ಬೆಂಗಳೂರು(ಆ.11): ನೈಸ್‌ ರಸ್ತೆಯಲ್ಲಿ ವ್ಹೀಲಿಂಗ್‌ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತ ನಗರದ ಚಂದನ್‌ (21), ಲಿಖಿತ್‌ (21), ಶ್ರೀನಗರದ ಸುಮಂತ್‌ (20) ಹಾಗೂ ವಿನಯ್‌ (28) ಬಂಧಿತರು. ಆರೋಪಿಗಳಿಂದ ವ್ಹೀಲಿಂಗ್‌ ಮಾಡುತ್ತಿದ್ದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಬ್ಯಾಟರಾಯನಪುರ ಪೊಲೀಸರು ಹೇಳಿದ್ದಾರೆ.

ಮಲ ತಂದೆಯಿಂದ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ

ಆರೋಪಿಗಳು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಗುಂಪು ಕಟ್ಟಿಕೊಂಡು ರಸ್ತೆಗಳಲ್ಲಿ ವ್ಹೀಲಿಂಗ್‌ ಮಾಡುವ ಚಟ ಅಂಟಿಸಿಕೊಂಡಿದ್ದರು. ಇತ್ತೀಚೆಗೆ ನೈಸ್‌ ರಸ್ತೆಯಲ್ಲಿ ವ್ಹೀಲಿಂಗ್‌ ಹೆಚ್ಚಾಗಿತ್ತು. ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಈ ಹಿಂದೆ ಕೂಡ ಇತರರೊಂದಿಗೆ ವ್ಹೀಲಿಂಗ್‌ ಮಾಡುತ್ತಿದ್ದ ವಿಡಿಯೋಗಳು ಪತ್ತೆಯಾಗಿದೆ. ವಿಡಿಯೋ ಆಧಾರದ ಮೇಲೆ ಉಳಿದ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.

ಎಸ್ಸೆಸ್ಸೆಲ್ಸಿ ಅನುತ್ತೀರ್ಣ: ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹದೇವಪುರ ಸಮೀಪ ಸೋಮವಾರ ನಡೆದಿದೆ.

ಕಾವೇರಿ ನಗರದ ನಿವಾಸಿ ಶಂಕರ್‌ ದಂಪತಿ ಪುತ್ರಿ ಸಂಧ್ಯಾ (16) ಮೃತ ದುರ್ದೈವಿ. ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣವಾಗಿರುವುದು ತಿಳಿದು ಬೇಸರಗೊಂಡ ಸಂಧ್ಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲ ಹೊತ್ತಿನ ಬಳಿಕ ಮೃತಳ ಮನೆಗೆ ನೆರೆಮನೆಯವರು ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕರ್‌ ದಂಪತಿ ಕೂಲಿ ಕಾರ್ಮಿಕರಾಗಿದ್ದು, ಹಲವು ದಿನಗಳಿಂದ ಕಾವೇರಿ ನಗರದಲ್ಲಿ ನೆಲೆಸಿದ್ದಾರೆ. ಎಂದಿನಂತೆ ಬೆಳಗ್ಗೆ ದಂಪತಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ತನ್ನ ಪರೀಕ್ಷೆ ಫಲಿತಾಂಶ ತಿಳಿದು ಬೇಸರಗೊಂಡ ಸಂಧ್ಯಾ, ನಂತರ ಸಂಜೆ 6 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಸಂಧ್ಯಾ ವ್ಯಾಸಂಗ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.