ಬೀದರ್‌ನ ಹುಮನಾಬಾದ್ ಜೈಲಿನಲ್ಲಿ, ತಾಯಿಯ ಕೊಲೆ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿದ್ದ ಖಂಡಪ್ಪ ಮೇತ್ರೆ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಹ ಖೈದಿಗಳ ಕಿರುಕುಳ ಮತ್ತು ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

ಬೀದರ್ (ನ.16): ಜೈಲು ಸಿಬ್ಬಂದಿಯ ನಿರ್ಲಕ್ಷ್ಯ, ಸಹಖೈದಿಗಳ ಕಿರುಕುಳದಿಂದ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಆತ್ಮ೧ಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ನಲ್ಲಿ ನಡೆದಿದೆ.

ಖಂಡಪ್ಪ ಮೇತ್ರೆ (46), ಮೃತ ದುರ್ದೈವಿ, ಬಸವಕಲ್ಯಾಣ ತಾಲೂಕಿನ ಗೌರ್ ಗ್ರಾಮದ ನಿವಾಸಿಯಾಗಿದ್ದ ಖಂಡಪ್ಪ ಮೇತ್ರಿ. ಏಪ್ರಿಲ್ 14, 2025ರಂದು ನಡೆದ ತನ್ನ ಸ್ವಂತ ತಾಯಿ ಸುಂದರಾಬಾಯಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಹೆತ್ತತಾಯಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಹುಲಸೂರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರಿಯರು ದೂರು ನೀಡಿದ್ದರು. ಈ ವಿಚಾರಣೆ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳಿನಿಂದ ಹುಮನಾಬಾದ್ ಜೈಲಿನಲ್ಲಿದ್ದ ಆರೋಪಿ.

ಸಹ ಕೈದಿಗಳಿಂದ ಕಿರುಕುಳದಿಂದಲೇ ಸಾವು: ಆರೋಪ

ಜೈಲಿನಲ್ಲಿ ಸಹ ಕೈದಿಗಳು ದಿನನಿತ್ಯ ಕಿರುಕುಳ ಕೊಡುತ್ತಿದ್ದರು ಇದರಿಂದ ಬೇಸತ್ತು ನಿನ್ನೆ ಸಂಜೆ ಮರವೇರಿ ಬಿಲ್ದಿಂಗ್‌ನಿಂದ ಜಿಗಿದು ಮೃತಪಟ್ಟಿದ್ದಾರೆ. ಸಹ ಕೈದಿಗಳ ಕಿರುಕುಳ ಕುರಿತು ಜೈಲರ್ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜೈಲು ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಮೃತನ ಮಗಳು ಆರೋಪಿಸಿದ್ದಾರೆ.

ಸಾವಿನ ತನಿಖೆ ಆಗ್ರಹ

ಸಹ ಕೈದಿಗಳು ನಮ್ಮ ತಂದೆಗೆ ಕಿರುಕುಳ ಕೊಡಲು ಯಾರು? ಜೈಲಾಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರು ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ನಮ್ಮ ತಂದೆ ಸಾವಿನ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ಆಗಬೇಕು. ಕಿರುಕುಳ ಕೊಡಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ ತನಿಖೆ ಆಗಬೇಕು. ಜೊತೆಗೆ ನಿರ್ಲಕ್ಷ್ಯವಹಿಸಿದ ಜೈಲು ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.