ಅಕ್ರಮವಾಗಿ ನಗರದಲ್ಲಿ ನೆಲೆಸಿ ನಕಲಿ ಪಾಸ್‌ಪೋರ್ಚ್‌ ಸೃಷ್ಟಿಸಿ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ  ಉಗಾಂಡಾ ಪ್ರಜೆಯ ಗಡಿಪಾರಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು (ಜು.29): ನಕಲಿ ವೀಸಾ ಪಾಸ್‌ಪೋರ್ಟ್ ಸೃಷ್ಟಿಸಿ ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ ಆರೋಪದ ಮೇರೆಗೆ ವಿದೇಶಿ ಪ್ರಜೆಯೊಬ್ಬನನ್ನು ಸ್ವದೇಶಕ್ಕೆ ಗಡಿಪಾರು ಮಾಡಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌. ಪ್ರತಾಪ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಉಗಾಂಡ ಮೂಲದ ಬೋಸ್ಕೋ ಕಾವ್ಸೇಸಿ ಗಡಿಪಾರು ಆಗಿದ್ದು, ಮೂರು ದಿನಗಳ ಹಿಂದೆ ಆತನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ವಿಚಾರಣೆ ವೇಳೆ ಮಾನವ ಕಳ್ಳ ಸಾಗಾಣಿಕೆ ಹಾಗೂ ನಕಲಿ ದಾಖಲೆ ಸೃಷ್ಟಿಕೃತ್ಯಗಳು ಬೆಳಕಿಗೆ ಬಂದ್ದವು. ಕೊನೆಗೆ ಬಾಣಸವಾಡಿ ಪೊಲೀಸರ ವರದಿ ಹಿನ್ನೆಲೆಯಲ್ಲಿ ಆರೋಪಿಯನ್ನು ಆಯುಕ್ತರು ಗಡಿಪಾರು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬೋಸ್ಕೋ 2005ರಲ್ಲಿ ಭಾರತಕ್ಕೆ ಬಂದಿದ್ದ. ಬಳಿಕ ನಗರಕ್ಕೆ ಆಗಮಿಸಿದ ಆತ, ಬಾಣಸವಾಡಿ ಸಮೀಪ ಲಿಂಗರಾಜಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಜು.20ಕ್ಕೆ ವಿದೇಶಿಯ ಪ್ರಾದೇಶಿಕ ನೊಂದಣಿ ಕಚೇರಿಗೆ ತೆರಳಿದ್ದ ಆತ, ತನ್ನ ವೀಸಾ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದ. ಆಗ ಆರೋಪಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಎಫ್‌ಆರ್‌ಆರ್‌ಓ ಅಧಿಕಾರಿಗಳಿಗೆ ಗೊತ್ತಾಗಿದೆ. 

ಕೂಡಲೇ ಬಾಣಸವಾಡಿ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 11ನೇ ಎಸಿಎಂಎಂ ಕೋರ್ಚ್‌ನಲ್ಲಿ ಸಚ್‌ರ್‍ ವಾರಂಟ್‌ ಪಡೆದು ಜು.25ರಂದು ಲಿಂಗರಾಜಪುರದಲ್ಲಿದ್ದ ಬೋಸ್ಕೋ ನಿವಾಸದ ಮೇಲೆ ಬಾಣಸವಾಡಿ ಪೊಲೀಸರು ದಾಳಿ ನಡೆಸಿದರು.

