Asianet Suvarna News Asianet Suvarna News

ಗಂಡನ ಫ್ರೆಂಡ್‌ ಮೇಲೆ ಲವ್‌, ಪತಿ ಹತ್ಯೆಗೆ ಪತ್ನಿ ಸುಪಾರಿ, ಹೆದರಿ ಪ್ರಿಯಕರ ಆತ್ಮಹತ್ಯೆ..!

ಇತ್ತ ಪ್ರಿಯಕರನೂ ಇಲ್ಲ ಪತಿಯೂ ಇಲ್ಲದೆ ತನ್ನ ತಾಯಿ ಹಾಗೂ ಸುಪಾರಿ ಹಂತಕರ ಜೊತೆ ಪರಪ್ಪನ ಅಗ್ರಹಾರ ಸೇರಿದ ಮಹಿಳೆ

Wife Given Supari For Kill Husband in Bengaluru grg
Author
Bengaluru, First Published Aug 20, 2022, 6:50 AM IST

ಬೆಂಗಳೂರು(ಆ.20):  ಮನೆಗೆ ಬರುತ್ತಿದ್ದ ಪತಿಯ ಸ್ನೇಹಿತನ ಮೇಲೆ ಆಕೆಗೆ ಪ್ರೇಮವಾಯಿತು. ತನ್ನ ಪ್ರೀತಿಗೆ ಅಡ್ಡವಾಗಿದ್ದ ಪತಿಯನ್ನು ಕೊಲ್ಲಲು ಪ್ರಿಯಕರನ ಜೊತೆ ಸೇರಿ 1.5 ಲಕ್ಷ ರು.ಗಳಿಗೆ ಸುಪಾರಿ ಕೊಟ್ಟಳು. ಸುಪಾರಿ ಪಡೆದ ಹಂತಕರು ಹತ್ಯೆ ಮಾಡದೆ ಬಟ್ಟೆ ಮೇಲೆ ಟೊಮೊಟಾ ಸಾಸ್‌ ಹಾಕಿ ಹತ್ಯೆಯಾಗಿದೆ ಎಂದು ಪೋಟೋ ಕಳುಹಿಸಿದರು. ಪೋಟೋ ನೋಡಿದ ಪ್ರಿಯಕರ, ಪೊಲೀಸರ ಭೀತಿಯಿಂದ ಆತ್ಮಹತ್ಯೆಗೆ ಶರಣಾದ. ಬದುಕುಳಿದ ಪತಿಗೆ ತನ್ನ ಪತ್ನಿ ಲಂಪಟನ ಗೊತ್ತಾಯಿತು. ಕೊನೆಗೆ ಇತ್ತ ಪ್ರಿಯಕರನೂ ಇಲ್ಲ ಪತಿಯೂ ಇಲ್ಲದೆ ತನ್ನ ತಾಯಿ ಹಾಗೂ ಸುಪಾರಿ ಹಂತಕರ ಜೊತೆ ಮಹಿಳೆ ಪರಪ್ಪನ ಅಗ್ರಹಾರ ಸೇರಿದ್ದಾಳೆ..!

ಇದೂ ಯಾವುದೋ ಕ್ರೈಂ ಥ್ರಿಲ್ಲರ್‌ ಚಲನಚಿತ್ರ ಅಲ್ಲ. ನಗರದ ಪೀಣ್ಯದಲ್ಲಿ ನಡೆದ ಘಟನೆ 

ತುಮಕೂರು ರಸ್ತೆ ದೊಡ್ಡಬಿದರಕಲ್ಲು ನಿವಾಸಿ ಅನುಪಲ್ಲವಿ, ಆಕೆಯ ತಾಯಿ ಅಮ್ಮಾಜಮ್ಮ, ಸುಪಾರಿ ಹಂತಕರಾದ ಹರೀಶ್‌, ನಾಗರಾಜ್‌ ಹಾಗೂ ಮುಗಿಲನ್‌ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಬಾಗಲಕುಂಟೆಯ ಅನುಪಲ್ಲವಿ ಪ್ರಿಯಕರ ಹಿಮವಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರೀತಿಗೆ ಅಡ್ಡವಾಗಿದ್ದ ಎಂಬ ಕಾರಣಕ್ಕೆ ತಮ್ಮ ಪತಿ ನವೀನ್‌ ಕುಮಾರ್‌ ಹತ್ಯೆಗೆ ಅನುಪಲ್ಲವಿ ಸುಪಾರಿ ಕೊಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

