ಬೆಂಗಳೂರು(ಏ.02): ರಾತ್ರಿ ಬೇಸಿಗೆ ಸೆಕೆಗೆ ಸಹಿಸಲಾರದೆ ಕಿಟಕಿ ತೆಗೆದು ಮಲಗುವ ಜನರಿಂದ ಚಿನ್ನದ ಸರ ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ ರಾಜ್ಯದ ದುಂಡಿಗಲ್‌ ಜಿಲ್ಲೆಯ ಮಲ್ಲಂಪೇಟೆ ನಿವಾಸಿ ಬಸವರಾಜು ಬಂಧಿತನಾಗಿದ್ದು, ಆರೋಪಿಯಿಂದ 16.41 ಲಕ್ಷ ಮೌಲ್ಯದ 333.8 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನನ್ನು ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 32 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ  ಕೆಂಗೇರಿ ಸಮೀಪ ಮನೆಯಲ್ಲಿ ಕಿಟಕಿ ಪಕ್ಕದ ಟೇಬಲ್‌ ಮೇಲಿಟ್ಟಿದ್ದ ಸರವನ್ನು ಆರೋಪಿ ಕದ್ದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿನ್ನ ದೋಚಿದ್ದ ಗ್ಯಾಂಗ್‌: 400 ಕಿ.ಮೀ ಚೇಸ್‌ ಮಾಡಿ ಕಳ್ಳನ ಬಂಧನ

ಕೆಲ ತಿಂಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಆತನನ್ನು ಹೈದರಾಬಾದ್‌ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೆಂಗೇರಿ ಪೊಲೀಸರು, ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿಯನ್ನು ಜೈಲಿನಿಂದ ವಶಕ್ಕೆ ಪಡೆದು ನಗರಕ್ಕೆ ತಂದು ವಿಚಾರಣೆ ನಡೆಸಿದ್ದರು. ಆಗ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.