ಬೆಂಗಳೂರು(ಏ.04): ಲಾಕ್‌ಡೌನ್‌ ವೇಳೆ ಡ್ರಗ್ಸ್‌ ದಂಧೆ ಶುರು ಮಾಡಿದ್ದ ಖಾಸಗಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಯನಗರದ 7ನೇ ಬ್ಲಾಕ್‌ ನಿವಾಸಿ ಜೇಡನ್‌ ಸೌದ್‌ ಹಾಗೂ ಬನಶಂಕರಿ 2ನೇ ಹಂತದ ನಾಗರಾಜ್‌ ರಾವ್‌ ಬಂಧಿತರಾಗಿದ್ದು, ಆರೋಪಿಗಳಿಂದ ಎಲ್‌ಎಸ್‌ಡಿ, ಎಕ್ಸ್‌ಟೈಸಿ ಮಾತ್ರೆಗಳು ಸೇರಿದಂತೆ 10 ಲಕ್ಷ ಮೌಲ್ಯದ ಡ್ರಗ್ಸ್‌, ಎರಡು ಮೊಬೈಲ್‌ ಹಾಗೂ  8 ಸಾವಿರ ಹಣ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡಿರುವ ಆರೋಪಿಗಳ ಸ್ನೇಹಿತರಾದ ಅನೂಜ್‌ ಹಾಗೂ ಹರ್ಷವರ್ಧನ್‌ ಪತ್ತೆ ಮಾಡಲಾಗುತ್ತಿದೆ.

ಕಿಟಕಿ ಪಕ್ಕ ಮಲಗುವಾಗ ಹುಷಾರ್‌..!

ಬನಶಂಕರಿ ಸಮೀಪದ ಕೆ.ಆರ್‌ ರಸ್ತೆ ಸಮೀಪ ಅಕ್ಷ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದ ಪುಟ್‌ಪಾತ್‌ ಮೇಲೆ ಡ್ರಗ್ಸ್‌ ಮಾರಾಟಕ್ಕೆ ಇಬ್ಬರು ಪೆಡ್ಲರ್‌ಗಳು ಹೊಂಚು ಹಾಕಿರುವ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಾಜ್‌ ಕುಟುಂಬ ಮೂಲತಃ ಬಳ್ಳಾರಿ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜೇಡನ್‌ ಹಾಗೂ ನಾಗರಾಜ್‌ ಸಹಪಾಠಿಗಳಾಗಿದ್ದರು. ಲಾಕ್‌ಡೌನ್‌ ವೇಳೆ ಜೇಡನ್‌, ಡಾರ್ಕ್‌ನೆಟ್‌ ಮೂಲಕ ಡ್ರಗ್ಸ್‌ ಖರೀದಿಸಿ ಬಳಿಕ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಇದಕ್ಕೆ ನಾಗರಾಜ್‌, ಅನೂಜ್‌ ಹಾಗೂ ಹರ್ಷವರ್ಧನ್‌ ಸಾಥ್‌ ಕೊಟ್ಟಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಆರೋಪಿಗಳು ಈ ದಂಧೆಗಿಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.