3 ಮಕ್ಕಳನ್ನು ಬಿಟ್ಟು ಬಾಯ್‌ಫ್ರೆಂಡ್‌ ಜತೆ ಹೆಂಡತಿ ಪರಾರಿ; ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಗಂಡ

ಪತಿ ಸ್ನೇಹಿತನ ಅರಳಿದ ಪ್ರೇಮ ಪಲ್ಲವಿ:

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸೀಗಲಹಳ್ಳಿ ಗ್ರಾಮದ ನವೀನ್‌ ಕುಮಾರ್‌, ದೊಡ್ಡಬಿದರಕಲ್ಲಿನಲ್ಲಿ ತನ್ನ ಪತ್ನಿ ಅನುಪಲ್ಲವಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದ. ಟಿ.ದಾಸರಹಳ್ಳಿಯಲ್ಲಿ ಮಿಲ್ಲಿಂಗ್‌ ಘಟಕ ಮಾತ್ರವಲ್ಲದೆ ಕಾರು ಚಾಲಕನಾಗಿ ಸಹ ನವೀನ್‌ ದುಡಿದು ಕುಟುಂಬ ಸಾಕುತ್ತಿದ್ದ. ಕೆಲ ತಿಂಗಳ ಹಿಂದೆ ಅತನಿಗೆ ಬಾಗಲಗುಂಟೆಯ ಹಿಮವಂತ್‌ ಪರಿಚಯವಾಯಿತು. ಕ್ರಮೇಣ ಇಬ್ಬರಲ್ಲೂ ಆತ್ಮೀಯತೆ ಮೂಡಿ ಕೊನೆಗೆ ಆತ ಕುಟುಂಬ ಸ್ನೇಹಿತನಾಗಿದ್ದ. ಈ ಗೆಳೆತನದಲ್ಲಿ ನವೀನ್‌ ಮನೆಗೆ ಆಗಾಗ್ಗೆ ಬಂದು ಹೋಗಿ ಹಿಮವಂತ್‌ ಹೋಗುತ್ತಿದ್ದ. ಆಗ ಪತಿ ಮೂಲಕ ಅನುಪಲ್ಲವಿಗೆ ಹಿಮವಂತ್‌ ಪರಿಚಯವಾಯಿತು. ಕಾಲ ಕಳೆದಂತೆ ಅವರಿಬ್ಬರಲ್ಲಿ ಸಲುಗೆ ಬೆಳೆಯಿತು ಎಂದು ಪೊಲೀಸರು ಹೇಳಿದ್ದಾರೆ.
ಪ್ರವಾಸಕ್ಕೆ ಕರೆದೊಯ್ದು ಹತ್ಯೆಗೆ ಸಂಚು:ತಮ್ಮ ಪ್ರೀತಿಗೆ ಅಡ್ಡವಾಗಿದ್ದಾನೆ ಎಂದು ಭಾವಿಸಿ ನವೀನ್‌ ಹತ್ಯೆಗೆ ಆ ಇಬ್ಬರು ನಿರ್ಧರಿಸಿದ್ದರು. ಆಗ ತಮ್ಮ ಪರಿಚಯದ ನಾಗರಾಜ್‌ ತಂಡಕ್ಕೆ ನವೀನ್‌ ಹತ್ಯೆಗೆ 1.5 ಲಕ್ಷ ರು.ಗೆ ಸುಪಾರಿ ನೀಡಿದ ಅವರು, ಮುಂಗಡವಾಗಿ ಹಂತಕರಿಗೆ 90 ಸಾವಿರ ರು. ನೀಡಿದ್ದರು. ಆಗ ತಮಿಳುನಾಡಿಗೆ ಪ್ರವಾಸ ನೆಪದಲ್ಲಿ ನವೀನ್‌ನನ್ನು ಕರೆದೊಯ್ದು ಕೊಲ್ಲುವುದು ಆರೋಪಿಗಳ ಸಂಚಾಗಿತ್ತು.

