ಪತ್ನಿಯರ ನಿಯಂತ್ರಣಕ್ಕಾಗಿ ಹುಲಿ ಹಲ್ಲು, ಉಗುರು ಪಡೆಯಲು ಮಧ್ಯಪ್ರದೇಶದ ಐವರು ಪುರುಷರು ಹುಲಿ ಹತ್ಯೆಗೈದಿದ್ದಾರೆ. ತಾಂತ್ರಿಕನ ಸಲಹೆಯಂತೆ ಹುಲಿ ಚರ್ಮಕ್ಕಾಗಿ ಮತ್ತೆ ಕಾಡಿಗೆ ಹೋದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಸಿಯೋನಿ ಹುಲಿ ಅಭಯಾರಣ್ಯದಲ್ಲಿ ನಡೆದಿದೆ.
ಪತ್ನಿ (wife) ಯನ್ನ ಕಂಟ್ರೋಲ್ ನಲ್ಲಿ ಇಡೋದು ಸುಲಭದ ಕೆಲ್ಸ ಅಲ್ಲ ಬಿಡಿ. ಸ್ವಲ್ಪ ಜೋರಿರೋ ಹುಡುಗಿಯರು ಪತ್ನಿಯಾಗಿ ಸಿಕ್ಕಿದ್ರೆ ಹುಡುಗ್ರ ಕಥೆ ಮುಗೀತು. ಬೀದಿಯಲ್ಲಿ ಹುಲಿ (tiger) ಹಂಗೆ ಇದ್ರೂ ಮನೆಯಲ್ಲಿ ಇಲಿಯಾಗಿ ಇರ್ಲೇಬೇಕು. ಪತ್ನಿ ಕಂಟ್ರೋಲ್ ಗೆ ತೆಗೆದುಕೊಳ್ಬೇಕು ಅಂತ ಪುರುಷರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಬಹುಶಃ ಈ ಇಬ್ಬರು ಪುರುಷರು ಮಾಡಿದ ಸಾಹಸವನ್ನು ಯಾರೂ ಈವರೆಗೆ ಮಾಡಿರಲಿಕ್ಕಿಲ್ಲ. ಪತ್ನಿ ತಾನು ಹೇಳಿದಂತೆ ಕೇಳ್ಬೇಕು ಎನ್ನುವ ಕಾರಣಕ್ಕೆ ಅವರು ಕಾಡಿನಲ್ಲಿದ್ದ ಹುಲಿಯನ್ನೂ ಲೆಕ್ಕಿಸಲಿಲ್ಲ. ಸುಂದರ ಪತ್ನಿಯರ ಸೊಕ್ಕು ಮುರಿಯೋಕೆ ಹುಲಿಗೆ ಸ್ಕೆಚ್ ಹಾಕಿದ್ದಾರೆ. ಹುಲಿ ಉಗುರು, ಹಲ್ಲನ್ನು ತೆಗೆದುಕೊಂಡು ಬಂದಿದ್ದಾರೆ. ಆದ್ರೆ ಚರ್ಮಕ್ಕಾಗಿ ಕಾಡಿಗೆ ಬಂದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು, ಹುಲಿ ಹತ್ಯೆ ಮಾಡಿದ ಕಾರಣ ಹೇಳ್ತಿದ್ದಂತೆ ಪೊಲೀಸರು ದಂಗಾಗಿದ್ದಾರೆ.
ಘಟನೆ ನಡೆದಿರೋದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ. ಏಪ್ರಿಲ್ 26, 2025 ರಂದು ಸಿಯೋನಿಯ ಪೆಂಟ್ ಟೈಗರ್ ರಿಸರ್ವ್ ಪ್ರದೇಶದಲ್ಲಿ (Seoni Pent Tiger Reserve area) ಹುಲಿ ಮೃತದೇಹ ಪತ್ತೆಯಾಗಿತ್ತು. ಹುಲಿ ಉಗುರುಗಳನ್ನು ಕತ್ತರಿಸಲಾಗಿತ್ತು. ಹಲ್ಲುಗಳನ್ನು ಮುರಿಯಲಾಗಿತ್ತು. ಹುಲಿ ಚರ್ಮ (Tiger skin)ವೂ ಇರಲಿಲ್ಲ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡ್ತು. ಆಗ ಐದು ಮಂದಿ ಸಿಕ್ಕಿ ಬಿದ್ದಿದ್ದಾರೆ. ತನಿಖೆ ವೇಳೆ, ಹುಲಿ ಹತ್ಯೆಗೆ ಅಚ್ಚರಿ ಕಾರಣ ಹೊರ ಬಿದ್ದಿದೆ.
