ಬಿಎಂಡಬ್ಲ್ಯೂ ಬೈಕ್‌ ಖರೀದಿಸುವ ನೆಪದಲ್ಲಿ ಮಾಲಿಕನ ಮೇಲೆ ಹಲ್ಲೆ ನಡೆಸಿ ಬೈಕ್‌ ದೋಚಿ ಪರಾರಿಯಾಗಿದ್ದ ದುಬಾರಿ ವಾಹನಗಳ ಸೆಕೆಂಡ್‌ ಹ್ಯಾಂಡ್‌ ಮಾರಾಟಗಾರ ಹಾಗೂ ಆತನ ಐವರು ಸಹಚರರನ್ನು ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು (ಡಿ.23): ಬಿಎಂಡಬ್ಲ್ಯೂ ಬೈಕ್‌ ಖರೀದಿಸುವ ನೆಪದಲ್ಲಿ ಮಾಲಿಕನ ಮೇಲೆ ಹಲ್ಲೆ ನಡೆಸಿ ಬೈಕ್‌ ದೋಚಿ ಪರಾರಿಯಾಗಿದ್ದ ದುಬಾರಿ ವಾಹನಗಳ ಸೆಕೆಂಡ್‌ ಹ್ಯಾಂಡ್‌ ಮಾರಾಟಗಾರ ಹಾಗೂ ಆತನ ಐವರು ಸಹಚರರನ್ನು ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಎ.ಎಲ್‌.ವಿಶ್ವಾಸ್‌, ಎನ್‌.ಜಗನ್ನಾಥ್‌, ಎಸ್‌.ಎಸ್‌.ಗಜೇಂದ್ರ, ಲಿಖಿತ್‌ ಕುಮಾರ್‌, ಎಸ್‌.ಶಶಾಂಕ್‌ ಹಾಗೂ ಕೆ.ಪವನ್‌ ಬಂಧಿತರಾಗಿದ್ದು, ಆರೋಪಿಗಳಿಂದ 16 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಬೈಕ್‌ ಹಾಗೂ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ವಿಜಯನಗರದ ಕ್ಲಬ್‌ ರಸ್ತೆಗೆ ಬಿಎಂಡಬ್ಲ್ಯೂ ಬೈಕ್‌ ಖರೀದಿ ನೆಪದಲ್ಲಿ ಮಾಲಿಕ ಮೊಹಮ್ಮದ್‌ ಅಸೀಫ್‌ನನ್ನು ವಿಶ್ವಾಸ್‌ ಕರೆಸಿಕೊಂಡಿದ್ದ. ಬಳಿಕ ಅಸೀಫ್‌ ಮೇಲೆ ಹಲ್ಲೆ ನಡೆಸಿ ಬೈಕ್‌ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಡಿ.ಸಂತೋಷ್‌ ಕುಮಾರ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

Bengaluru: ತಾಯಿ, ಮಕ್ಕಳ ಆತ್ಮಹತ್ಯೆಗೆ ನಿದ್ರೆ ಮಾತ್ರೆ ಸೇವನೆ ಕಾರಣ

ವೃತ್ತಿ ವೈಷಮ್ಯ: ಹಲವು ವರ್ಷಗಳಿಂದ ಬಿಎಂಡಬ್ಲ್ಯೂ, ಆಡಿ ಹಾಗೂ ರೇಜ್‌ ರೋವರ್‌ ಸೇರಿದಂತೆ ದುಬಾರಿ ಮೌಲ್ಯದ ಐಷರಾಮಿ ಕಾರು ಮತ್ತು ಬೈಕ್‌ಗಳನ್ನು ಸೆಕೆಂಡ್‌ ಹ್ಯಾಂಡ್‌ ಮಾರಾಟ ಮಾಡುವ ವ್ಯವಹಾರದಲ್ಲಿ ಮೊಹಮ್ಮದ್‌ ಅಸೀಫ್‌ ಹಾಗೂ ವಿಶ್ವಾಸ್‌ ತೊಡಗಿದ್ದಾರೆ. ವಿಜಯನಗರದ ಪೈಪ್‌ಲೈನ್‌ ರಸ್ತೆಯಲ್ಲಿ ಅಸೀಫ್‌ನ ಶೋಂ ರೂಂ ಇದ್ದರೆ, ದೊಡ್ಡಬಳ್ಳಾಪುರದಲ್ಲಿ ವಿಶ್ವಾಸ್‌ ವ್ಯವಹಾರ ನಡೆಸುತ್ತಾನೆ. ದುಬಾರಿ ವಾಹನಗಳ ಮಾರಾಟ ಸಂಬಂಧ ಈ ಇಬ್ಬರಿಗೂ ಮೊದಲಿನಿಂದಲೂ ಪೈಪೋಟಿ ಇದ್ದು, ಅದೂ ವೃತ್ತಿ ವೈಷಮಕ್ಕೆ ತಿರುಗಿತ್ತು.