ಅಂತೆಯೇ ಜುಲೈ ತಿಂಗಳ ಕೊನೆ ವಾರದಲ್ಲಿ ತಮಿಳುನಾಡು ಪ್ರವಾಸಕ್ಕೆ ನವೀನ್‌ ಕಾರಿನಲ್ಲಿ ನಾಗರಾಜ್‌, ಹರೀಶ್‌ ಹಾಗೂ ಮುಗಿಲನ್‌ ತೆರಳಿದ್ದರು. ಇತ್ತ ತನ್ನ ಸೋದರ ಸಂಪರ್ಕಕ್ಕೆ ಸಿಗದೆ ಹೋದಾಗ ಆತಂಕಗೊಂಡ ಚಿತ್ರದುರ್ಗದಿಂದ ನಗರಕ್ಕೆ ಬಂದ ನವೀನ್‌ ಸೋದರಿ ವರಲಕ್ಷ್ಮೇ, ಪೀಣ್ಯ ಠಾಣೆ ಪೊಲೀಸರಿಗೆ ದೂರು ನೀಡಿದರು. ಆ ವೇಳೆ ಅಣ್ಣನ ನಾಪತ್ತೆ ಬಗ್ಗೆ ದೂರು ಕೊಡಲು ಅತ್ತಿಗೆ (ಪಲ್ಲವಿ) ನಿರಾಕರಿಸುತ್ತಿದ್ದಾಳೆ. ಅಣ್ಣನ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸರಿಗೆ ವರಲಕ್ಷ್ಮೇ ಹೇಳಿದ್ದಳು.

ಟೊಮೊಟಾ ಸಾಸ್‌ ಹಾಕಿ ಕೊಲೆ ಕತೆ ಹೆಣೆದರು:

ಜು.22 ರಂದು ತಮಿಳುನಾಡಿಗೆ ಪ್ರವಾಸಕ್ಕೆ ತೆರಳಿದ ಬಳಿಕ ಸುಪಾರಿ ಹಂತಕ ನಾಗರಾಜ್‌ ತಂಡಕ್ಕೆ ನವೀನ್‌ ಆತ್ಮೀಯನಾಗಿದ್ದ. ಇನ್ನೊಂದೆಡೆ ಹತ್ಯೆ ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭೀತಿಯೂ ಆರೋಪಿಗಳಿಗೆ ಶುರುವಾಗಿತ್ತು. ಮದ್ಯದ ಅಮಲಿನಲ್ಲಿ ನವೀನ್‌ಗೆ ಆತನ ಪತ್ನಿ ಹಾಗೂ ಗೆಳೆಯನ ಪ್ರೇಮ ಪುರಾಣ ಹಾಗೂ ಸುಪಾರಿ ನೀಡಿರುವ ಬಗ್ಗೆ ಹೇಳಿದ ನಾಗರಾಜ್‌, ನಿನ್ನನ್ನು ಕೊಲ್ಲುವ ಸಲುವಾಗಿ ತಮಿಳುನಾಡಿಗೆ ಕರೆ ತಂದಿರುವುದಾಗಿ ಬಾಯ್ಬಿಟ್ಟ.
ಈ ಮಾತು ಕೇಳಿ ನವೀನ್‌ಗೆ ಆತಂಕವಾಗಿದೆ. ಅಷ್ಟರಲ್ಲಿ ಸ್ನೇಹಿತರಾಗಿದ್ದ ಸುಪಾರಿ ಹಂತಕರಿಗೆ ಹೇಗಿದ್ದರು ದುಡ್ಡು ಬರುತ್ತದೆ. ಕೊಂದಿರುವುದಾಗಿ ಹೇಳಿ ಹಣ ವಸೂಲಿ ಮಾಡುವಂತೆ ಆತ ಪುಸಲಾಯಿಸಿದ್ದ. ಅಂತೆಯೇ ನವೀನ್‌ ಬಟ್ಟೆಮೇಲೆ ಟೊಮೊಟಾ ಸಾಸ್‌ಗೆ ಕುಂಕುಮ ಮಿಶ್ರಣ ಮಾಡಿ ಹಾಕಿ ಹಿಮವಂತ್‌ಗೆ ಆರೋಪಿಗಳು ವಿಡಿಯೋ ಕಾಲ್‌ ಮಾಡಿ, ನವೀನ್‌ ಕೊಂದಿರುವುದಾಗಿ ತೋರಿಸಿದ್ದರು. ಅಲ್ಲದೆ ಆತನ ವಾಟ್ಸ್‌ ಆಪ್‌ಗೆ ಸಹ ಹಿಮವಂತ್‌ ಪೋಟೋ ಕಳುಹಿಸಿದ್ದರು. ಇದಾದ ಬಳಿಕ ನಿರಂತರವಾಗಿ ಹಿಮವಂತ್‌ಗೆ ಹಣಕ್ಕಾಗಿ ಸುಪಾರಿ ಹಂತಕರು ಕರೆ ಮಾಡುತ್ತಿದ್ದರು. ಇದರಿಂದ ಆತಂಕಗೊಂಡ ಆತ, ಮುಂದೆ ತಾನು ಪೊಲೀಸರಿಗೆ ಸಿಕ್ಕಿಬೀಳುತ್ತೇನೆ ಎಂದು ಹೆದರಿ ಆ.1 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ.

