ಬೆಂಗಳೂರು(ನ.22): ಅಕ್ರಮ ಚಿನ್ನಾಭರಣ ಸಾಗಾಣಿಕೆಯಲ್ಲಿ ತೊಡಗಿದ್ದ ಆಭರಣ ಮಳಿಗೆಯ ಇಬ್ಬರು ಕೆಲಸಗಾರರನ್ನು ಶುಕ್ರವಾರ ರಾತ್ರಿ ಬಂಧಿಸಿ ಸುಮಾರು . 3 ಕೋಟಿ ರು. ಗೂ ಅಧಿಕ ಮೌಲ್ಯದ 6 ಕೆ.ಜಿ. ಚಿನ್ನಾಭರಣವನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

"

ಮುಂಬೈ ಮೂಲದ ದಲ್ಪತ್‌ ಸಿಂಗ್‌ ಹಾಗೂ ರಾಜಸ್ಥಾನದ ವಿಕಾಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 65 ನೆಕ್ಲಸ್‌, 7 ಜೊತೆ ಬಳೆಗಳು ಹಾಗೂ 150 ಒಲೆಗಳು ಸೇರಿದಂತೆ 6 ಕೆ.ಜಿ. ತೂಕದ 55 ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಟಿ ಮಾರ್ಕೆಟ್‌ ಹತ್ತಿರದ ದೊಡ್ಡಪೇಟೆ ವೃತ್ತದ ಬಳಿ ರಾತ್ರಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಅದೇ ಮಾರ್ಗದಲ್ಲಿ ಬಂದ ಆರೋಪಿಗಳ ವಾಹನವನ್ನು ಅಡ್ಡಗಟ್ಟಿಪೊಲೀಸರು ತಪಾಸಣೆಗೊಳಪಡಿಸಿದಾಗ ಆಭರಣ ಪತ್ತೆಯಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ನಕಲಿ ಪೊಲೀಸರ ಜತೆಗೂಡಿ ಅಸಲಿ ಪೊಲೀಸ್‌ ದರೋಡೆ

ಈ ಆಭರಣಗಳ ಕುರಿತು ಪರಿಶೀಲನೆ ನಡೆದಿದೆ. ವಿಚಾರಣೆ ವೇಳೆ ಆರೋಪಿಗಳು ಇವು ಅಸಲಿ ಬಂಗಾರದ ಆಭರಣವಲ್ಲ. ಶೇ.1ರಷ್ಟು ಮಾತ್ರ ಚಿನ್ನವಿದೆ ಎಂದು ಹೇಳಿಕೆ ನೀಡಿದ್ದರು. ಬಳಿಕ ಪರೀಕ್ಷೆಗೊಳಪಡಿಸಿದಾಗ ಅಸಲಿ ಚಿನ್ನ ಎಂಬುದು ಗೊತ್ತಾಯಿತು. ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಆಭರಣ ಕುರಿತು ಆದಾಯ ತೆರಿಗೆ ಇಲಾಖೆಗೆ ಕೂಡಾ ಮಾಹಿತಿ ಕೊಡಲಾಗಿದೆ. ಹಾಗೆ ಆಭರಣದ ಮಾಲೀಕರ ಬಗ್ಗೆ ಪೊಲೀಸರು ಸಹ ತನಿಖೆ ಮುಂದುವರೆಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಬಸವನಗುಡಿ ತಲುಪಬೇಕಿದ್ದ ಒಡವೆ:

ನಗತರ ಪೇಟೆಯಲ್ಲಿ ಮುಂಬೈ ಮೂಲದ ಮಹೇಂದ್ರ ಸಿಂಗ್‌ ಎಂಬುವರಿಗೆ ಸೇರಿದ ‘ಎಸ್‌ಎಸ್‌ ಜ್ಯುವೆಲ​ರ್‍ಸ್’ ಹೆಸರಿನಲ್ಲಿ ಆಭರಣ ಮಾರಾಟ ಮಳಿಗೆ ಇದೆ. ಮುಂಬೈ ಹಾಗೂ ಗುಜರಾತ್‌ ಸೇರಿದಂತೆ ದೇಶ-ವಿದೇಶದಿಂದ ಸಗಟು ರೂಪದಲ್ಲಿ ಚಿನ್ನ ತಂದು ಆತ, ಬಳಿಕ ವಿವಿಧ ವಿನ್ಯಾಸದ ಆಭರಣ ತಯಾರಿಸಿ ಬೆಂಗಳೂರಿನ ಚಿನ್ನಾಭರಣ ಮಾರಾಟ ಮಳಿಗೆಗಳಿಗೆ ಮಾರುತ್ತಾನೆ. ಇತ್ತೀಚೆಗೆ ಮುಂಬೈನಿಂದ ಕೊರಿಯರ್‌ ಮೂಲಕ ಎಸ್‌ಎಸ್‌ ಜ್ಯುವೆಲ​ರ್‍ಸ್ಗೆ 6 ಕೆ.ಜಿ. ಚಿನ್ನ ಬಂದಿತ್ತು. ಅಂತೆಯೇ ಆ ಬಂಗಾರದಲ್ಲಿ 65 ನೆಕ್ಲಸ್‌, 7 ಜೊತೆ ಬಳೆಗಳು ಹಾಗೂ 150 ಒಲೆಗಳು ಸೇರಿದಂತೆ ವಿವಿಧ ವಿನ್ಯಾಸ ಒಡವೆ ತಯಾರಿಸಿದ್ದರು. ಈ ಒಡವೆಯನ್ನು ಬಸವನಗುಡಿಯ ಬುಲ್‌ ಟೆಂಪಲ್‌ ಹತ್ತಿರ ಮನೆಯಲ್ಲಿ ಸುರಕ್ಷಿತವಾಗಿಡಲು ದಲ್ಪತ್‌ ಸಿಂಗ್‌ ಹಾಗೂ ವಿಕಾಸ್‌ಗೆ ಮಾಲೀಕ ಮಹೇಂದರ್‌ ಸಿಂಗ್‌ ಸೂಚಿಸಿದ್ದರು ಎನ್ನಲಾಗಿದೆ.

