Asianet Suvarna News Asianet Suvarna News

ಅಸಿಸ್ಟೆಂಟ್ ಮ್ಯಾನೇಜರ್‌ನಿಂದಲೇ ಬ್ಯಾಂಕಿಗೆ ಕನ್ನ: 2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್!

ಬ್ಯಾಂಕ್ ಅಧಿಕಾರಿಯೋರ್ವ ತನಗೆ ಅನ್ನ ನೀಡುವ ಬ್ಯಾಂಕ್‌ಗೇ ಕನ್ನ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ‌ ಈ ಕಳ್ಳ ಬ್ಯಾಂಕಿನಿಂದ ಸುಮಾರು 2.69 ಕೋಟಿ ರೂ. ಹಣವನ್ನು ಲಪಟಾಯಿಸಿ ತನ್ನ ಹೆಂಡತಿಯ ಖಾತೆಗೆ ಹಾಕಿ ನುಂಗಿದ್ದಾನೆ. 

Uttara Kannada Bank Of Baroda Branch Assistant Manager Fraud Case Transferred Crores Of Rupees To His Wife Account gvd
Author
First Published Sep 12, 2022, 10:32 PM IST

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಸೆ.12): ಬ್ಯಾಂಕ್ ಅಧಿಕಾರಿಯೋರ್ವ ತನಗೆ ಅನ್ನ ನೀಡುವ ಬ್ಯಾಂಕ್‌ಗೇ ಕನ್ನ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ‌ ಈ ಕಳ್ಳ ಬ್ಯಾಂಕಿನಿಂದ ಸುಮಾರು 2.69 ಕೋಟಿ ರೂ. ಹಣವನ್ನು ಲಪಟಾಯಿಸಿ ತನ್ನ ಹೆಂಡತಿಯ ಖಾತೆಗೆ ಹಾಕಿ ನುಂಗಿದ್ದಾನೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. ಹೌದು! ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಬ್ಯಾಂಕಿಗೆ ಪಂಗನಾಮ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. 

ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎಂಬಾತ ಕಳೆದ ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದ. ಕರ್ತವ್ಯಕ್ಕೆ ಸೇರ್ಪಡೆಗೊಂಡಾಗಿನಿಂದ ಸೆ.5ರವರೆಗೆ ಬ್ಯಾಂಕ್ ನ ಸಿಬ್ಬಂದಿಯ ಲಾಗಿನ್ ಮೂಲಕ ಕರೆಂಟ್ ಅಕೌಂಟ್‌ನಿಂದ ತನ್ನ ಪತ್ನಿ ರೇವತಿ ಗೊರೆ ಹೆಸರಿನ ಖಾತೆಗೆ ಆರೋಪಿ ಭಾರೀ ಪ್ರಮಾಣದ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಸುಮಾರು 2.69 ಕೋಟಿ ರೂ. ಹಣವನ್ನು ಹೀಗೆ ಲಪಟಾಯಿಸಿದ್ದು, ಕೆಲವು ದಿನಗಳ ಹಿಂದೆಯೇ ಬ್ಯಾಂಕಿಗೆ ಬರದೇ ನಾಪತ್ತೆಯಾಗಿದ್ದಾನೆ. 

ಕರಾವಳಿ ಕಾವಲು ಪಡೆಯ ಹೊಸ ಕಮಾಂಡರ್ ಆಗಿ ಕರ್ನಾಟಕದ ಮನೋಜ್ ನೇಮಕ

ಇನ್ನು ಬ್ಯಾಂಕಿನ ಮ್ಯಾನೇಜರ್ ಅಸಿಸ್ಟೆಂಟ್ ಮ್ಯಾನೇಜರ್ ನಾಪತ್ತೆಯಾದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು. ಅಲ್ಲದೇ, ಬ್ಯಾಂಕಿನ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿ ಕುಮಾರ್ ಬೋನಾಲ ಬ್ಯಾಂಕಿನಲ್ಲಿದ್ದ ಹಣ ಲಪಟಾಯಿಸಿ ಪರಾರಿಯಾಗಿರುವ ಬಗ್ಗೆ ಬೆಳಕಿಗೆ ಬಂದಿದ್ದು, ತಕ್ಷಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಆರೋಪಿ ಕುಮಾರ್ ಯಾರಿಗೂ ಅನುಮಾನ ಬಾರದಂತೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 

ಯಾವ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾನೋ ಆ ಖಾತೆಯನ್ನು ಪರಿಶೀಲಿಸಿದಾಗ ಯಾವುದೇ ಹಣ ಇಲ್ಲದಿರುವುದು ತಿಳಿದು ಬಂದಿದೆ. ಸದ್ಯ ಯಲ್ಲಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಕುಮಾರ್ ಪತ್ತೆಗಾಗಿ ಜಾಡು ಬೀಸಿದ್ದಾರೆ. ಆರೋಪಿಯನ್ನು ಬಂಧಿಸಿದ ನಂತರ ಹಣವನ್ನು ಎಲ್ಲಿ ಇಟ್ಟಿದ್ದಾನೆ ಎನ್ನುವ ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಬ್ಯಾಂಕಿನಲ್ಲಿದ್ದ ಗ್ರಾಹಕರ ಹಣಕ್ಕೆ ಯಾವುದೇ ತೊಂದರೆಯಾಗಿಲ್ಲ, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.  

16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು

ಜಿಲ್ಲೆಯ ಭಟ್ಕಳದಲ್ಲಿ ಕೆಲವು ತಿಂಗಳ ಹಿಂದೆ ಎಸ್‌ಬಿಐ ಬ್ಯಾಂಕಿನಲ್ಲಿ ಉದ್ಯೋಗಿಯೋರ್ವ ಇದೇ ರೀತಿ ಹಣ ವಂಚನೆ ಮಾಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಇದೀಗ ಎರಡನೇ ಪ್ರಕರಣವಾಗಿ ಯಲ್ಲಾಪುರದಲ್ಲಿ ನಡೆದಿದ್ದು, ಇಂತಹ ವಂಚನೆ ಪ್ರಕರಣ ತಡೆಯಲು ಬ್ಯಾಂಕ್ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹ.

Follow Us:
Download App:
  • android
  • ios