ಆಗ 24 ಮಹಿಳೆಯರು ಹಾಗೂ ಇಬ್ಬರು ಪುರುಷರ ಪಾಸ್‌ಪೋರ್ಟ್ ಗಳು ಪತ್ತೆಯಾಗಿವೆ. ಇದಲ್ಲದೆ, ಲ್ಯಾಪ್‌ಟಾಪ್‌, ಡಿಎಲ್‌, ಬ್ಯಾಂಕ್‌ ಖಾತೆ ವಿವರ, ವೀಸಾ ಹಾಗೂ ಪಾಸ್‌ಪೋರ್ಟ್ ಜೆರಾಕ್ಸ್‌ಗಳು ಸಿಕ್ಕಿದ್ದವು. ವೀಸಾ ಅವಧಿ ಮುಗಿದ ಬಳಿಕ 17 ವರ್ಷಗಳಿಂದ ಆರೋಪಿ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ. ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ನಕಲಿ ದಾಖಲೆಗಳನ್ನು ಆರೋಪಿ ನೀಡುತ್ತಿದ್ದ. ಇದರಿಂದ ಮಾನವ ಕಳ್ಳ ಸಾಗಾಣಿಕೆಗೆ ಆತ ನೆರವಾಗಿದ್ದ. ಆರೋಪಿ ಕುರಿತು ಕೇಂದ್ರ ವಿದೇಶಾಂಗ ಹಾಗೂ ಗೃಹ ಇಲಾಖೆಗೆ ಮಾಹಿತಿ ನೀಡಲಾಯಿತು. ಕೊನೆಗೆ ಆತನನ್ನು ಸ್ವದೇಶಕ್ಕೆ ಗಡಿಪಾರು ಮಾಡಲಾಗಿದ್ದು, ಬೆಂಗಳೂರಿಗೆ ಮತ್ತೆ ಬಾರದಂತೆ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳ ಶಿಕ್ಷೆ ಅನುಭವಿಸಿದ್ದ: ವೀಸಾ ಅವಧಿ ಮುಗಿದ ಬಳಿಕವು ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದ ಮೇರೆಗೆ 2006ರಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು. ಆಗ 6 ತಿಂಗಳು ಜೈಲಿನಲ್ಲಿದ್ದ ಆರೋಪಿಗೆ ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿತ್ತು. ಆದರೆ ಜೈಲಿನಿಂದ ಹೊರ ಬಂದ ನಂತರ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಕೋಟೆ ಪೊಲೀಸರಿಂದ ಅಕ್ರಮ ಬಾಂಗ್ಲನ್ನರ ಶೋಧ: ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯದಲ್ಲಿ ಸೆಲೂನ್‌ಗಳನ್ನು ನಡೆಸುತ್ತಿದ್ದು ಇದರಿಂದ ಇಲ್ಲಿನ ಮೂಲ ಕ್ಷೌರಿಕ ವೃತ್ತಿ ನಂಬಿರುವವರಿಗೆ ಹೊಡೆತ ಬಿದ್ದಿದೆ ಎಂದು ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಆರೋಪಿಸಿದ ಬೆನ್ನಲ್ಲೇ ಬಾಗಲಕೋಟೆ ಪೊಲೀಸರು ನಗರದ ಸೆಲೂನ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ರಮ ಬಾಂಗ್ಲಾ ವಲಸಿಗರು ಯಾರೂ ನಗರದಲ್ಲಿ ಸೆಲೂನ್‌ ನಡೆಸುತ್ತಿರುವ ಬಗ್ಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಜಯಪ್ರಕಾಶ್‌, ಬಾಂಗ್ಲಾದೇಶದ ಅಕ್ರಮ ವಲಿಸಿಗರು ಕ್ಷೌರಿಕ ಅಂಗಡಿ ಇಟ್ಟಿರುವ ಆರೋಪದ ಮೇಲೆ ಕೆಲವು ಅಂಗಡಿಗಳನು ವಿಚಾರಣೆ ಮಾಡಲಾಗಿದೆ. ಡೆಲ್ಲಿ ಕಟಿಂಗ್‌ ಸಲೂನ್‌ ಶಾಪ್‌ ಎಂದು ಹೆಸರಿರುವ ಸೆಲೂನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಅಲ್ಲಿದ್ದ ಮೂವರು ಕ್ಷೌರಿಕರು ಉತ್ತರ ಪ್ರದೇಶದವರು ಎಂದು ಗೊತ್ತಾಗಿದೆ. ಅವರ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡನ್ನು ಸಹ ಚೆಕ್‌ ಮಾಡಲಾಗಿದ್ದು, ದಾಖಲೆಗಳ ನೈಜತೆಗಾಗಿ ಅಲ್ಲಿನ ಅ​ಧಿಕಾರಿಗಳ ಮೂಲಕ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿರುವ ಕ್ಷೌರದ ಅಂಗಡಿಗಳ ಸಂಘಟನೆಯ ನಿಯಮಗಳ ಪಾಲನೆಗೆ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದು, ಸದ್ಯ ಯಾವುದೇ ಗೊಂದಲಗಳಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.