ಆಗಾಗ್ಗೆ ಇಬ್ಬರ ಮಧ್ಯೆ ಮಾತುಕತೆ ಹಾಗೂ ಸಣ್ಣಪುಟ್ಟಗಲಾಟೆಗಳು ನಡೆದಿದ್ದವು. ತನ್ನ ಎದುರಾಳಿ ಅಸೀಫ್‌ನ ಬ್ಯುಸಿನೆಸನ್ನು ಹೇಗಾದರೂ ಮಾಡಿ ಹಾಳು ಮಾಡಬೇಕು ಎಂದು ಹಗೆತನ ಸಾಧಿಸುತ್ತಿದ್ದ ವಿಶ್ವಾಸ್‌, ಇತ್ತೀಚೆಗೆ ಅಸೀಫ್‌ ಬಳಿ ಬಿಎಂಡಬ್ಲ್ಯೂ ಬೈಕ್‌ ಮಾರಾಟಕ್ಕಿರುವ ಬಗ್ಗೆ ಮಾಹಿತಿ ತಿಳಿದಿದ್ದ. ಆಗ ಆ ಬೈಕ್‌ ಖರೀದಿ ನೆಪದಲ್ಲಿ ಬಂದು ಅಸೀಫ್‌ ಮೇಲೆ ಗಲಾಟೆ ಮಾಡಲು ವಿಶ್ವಾಸ್‌ ಸಂಚು ರೂಪಿಸಿದ್ದ. ಅಂತೆಯೇ ಅಸೀಫ್‌ ಖಾತೆಗೆ 40 ಸಾವಿರವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿದ ವಿಶ್ವಾಸ್‌, ನನಗೆ ಬಿಎಂಡಬ್ಲ್ಯೂ ಬೈಕ್‌ ನೀಡುವಂತೆ ಒತ್ತಾಯಿಸಿದ್ದ. 

ಇದಕ್ಕೆ ಮೊದಲು ವಿರೋಧಿಸಿ ಕೊನೆಗೆ ಅಸೀಫ್‌ ಒಪ್ಪಿಕೊಂಡಿದ್ದಾನೆ. ಅದರಂತೆ ಬೈಕ್‌ ಖರೀದಿ ಸಲುವಾಗಿ ಡಿ.10ರಂದು ತನ್ನ ಸಹಚರರ ಜತೆ ವಿಜಯನಗರದ ಕ್ಲಬ್‌ ರಸ್ತೆಗೆ ವಿಶ್ವಾಸ್‌ ಬಂದಿದ್ದಾನೆ. ಅಲ್ಲಿಗೆ ಬಂದ ಅಸೀಫ್‌ಗೆ ಬೈಕನ್ನು ಟೆಸ್ಟ್‌ ರೈಡ್‌ ನೀಡುವಂತೆ ವಿಶ್ವಾಸ್‌ ಕೇಳಿದ್ದಾನೆ. ಆಗ ವಿಶ್ವಾಸ್‌ ನಡವಳಿಕೆ ಮೇಲೆ ಶಂಕೆಗೊಂಡ ಆತ, ಪೂರ್ತಿ ಹಣ ನೀಡದ ಹೊರತು ಬೈಕ್‌ ಕೊಡುವುದಿಲ್ಲ ಎಂದಿದ್ದಾನೆ. ಈ ಮಾತಿಗೆ ಕೆರಳಿದ ವಿಶ್ವಾಸ್‌ ಹಾಗೂ ಆತನ ಸಹಚರರು, ಅಸೀಫ್‌ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಅಸೀಫ್‌ ಕೈ ಮುರಿದಿದೆ. 

ಗಲಾಟೆಯಲ್ಲಿ ಅಸೀಫ್‌ ಚೀರಾಟ ಕೇಳಿ ಸ್ಥಳೀಯರು ಜಮಾಯಿಸುತ್ತಿದ್ದಂತೆ ಭೀತಿಗೊಂಡು ಆರೋಪಿಗಳು ಕಾಲ್ಕಿತ್ತಿದ್ದಾರೆ. ಪರಾರಿಯಾಗುವಾಗ ತಾವು ತಂದಿದ್ದ ಒಂದು ಕಾರನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು. ಹಲ್ಲೆಗೊಳಗಾಗಿದ್ದ ಅಸೀಫ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ವಿಜಯನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಈ ದೂರಿನ ಮೇರೆಗೆ ಕಾರ್ಯಾಚರಣೆಗಳಿದ ಇನ್‌ಸ್ಪೆಕ್ಟರ್‌ ಸಂತೋಷ್‌ ಕುಮಾರ್‌ ನೇತೃತ್ವದ ತಂಡವು, ದೊಡ್ಡಬಳ್ಳಾಪುರದಲ್ಲಿ ವಿಶ್ವಾಸ್‌ ಅಡ್ಡೆ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಜೈಲು ಪಾಲು

ವಂಚನೆಯೇ ವಿಶ್ವಾಸ್‌ ಜೀವನ: ಐಷರಾಮಿ ಕಾರು ಹಾಗೂ ಬೈಕ್‌ ಸೆಕೆಂಡ್‌ ಹ್ಯಾಂಡ್‌ ಮಾರಾಟದಲ್ಲಿ ತೊಡಗಿದ್ದ ವಿಶ್ವಾಸ್‌, ಜನರಿಗೆ ಕಡಿಮೆ ಬೆಲೆಗೆ ದುಬಾರಿ ಮೌಲ್ಯದ ವಾಹನ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ. ಹಣ ಕೇಳಿದವರ ಮೇಲೆ ಆತ ಗೂಂಡಾಗಿರಿ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಆತನ ಮೇಲೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.