ಲಕ್ನೋ(ಮಾ.22): ಅನುಮಾನವೆಂಬ ರೋಗಕ್ಕೆ ಮದ್ದಿಲ್ಲ ಎಂಬ ಮಾತಿದೆ, ಸದ್ಯ ವ್ಯಕ್ತಿಯೊಬ್ಬ ತನ್ನನ್ನು ನಂಬಿ ಬಂದ ಹೆಂಡತಿ ಮೇಲೆ ಅನುಮಾನಪಟ್ಟುಕೊಂಡು ಆಕೆಯ ಗುಪ್ತಾಂಗವನ್ನು ಅಲ್ಯುಮಿನಿಯಂ ತಂತಿಯಲ್ಲಿ ಹೊಲಿದಿರುವ ಹೀನಾಯ ಘಟನೆ ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಹೌದು ಡ್ರೈವರ್ ಕೆಲಸ ಮಾಡುತ್ತಿದ್ದ ಪತಿರಾಯನಿಗೆ ತನ್ನ ಹೆಂಡತಿ ಮೇಲೆ ಸಿಕ್ಕಾಪಟ್ಟೆ ಅನುಮಾನ. ಇದೇ ಕಾರಣದಿಂದ ದಂಪತಿ ನಡುವೆ ಆಗಾಗ ಜಗಳಗಳಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಅದು ಮತ್ತೊಂದು ಮಜಲು ತಲುಪಿದೆ. ಹೆಂಡತಿ ಬಳಿ ಜಗಳವಾಡಿದ ಗಂಡ ಶೀಲಗೆಟ್ಟಿಲ್ಲ ಎನ್ನುವುದಾದರೆ ಅದನ್ನು ಸಾಬೀತುಪಡಿಸು ಎಂದು ಹಠ ಹಿಡಿದಿದ್ದಾನೆ. ಅತ್ತ ಗಂಡನ ವರ್ತನೆಯಿಂದ ರೋಸಿ ಹೋಗಿದ್ದ ಹೆಂಡತಿಯೂ ಅದ್ಯಾವ ರೀತಿಯ ಪರೀಕ್ಷೆ ಮಾಡಲು ಬಯಸಿರುವೆ ಮಾಡು ಎಂದು ಹೇಳಿದ್ದಾಳೆ.

ಇಷ್ಟು ಹೇಳಿದ್ದೇ ತಡ ಪತಿರಾಯ ತನ್ನ ಹೆಂಡತಿಯನ್ನು ನೆಲಕ್ಕೆ ಕೆಡವಿ ಕೈಕಾಲುಗಳನ್ನು ಬಿಗಿದು, ತನ್ನ ಬಳಿ ಇದ್ದ ಸೂಜಿಗೆ ಅಲ್ಯುಮಿನಿಯಂ ತಂತಿ ಹಾಕಿ ಪತ್ನಿಯ ಗುಪ್ತಾಂಗವನ್ನು ಹೊಲಿದು ಬಂದ್‌ ಮಾಡಿದ್ದಾನೆ. ಎಷ್ಟೇ ಕಿರುಚಿದರೂ ಕರುಣೆ ತೋರದ ಆರೋಪಿ, ಧಾರಾಕಾರ ರಕ್ತ ಸುರಿಯತೊಡಗಿದಾಗ ಬಿಟ್ಟು ಪರಾರಿಯಾಗಿದ್ದಾನೆ. ಹೀಗಿರುವಾಗ ಹೆಂಡತಿ ಆ ನೋವಿನ ನಡುವೆಯೇ ತನ್ನ ತಾಯಿ ಮನೆಗೆ ಕರೆ ಮಾಡಿದ್ದಾಳೆ. 

ಮಗಳ ಧ್ವನಿ ಕೇಳಿ ಕಂಗಾಲಾದ ತಾಯಿ ಬಂದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಿದ ತಜ್ಞ ವೈದ್ಯರ ತಂಡ, ದೌರ್ಜನ್ಯ ನಡೆದಿರುವುದನ್ನು ಖಚಿತಪಡಿಸಿದೆ. ಮಹಿಳೆಗೆ ಆಗಿರುವ ಗಾಯಗಳು ಗಂಭೀರ ಸ್ವರೂಪದ್ದಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಹುಡುಕಾಟ ಆರಂಭಿಸಿದ್ದಾರೆ.