲೆ| ಸಾಮಾಜಿಕ ಜಾಲತಾಣದಲ್ಲಿ ಝೋಮ್ಯಾಟೋ ಬಾಯ್ ಸ್ಪಷ್ಟನೆ|
ಬೆಂಗಳೂರು(ಮಾ.13): ಊಟ ಪಾರ್ಸೆಲ್ ತಲುಪಿಸಲು ಹದಿನೈದು ನಿಮಿಷ ತಡವಾಗಿದ್ದಕ್ಕೆ ಮಹಿಳೆ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದರು. ನಾನು ಮಹಿಳೆ ಮೇಲೆ ಹಲ್ಲೆ ನಡೆಸಿಲ್ಲ ಎಂದು ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಝೋಮ್ಯಾಟೋ ಕಂಪನಿಯ ಫುಡ್ ಡೆಲಿವರಿ ಬಾಯ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾನೆ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡಲಾಗುತ್ತಿದೆ. ನಾನು ಮಹಿಳೆ ಮೇಲೆ ಹಲ್ಲೆ ನಡೆಸಿಲ್ಲ. ಈ ಬಗ್ಗೆ ನನಗೆ ನ್ಯಾಯ ಕೊಡಿಸಿ ಎಂದು ಫುಡ್ ಡೆಲಿವರಿ ಬಾಯ್ ಕಾಮರಾಜು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾನೆ.
ಕಾಮರಾಜು ಹೇಳಿದ್ದು:
ಎಚ್‌ಎಸ್‌ಆರ್ ಲೇಔಟ್‌ನ ರೆಸ್ಟೋರೆಂಟ್‌ನಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮಹಿಳಾ ಗ್ರಾಹಕರಿಗೆ ಊಟ ಪಾರ್ಸೆಲ್ ತಲುಪಿಸಬೇಕಿತ್ತು. ಬೊಮ್ಮನಹಳ್ಳಿ, ಬೇಗೂರು ಮಾರ್ಗದಲ್ಲಿ ಸಂಚಾರ ದಟ್ಟಣೆ ಹಾಗೂ ಬಿಬಿಎಂಪಿ ಕಾಮಗಾರಿ ನಡೆಯುತ್ತಿದ್ದ ಕಾರಣ ನಿಗದಿತ ಸಮಯಕ್ಕಿಂತ ಗ್ರಾಹಕರ ಸ್ಥಳ ತಲುಪುವುದು 15 ನಿಮಿಷ ತಡವಾಗಿತ್ತು. ಸ್ಥಳಕ್ಕೆ ತೆರಳಿ ಗ್ರಾಹಕರಿಗೆ ಕರೆ ಮಾಡಿದಾಗ ‘ಕ್ಲಾಸಿಕ್ -3’ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಗೆ ಬರುವಂತೆ ಆಂಗ್ಲಭಾಷೆಯಲ್ಲಿ ಹೇಳಿದರು. ಅದರಂತೆ ಫ್ಲ್ಯಾಟ್ ಬಳಿ ಹೋದ ಕೂಡಲೇ ಹದಿನೈದು ನಿಮಿಷ ತಡವಾಗಿದ್ದಕ್ಕೆ ನಾನೇ ಮಹಿಳೆಯ ಕ್ಷಮೆಯಾಚಿಸಿ ಸಂಚಾರ ದಟ್ಟಣೆ ಬಗ್ಗೆ ವಿವರಿಸಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಗ್ರಾಹಕರ ಕೇಂದ್ರದವರ ಬಳಿ ಮಾತನಾಡುತ್ತಿದ್ದೇನೆ. ಸುಮ್ಮನೆ ನಿಲ್ಲುವಂತೆ ನನಗೆ ಸೂಚಿಸಿದರು. ಮೇಡಂ ದಯವಿಟ್ಟು ದೂರು ನೀಡಬೇಡಿ. ನನ್ನ ಕೆಲಸ ಹೋಗಲಿದೆ. ಹಣ ನೀಡಿದರೆ ಹೊರಡುತ್ತೇನೆ ಎಂದು ಹೇಳಿದೆ. ಮಹಿಳೆ, ತಡವಾಗಿದ್ದಕ್ಕೆ ಹಣ ನೀಡುವುದಿಲ್ಲ ಎಂದರು. ಆಗ ಕಂಪನಿ ನಿಯಮದ ಪ್ರಕಾರ ಹಣ ಪಡೆದು ಊಟದ ಪರ್ಸೆಲ್ ನೀಡಬೇಕು. ಆದರೆ ಮುಂಚಿತವಾಗಿ ಊಟ ನೀಡಿದ್ದೇವೆ, ಹಣ ಕೊಡಿ ಎಂದಾಗಲೂ ಮಹಿಳೆ ಹಣ ನೀಡಲು ನಿರಾಕರಿಸಿ ಅವಾಚ್ಯ ಶಬ್ಧದಿಂದ ನಿಂದಿಸಿದರು. ಫುಡ್ ಡೆಲಿವರಿ ಬಾಯ್‌ಗಳಿಗೂ ಸ್ವಾಭಿಮಾನ ಇದೆ. ನಾವೇನು ಗುಲಾಮರಲ್ಲ ಎಂದು ಹೇಳಿದೆ. ಆಗ ಮಹಿಳೆ ನೀನು ಗುಲಾಮನೇ. ಏನು ಮಾಡುತ್ತೀಯಾ ಎಂದು ನಿಂದಿಸಿದರು. ಆಗ ಮನೆ ಬಾಗಿಲಿನಿಂದ ಒಳಗೆ ಒಂದು ಅಡಿ ದೂರದಲ್ಲಿ ಇಡಲಾಗಿದ್ದ ಊಟದ ಪಾರ್ಸೆಲನ್ನು ನಾನು ವಾಪಸ್ ತೆಗೆದುಕೊಂಡು ಹೊರಗೆ ಬಂದೆ. ಈ ವೇಳೆ ಮಹಿಳೆ ಅಲ್ಲಿಯೇ ಇದ್ದ ಶೂ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿದರು.
ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದ ಜೋಮ್ಯಾಟೋ ಕಾಮರಾಜ ಅರೆಸ್ಟ್
ಇದು ಸರಿಯಲ್ಲ ಮೇಡಂ ಎಂದು ನನ್ನ ಕೈಯಿಂದ ಅಡ್ಡಪಡಿಸಿದೆ. ಈ ವೇಳೆ ಅವರು ಧರಿಸಿದ್ದ ಉಂಗುರ ತಗುಲಿ ಅವರ ಮೂಗಿಗೆ ಗಾಯವಾಗಿದೆ. ಬಳಿಕ ಅಲ್ಲಿಂದ ಹೊರಟು ಬಂದೆ. ಅಷ್ಟೊತ್ತಿಗೆ ದೆಹಲಿಯಿಂದ ನನಗೆ ಕರೆ ಮಾಡಿ, ಏಕೆ ನೀವು ಗ್ರಾಹಕರಿಗೆ ಅರ್ಡರ್ ಕೊಟ್ಟಿಲ್ಲ ಎಂದರು. ನಾನು ನಡೆದ ಘಟನೆಯನ್ನು ವಿವರಿಸಿದೆ. ಇದಕ್ಕೆ ದೆಹಲಿ ಝೋಮ್ಯಾಟೋ ಟೀಮ್ ನನ್ನ ಬಳಿ ಕ್ಷಮೆಯಾಚಿಸಿತು. ಏನೂ ತಪ್ಪು ಮಾಡದ ನಾನು ಬಂಧನಕ್ಕೆ ಒಳಗಾಗಿ, ಜಾಮೀನು ಪಡೆದು ಹೊರ ಬಂದಿದ್ದೇನೆ. ನನಗೆ ನ್ಯಾಯ ಕೊಡಿಸಬೇಕು ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಮನವಿ ಮಾಡಿದ್ದಾರೆ.
ಗ್ರಾಹಕಿ ಹಿತೇಶಾ, ಡೆಲಿವರಿ ಬಾಯ್ ಇಬ್ಬರಿಗೂ ನೆರವು: ಝೋಮ್ಯಾಟೋ
ಇನ್ನು ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಝೋಮ್ಯಾಟೋ ಸಂಸ್ಥೆ, ಈ ವಿಚಾರದಲ್ಲಿ ಸತ್ಯ ಏನೆಂಬುವುದನ್ನು ಅರಿಯಬೇಕಾಗಿರುವುದು ನಮ್ಮ ಮೊದಲ ಆದ್ಯತೆ. ಪ್ರಕರಣ ವಿಚಾರಣೆಯ ಹಂತದಲ್ಲಿರುವುದರಿಂದ ನಾವು ನಮ್ಮ ಗ್ರಾಹಕರಾದ ಹಿತೇಶಾ ಮತ್ತು ನಮ್ಮ ಡೆಲಿವರಿ ಬಾಯ್ ಕಾಮರಾಜು ಇಬ್ಬರಿಗೂ ಬೇಕಾದ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಹಿತೇಶಾ ಜೊತೆ ಜೊಮ್ಯಾಟೋ ಸಂಸ್ಥೆ ಸಂಪರ್ಕದಲ್ಲಿದ್ದು, ಆಕೆಯ ವೈದ್ಯಕೀಯ ವೆಚ್ಚವನ್ನು ನಾವೇ ಭರಿಸುತ್ತಿದ್ದೇವೆ. ಮಾತ್ರವಲ್ಲ ಕಾನೂನಾತ್ಮಕ ನೆರವು ನೀಡುತ್ತಿದ್ದೇವೆ ಎಂದಿದ್ದಾರೆ. ನಮ್ಮ ಡೆಲಿವರಿ ಕಾಮರಾಜು ಅವರ ಜೊತೆಗೂ ನಾವು ಸಂಪರ್ಕದಲ್ಲಿದ್ದು, ಈ ವಿಚಾರವನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಿಯಮಾವಳಿಗಳ ಪ್ರಕಾರ ಕಾಮರಾಜು ಅವರನ್ನು ಅಮಾನತಿನಲ್ಲಿಟ್ಟಿದ್ದೇವೆ. ಈ ನಡುವೆ ಆತನ ವೇತನ ಮತ್ತು ಆತನ ಪರವಾಗಿ ತನಿಖೆಯ ಖರ್ಚು ವೆಚ್ಚಗಳನ್ನು ಸಂಸ್ಥೆಯೇ ನೋಡಿಕೊಳ್ಳುತ್ತಿದೆ ಎಂದಿದ್ದಾರೆ. ಕಾಮರಾಜು 26 ತಿಂಗಳಿಂದ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ ಸುಮಾರು 5000 ಫುಡ್ ಡೆಲಿವರಿಗಳನ್ನು ಮಾಡಿದ್ದಾರೆ. ಇನ್ನು ಆತನಿಗೆ 5ರಲ್ಲಿ 4.75ರಷ್ಟು ರೇಟಿಂಗ್ ಇದ್ದು ಇದು ಈವರಗೆ ಪಡೆದಿರುವ ಅತ್ಯಧಿಕ ರೇಟಿಂಗ್‌ನಲ್ಲಿ ಒಂದು ಎಂದು ಕಂಪನಿ ಹೇಳಿಕೊಂಡಿದೆ.