ಕ್ಯಾನ್ಸರ್‌ನಿಂದ ಕುಟುಂಬ ಅನಾಥವಾಗುವ ಭಯ, ಪತ್ನಿ ಹಾಗೂ ಕಂದನ ಕೊಲೆಗೈದ ವ್ಯಕ್ತಿ ಆತ್ಮಹತ್ಯೆ!

ಇದಾದ ಎರಡು ದಿನಗಳ ಬಳಿಕ ಬೆಂಗಳೂರಿಗೆ ಮರಳಿದ ನವೀನ್‌, ಮನೆಯಲ್ಲಿದ್ದ ಪತ್ನಿ ಜತೆ ಜಗಳವಾಡಿದ್ದಾನೆ. ಅಷ್ಟರಲ್ಲಿ ನಾಪತ್ತೆ ಪ್ರಕರಣದ ತನಿಖೆ ವೇಳೆ ಅಪಹರಣ ಹಾಗೂ ಸುಪಾರಿ ಕೊಲೆ ಕೃತ್ಯ ಪತ್ತೆ ಹಚ್ಚಿದ ಪೊಲೀಸರು, ಪಲ್ಲವಿ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇರೆಗೆ ಆಕೆಯ ತಾಯಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪತ್ನಿ ಬಿಟ್ಟು ಬಿಡಿ ಎಂದ ನವೀನ್‌

ನನ್ನ ಪತ್ನಿ ತಿಳಿಯದೆ ತಪ್ಪು ಮಾಡಿದ್ದಾಳೆ. ನಾನು ದೂರು ವಾಪಸ್‌ ಪಡೆಯುತ್ತೇನೆ. ಆಕೆಯನ್ನು ಬಿಟ್ಟು ಬಿಡಿ. ಹಿಮವಂತ್‌ (ಪತ್ನಿ ಪ್ರಿಯಕರ) ಕೂಡಾ ಬದುಕುಳಿದಿಲ್ಲ. ಈ ರೀತಿ ತಪ್ಪಾಗದಂತೆ ಮುಂದೆ ಜೀವನ ಮಾಡುತ್ತೇವೆ ಎಂದು ಪೊಲೀಸರಿಗೆ ನವೀನ್‌ ಮನವಿ ಮಾಡಿದ್ದ ಎನ್ನಲಾಗಿದೆ.
 

Follow Us:
Download App:
  • android
  • ios