ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಬಂಧಿಸಿರುವ ಬಿಬಿಎಂಪಿಯ ನಾಲ್ವರು ಕಂದಾಯ ಅಧಿಕಾರಿಗಳನ್ನು(ಆರ್‌ಓ) ಹೆಚ್ಚಿನ ವಿಚಾರಣೆಗಾಗಿ ಹಲಸೂರು ಗೇಟ್‌ ಠಾಣೆ ಪೊಲೀಸರು ಮೂರು ದಿನ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು (ನ.28) : ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಬಂಧಿಸಿರುವ ಬಿಬಿಎಂಪಿಯ ನಾಲ್ವರು ಕಂದಾಯ ಅಧಿಕಾರಿಗಳನ್ನು(ಆರ್‌ಓ) ಹೆಚ್ಚಿನ ವಿಚಾರಣೆಗಾಗಿ ಹಲಸೂರು ಗೇಟ್‌ ಠಾಣೆ ಪೊಲೀಸರು ಮೂರು ದಿನ ವಶಕ್ಕೆ ಪಡೆದಿದ್ದಾರೆ.

‘ಚಿಲುಮೆ’ ಸಂಸ್ಥೆಗೆ ನಿಯಮಬಾಹಿರವಾಗಿ ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಓ) ಗುರುತಿನ ಚೀಟಿ ನೀಡಿದ ಆರೋಪದಡಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಆರ್‌ಓ ವಿ.ಬಿ.ಭೀಮಾಶಂಕರ, ಶಿವಾಜಿನಗರ ಕ್ಷೇತ್ರದ ಆರ್‌ಓ ಸುಹೇಲ್‌ ಅಹಮದ್‌, ಮಹದೇವಪುರ ಕ್ಷೇತ್ರದ ಆರ್‌ಓ ಚಂದ್ರಶೇಖರ್‌ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಎಆರ್‌ಓ ಮಹೇಶ್‌ನನ್ನು ಶನಿವಾರ ಸಂಜೆ ಬಂಧಿಸಿದ್ದರು. ಭಾನುವಾರ ಸಂಜೆ ನಾಲ್ವರು ಆರೋಪಿಗಳನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮತದಾರರ ಮಾಹಿತಿ ಕಳವು: ಚಿಲುಮೆ ಸಂಸ್ಥೆಯ ಮುಖ್ಯಸ್ಥನ ಮನೆ ಮೇಲೆ ಪೊಲೀಸರ ದಾಳಿ

ನಾಲ್ವರು ಆರೋಪಿಗಳು ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳೂ ಆಗಿದ್ದರು. ಚಿಲುಮೆ ಸಂಸ್ಥೆಗೆ ನಿಯಮಬಾಹಿರವಾಗಿ ಬಿಎಲ್‌ಓ ಗುರುತಿನ ಚೀಟಿಗಳನ್ನು ನೀಡಿದ್ದರು. ಚಿಲುಮೆ ಸಂಸ್ಥೆ ಕಚೇರಿ ಹಾಗೂ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಸೇರಿದಂತೆ ಇತರೆ ಆರೋಪಿಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ಮಾಡಿದಾಗ, ಬಿಎಲ್‌ಓ ಗುರುತಿನ ಚೀಟಿಗಳು ಸಿಕ್ಕಿದ್ದವು. ಈ ಗುರುತಿನ ಚೀಟಿಯಲ್ಲಿನ ಸೀಲು ಮತ್ತು ಸಹಿ ಆಧರಿಸಿ ಈ ನಾಲ್ವರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು. ವಿಚಾರಣೆ ವೇಳೆ ಆರೋಪಿಗಳು ಚಿಲುಮೆ ಸಂಸ್ಥೆಗೆ ನಿಯಮಬಾಹಿರವಾಗಿ ಬಿಎಲ್‌ಓ ಗುರುತಿನ ಚೀಟಿ ನೀಡಿದ್ದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದರು.

ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಕೈವಾಡ?

ಯಾರ ಸೂಚನೆ ಮೇರೆಗೆ ಚಿಲುಮೆ ಸಂಸ್ಥೆಗೆ ನಿಯಮಬಾಹಿರವಾಗಿ ಬಿಎಲ್‌ಓ ಗುರುತಿನ ಚೀಟಿ ನೀಡಲಾಗಿದೆ. ಇದರ ಹಿಂದೆ ಬಿಬಿಎಂಪಿ ಹಿರಿಯ ಅಧಿಕಾರಗಳ ಅಥವಾ ರಾಜಕಾರಣಿಗಳ ಒತ್ತಡವಿತ್ತೆ ಎಂಬುದರ ಬಗ್ಗೆಯೂ ಪೊಲೀಸರು ಆರೋಪಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರ ಸೂಚನೆ ಮೇರೆಗೆ ಚಿಲುಮೆ ಸಂಸ್ಥೆಗೆ ಬಿಎಲ್‌ಓ ಗುರುತಿನ ಚೀಟಿ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಈ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ.

ಕಿಂಗ್‌ಪಿನ್‌ ಆಪ್ತನ ವಿಚಾರಣೆ

ಇನ್ನು ಪ್ರಕರಣದ ಕಿಂಗ್‌ಪಿನ್‌ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಆಪ್ತ ಶಿವಕುಮಾರ್‌ ಎಂಬಾತನ ವಿಚಾರಣೆ ಮುಂದುವರೆಸಿರುವ ಪೊಲೀಸರು, ಭಾನುವಾರವೂ ಸಹ ಆತನನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸೋಮವಾರವೂ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್‌ಗೆ ನೋಟಿಸ್‌ ನೀಡಿ ಕಳುಹಿಸಲಾಗಿದೆ. ಈ ಶಿವಕುಮಾರ್‌ ಬಿಎಲ್‌ಓ ಗುರುತಿನ ಚೀಟಿ ಪಡೆಯಲು ಚಿಲುಮೆ ಸಂಸ್ಥೆ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ ಆರೋಪ ಕೇಳಿ ಬಂದಿದೆ.

ವೋಟರ್ ಐಡಿ ಹಗರಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹ

ಹಣಕಾಸು ವ್ಯವಹಾರ ಪರಿಶೀಲನೆ

ಪ್ರಕರಣದ ಪ್ರಮುಖ ಆರೋಪಿ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು, ಚಿಲುಮೆ ಸಂಸ್ಥೆ ಹಾಗೂ ಆರೋಪಿಯ ಬ್ಯಾಂಕ್‌ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮತದಾರರ ಮಾಹಿತಿ ಸಂಗ್ರಹಕ್ಕೆ ಆರೋಪಿ ರವಿಕುಮಾರ್‌ ಸಾವಿರಾರು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದ. ಆರೋಪಿಗಳ ಖಾತೆಯಿಂದ ಬಿಬಿಎಂಪಿಯ ಕೆಲ ಹಿರಿಯ ಅಧಿಕಾರಿಗಳಿಗೆ ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ. ಹೀಗಾಗಿ ಸಂಸ್ಥೆ ಹಾಗೂ ಆರೋಪಿಯ ಬ್ಯಾಂಕ್‌ ಖಾತೆಯಲ್ಲಿ ನಡೆದಿರುವ ಹಣಕಾಸು ವ್ಯವಹಾರ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.