ಈ ಘಟನೆಯ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈವರೆಗೆ ಮೂವರನ್ನು ಬಂಧಿಸಲಾಗಿದೆ.

ಲಕ್ನೋ (ಫೆ.18): ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲ ವಿಚಾರದಲ್ಲಿ ಸಂಭವಿಸಿದ ಗಲಾಟೆ ವಧುವಿನ ಸಂಬಂಧಿಯ ಕೊಲೆಯಲ್ಲಿ ಅಂತ್ಯವಾಗಿದೆ. ಮೊದಲಿಗೆ ವಧು ಹಾಗೂ ವರನ ಕಡೆಯವರ ನಡುವೆ ಜಗಳ ನಡೆದಿದ್ದು, ಬಳಿಕ ಒಬ್ಬರಿಗೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಈ ವೇಳೆ ವಧುವಿನ ಕಡೆಯ 50 ವರ್ಷದ ಸಂಬಂಧಿಯೊಬ್ಬರು ಸಾವು ಕಂಡಿದ್ದರೆ, ವಧುವಿನ ತಾಯಿಯ ಸಂಬಂಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎನ್ನಲಾಗಿದೆ. ಒಂದು ಬಕೆಟ್‌ ಪೂರ್ತಿ ರಸಗುಲ್ಲವನ್ನು ಕದ್ದುಕೊಂಡು ಹೋಗುತ್ತಿದ್ದಾಗ, ಅದನ್ನು ಕಂಡ ವರನ ಕಡೆಯವರು ವಧುವಿನ ಸಂಬಂಧಿಗೆ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆ ಮೈನ್‌ಪುರಿ ಜಿಲ್ಲೆಯ ಕುರಾವಾಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿಕಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ವಧುವಿನ ಸಂಬಂಧಿ ಹರಿಯಾಣದ ಮೂಲದ 50 ವರ್ಷದ ರಣವೀರ್‌ ಸಿಂಗ್‌ ಮೃತ ವ್ಯಕ್ತಿ. ಈತನ ಮೇಲೆ ದೊಣ್ಣೆಗಳು ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಲಾಗಿದೆ. ಇನ್ನೊಂದೆಡೆ ಈತನ ಸಹೋದರ ಸಂಬಂಧಿ ರಾಮ್‌ ಕಿಶೋರ್‌ ಮೇಲೆಯೂ ನಾಲ್ವರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ರಜತ್‌, ಅಜಯ್‌, ಸತ್ಯಭಾನ್‌ ಹಾಗೂ ಭರತ್‌ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಕಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ರಾಮ್‌ ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವಿಷಯ ತಿಳಿದ ಬಳಿಕ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಮೈನ್‌ಪುರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ಕೇಸ್‌ಅನ್ನು ದಾಖಲು ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಶಿವರಾತ್ರಿ ಕ್ರಿಕೆಟ್‌ ಪಂದ್ಯಾವಳಿ ವೇಳೆ ಚಾಕು ಇರಿತ: ಇಬ್ಬರ ದಾರುಣ ಸಾವು!

ಮದುವೆಯ ಆರತಕ್ಷತೆಯ ವೇಳೆ ಬಂದ ಅತಿಥಿಗಳಿಗೆ ನೀಡಲು ಬಕೆಟ್‌ಗಳಲ್ಲಿ ರಸಗುಲ್ಲವನ್ನು ಹಾಕಿ ಇಡಲಾಗಿತ್ತು. ಆದರೆ, ಇಲ್ಲಿಗೆ ಬಂದಿದ್ದ ವರನ ಕಡೆಯ ರಜತ್‌ ಎನ್ನುವ ವ್ಯಕ್ತ, ಇದನ್ನು ಕದ್ದು ತಿಂದಿದ್ದಲ್ಲದೆ, ಇನ್ನೊಂದು ಬಕೆಟ್‌ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ. ಇದನ್ನು ನನ್ನ ಚಿಕ್ಕಪ್ಪ ರಾಮ್‌ಕಿಶೋರ್‌ ಆಕ್ಷೇಪಿಸಿದ್ದರು. ಇದಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿತು. ಸ್ವಲ್ಪವೇ ಹೊತ್ತಿನಲ್ಲಿ ರಜತ್‌ ಜೊತೆ ಆತನ ಮೂವರು ಸ್ನೇಹಿತರು ಸೇರಿಕೊಂಡು ಗಲಾಟೆ ಮಾಡಲು ಆರಂಭ ಮಾಡಿದರು ಎಂದು ರಣ್‌ವೀರ್‌ ಅವರ ಪತ್ರ ಸಚಿನ್‌ ಕುಮಾರ್‌ ತಿಳಿಸಿದ್ದಾನೆ.

Ramanagara: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆ್ಯಸಿಡ್‌ ದಾಳಿ ಮಾಡಿದ ಪಾಗಲ್ ಪ್ರೇಮಿ

ಸಚಿನ್ ಕುಮಾರ್ ನೀಡಿದ ಪೊಲೀಸ್ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳಾದ ರಜತ್, ಅಜಯ್, ಸತ್ಯಭಾನ್ ಮತ್ತು ಭರತ್ ವಿರುದ್ಧ ಐಪಿಸಿಯ 304 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಮದುವೆ ಮನೆಯಲ್ಲಿ ರಸಗುಲ್ಲಕ್ಕಾಗಿ ಹೊಡೆದಾಟ ನಡೆದು, ಕೊಲೆಯಲ್ಲಿ ಅಂತ್ಯಗೊಂಡಿದ್ದು ಇದು 2ನೇ ಬಾರಿಯಾಗಿದೆ.