ಮಾಲೀಕರ ಸೂಚನೆ ಮೇರೆಗೆ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ಕೂಟರ್‌ನಲ್ಲಿ ಬಂಗಾರ ತೆಗೆದುಕೊಂಡು ಕೆಲಸಗಾರರು ತೆರಳುತ್ತಿದ್ದರು. ಅದೇ ವೇಳೆ ಸಿಟಿ ಮಾರ್ಕೆಟ್‌ ಠಾಣೆ ಕಾನ್‌ಸ್ಟೇಲ್‌ಗಳಾದ ಹನುಮಂತು ಹಾಗೂ ಆನಂದ್‌, ದೊಡ್ಡಪೇಟೆ ವೃತ್ತದಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಆ ಮಾರ್ಗದಲ್ಲಿ ಬಂದ ಆರೋಪಿಗಳ ಸ್ಕೂಟರ್‌ನ್ನು ಸಿಬ್ಬಂದಿ ಅಡ್ಡಗಟ್ಟಿದ್ದಾರೆ. ಆದರೆ ಪೊಲೀಸರನ್ನು ಕಂಡ ಕೂಡಲೇ ಅವರ ಮುಖಭಾವದಲ್ಲಿ ಭೀತಿ ಆವರಿಸಿದೆ. ಈ ನಡವಳಿಕೆಯಿಂದ ಗುಮಾನಿಗೊಂಡ ಪೊಲೀಸರು, ಸ್ಕೂಟರ್‌ನ್ನು ವಶಕ್ಕೆ ಪಡೆದು ಬ್ಯಾಗ್‌ ಪರಿಶೀಲಿಸಿದಾಗ ಅಪಾರ ಪ್ರಮಾಣದ ಬಂಗಾರ ಪತ್ತೆಯಾಗಿದೆ. ಕೂಡಲೇ ಪಿಎಸ್‌ಐ ಸವಿತಾ ಬಬಲೇಶ್ವರ್‌ ಅವರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ತೆರಳಿದ ಪಿಎಸ್‌ಐ, ಬಂಗಾರದ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ವಿಚಾರಿಸಿದ್ದಾರೆ. ಆಗ ಇದು ಅಸಲಿ ಬಂಗಾರವಲ್ಲ. ನಕಲಿ ಎಂದೆಲ್ಲ ವಿಕಾಸ್‌ ಹಾಗೂ ದಲ್ಪತ್‌ ಸಿಂಗ್‌ ವಾದಿಸಿದ್ದಾರೆ. ಆದರೆ ಅಕ್ಕಸಾಲಿಗರ ಮೂಲಕ ಪರೀಕ್ಷಿಸಿದಾಗ ಅಸಲಿ ಚಿನ್ನ ಎಂಬುದು ಖಚಿತವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಳಿಗೆಯಲ್ಲೇ 1.5 ಕೆ.ಜಿ. ಚಿನ್ನ

ನಗತರ ಪೇಟೆಯ ಎಸ್‌ಎಸ್‌ ಜ್ಯುವೆಲ​ರ್‍ಸ್ ಮಳಿಗೆಯಲ್ಲಿ ಇನ್ನೂ 1.5 ಕೆ.ಜಿ. ಚಿನ್ನವಿದೆ. ಹೀಗಾಗಿ ಸುರಕ್ಷಿತ ದೃಷ್ಟಿಯಿಂದ ಬುಲ್‌ಟೆಂಪಲ್‌ ಮನೆಯಲ್ಲಿ 6 ಕೆ.ಜಿ. ಆಭರಣ ಇಡಲು ಹೋಗುತ್ತಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಆದರೆ ಮಳಿಗೆಯಲ್ಲಿ ಯಾಕೆ 1.5 ಕೆ.ಜಿ. ಬಂಗಾರ ಉಳಿಸಿದ್ದರು ಎಂಬುದಕ್ಕೆ ಸೂಕ್ತ ಉತ್ತರ ಸಿಕ್ಕಿಲ್ಲ. ಹೀಗಾಗಿ ಆರೋಪಿಗಳ ಗೊಂದಲಮಯ ಹೇಳಿಕೆ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದೊಡ್ಡ ಪ್ರಮಾಣದ ಬಂಗಾರದ ಮೂಲದ ಪತ್ತೆಗೆ ತನಿಖೆ ನಡೆದಿದೆ. ಜಪ್ತಿಯಾದ ಬಂಗಾರಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಆದಾಯ ತೆರಿಗೆ ಇಲಾಖೆಗೆ ಕೂಡ ಮಾಹಿತಿ ಕೊಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.