ಮದ್ದೂರು: ಅನೈತಿಕ ಸಂಬಂಧದ ಶಂಕೆ: ವಿಧವೆ ಕೊಲೆ, ಮಂಚದ ಸಮೇತ ಶವಕ್ಕೆ ಬೆಂಕಿ
ಮಲಗುವ ಕೋಣೆಯಲ್ಲಿಯೇ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಮಂಚದ ಹಾಸಿಗೆ ಸಮೇತ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾದ ದುಷ್ಕರ್ಮಿಗಳು.
ಮದ್ದೂರು(ಜ.11): ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ವಿಧವೆಯನ್ನು ಹತ್ಯೆಗೈದು ನಂತರ ಶವಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಭೀಕರ ಘಟನೆ ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಸೋಮವಾರ ರಾತ್ರಿ ಜರುಗಿದೆ. ಗ್ರಾಮದ ಲೇ.ಕುಮಾರ ಆರಾಧ್ಯರ ಪತ್ನಿ ಪ್ರೇಮಾ (42) ಹತ್ಯೆಯಾದವರು.
ರಾತ್ರಿ ವೇಳೆ ಈಕೆಯನ್ನು ಮಲಗುವ ಕೋಣೆಯಲ್ಲಿಯೇ ದುಷ್ಕರ್ಮಿಗಳು ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಮಂಚದ ಹಾಸಿಗೆ ಸಮೇತ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮಾರಸಿಂಗನಹಳ್ಳಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ಪ್ರೇಮಾಳ ಪತಿ ಕುಮಾರ ಆರಾಧ್ಯ 3 ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ಈಕೆ ಗ್ರಾಮದ ಸ್ವಂತ ಮನೆಯಲ್ಲಿ ಚೀಟಿ ವ್ಯವಹಾರ ನಡೆಸಿಕೊಂಡು ಒಂಟಿ ಜೀವನ ನಡೆಸುತ್ತಿದ್ದಳು.
Bengaluru Crime: ಪತಿಯ ಜತೆ ಸೇರಿ ಪ್ರಿಯಕರನ ಹತ್ಯೆ: ಶವದೊಂದಿಗೆ 6 ಕಿ.ಮೀ. ಟ್ರಿಪಲ್ ರೈಡ್!
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮಂಡ್ಯ ಮಿಮ್ಸ್ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಡಾ.ಪುಟ್ಟಸ್ವಾಮಿ ನೇತೃತ್ವದ ಸಿಬ್ಬಂದಿ ಸ್ಥಳದಲ್ಲೇ ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮದ್ದೂರು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಮನೋಜ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕಾರ್ಯ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.