ಹೆಂಡತಿ ಮೇಲೆ ಹಿಡಿತ ಸಾಧಿಸೋಕೆ ಹುಲಿ ಹಲ್ಲು ! : ರಾಜ್ಕುಮಾರ್ ಮತ್ತು ಝಾಮ್ ಸಿಂಗ್ ಎಂಬುವವರ ಪತ್ನಿಯಂದಿರು ಬಹಳ ಸುಂದರವಾಗಿದ್ದಾರಂತೆ. ಇದೇ ಕಾರಣಕ್ಕೆ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ ಆಗ್ತಿದೆ. ರಾಜ್ಕುಮಾರ್ ಮತ್ತು ಝಾಮ್ ಸಿಂಗ್ ಮಾತನ್ನು ಪತ್ನಿಯರು ಕೇಳ್ತಿಲ್ಲ. ಪತ್ನಿಯನ್ನು ಹೇಗಾದ್ರೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಬೇಕು ಅಂತ ಪ್ಲಾನ್ ಮಾಡಿದ ಇಬ್ಬರು ತಾಂತ್ರಿಕನ ಮೊರೆ ಹೋದ್ರು. ತಾಂತ್ರಿಕ, ಸಣ್ಣಪುಟ್ಟ ಮಂತ್ರಾನೋ, ಪೂಜೆನೋ ಹೇಳೋ ಬದಲು, ಹುಲಿಯ ಹಲ್ಲು ಮತ್ತು ಉಗುರುಗಳು ದಾಂಪತ್ಯ ಜೀವನದಲ್ಲಿ ಪ್ರಾಬಲ್ಯ ತರುತ್ತವೆ. ಹೆಂಡತಿ ನಿಯಂತ್ರಣದಲ್ಲಿ ಇರ್ತಾಳೆ ಅಂದಿದ್ದಾನೆ.
ಅಷ್ಟೇ ಇವರು ಹುಲಿ ಹಲ್ಲು ತರೋಕೆ ಪ್ಲಾನ್ ಮಾಡೇಬಿಟ್ರು. ತಮ್ಮ ಜೊತೆ ಇನ್ನೂ ಮೂವರ ಸಹಾಯ ಪಡೆದು ಕಾಡಿಗೆ ನುಗ್ಗಿದ್ರು. ಅವರಿಗೆ ಕಾಡಿನಲ್ಲಿ ಸತ್ತ ಹುಲಿ ಸಿಕ್ಕಿದೆ. ಆದ್ರೆ ಅದ್ರ ಬಳಿ ಇನ್ನೊಂದು ಹುಲಿ ಕುಳಿತಿದ್ದ ಕಾರಣ ಹಲ್ಲು ಕೀಳೋಕೆ ಆಗಿರಲಿಲ್ಲ. ಮರುದಿನ ಮತ್ತೆ ಬಂದು ಹುಲಿ ಹಲ್ಲು ಮತ್ತು ಉಗುರನ್ನು ಯಶಸ್ವಿಯಾಗಿ ತಂದು ತಾಂತ್ರಿಕನ ಕೈಗೆ ಕೊಟ್ಟಿದ್ದಾರೆ. ಹುಲಿ ಹಲ್ಲಿಗೆ ತಾಂತ್ರಿಕ ತೃಪ್ತನಾಗ್ಲಿಲ್ಲ. ಹುಲಿ ಚರ್ಮ ತೆಗೆದುಕೊಂಡು ಬನ್ನಿ ಎಂದಿದ್ದಾನೆ. ತಾಂತ್ರಿಕನ ಮಾತನ್ನು ಶಿರಸಾ ಪಾಲಿಸಿದ ಐವರು ಮತ್ತೆ ಕಾಡಿಗೆ ಹೋಗಿದ್ದಾರೆ. ಆದ್ರೆ ಆಗ ಅವ್ರ ಟೈಂ ಕೆಟ್ಟಿತ್ತು. ಇವ್ರು ಕಾಡಿಗೆ ಹೋಗೋದನ್ನು ಯಾರೋ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಐವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತಾಂತ್ರಿಕ ನಾಪತ್ತೆಯಾಗಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ. ಛಬಿ ಲಾಲ್, ರಾಜ್ಕುಮಾರ್, ಝಾಮ್ ಸಿಂಗ್, ರತ್ನೇಶ್ ಪಾರ್ಟೆ ಮತ್ತು ಮನೀಶ್ ಉಯಿಕೆ ಬಂಧಿತರು. ಹೆಂಡ್ತಿಯನ್ನು ತನ್ನ ಕಂಟ್ರೋಲ್ ನಲ್ಲಿ ಇಟ್ಕೊಂಡು ಮೆರೆಯಬೇಕು ಅಂದ್ಕೊಂಡಿದ್ದವರ ಗತಿ ಈಗ ಯಾರಿಗೂ ಬೇಡ. ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.


