* ಹೊರರಾಜ್ಯದಿಂದ ಮಾದಕ ವಸ್ತು ತಂದು ಮಾರುತ್ತಿದ್ದ ಆರೋಪಿಗಳು* ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ ವಿದ್ಯಾರ್ಥಿಗಳು * ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ
ಬೆಂಗಳೂರು(ಮೇ.24): ಐಷಾರಾಮಿ ಜೀವನ ಹಾಗೂ ಶೋಕಿಗೆ ಹಣ ಹೊಂದಿಸಲು ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಳೇಕಹಳ್ಳಿ ಅನುಗ್ರಹ ಲೇಔಟ್ ನಿವಾಸಿ ವಿ.ಮನೋರಂಜಿತ್ (20) ಮತ್ತು ಬೊಮ್ಮನಹಳ್ಳಿ ನಿವಾಸಿ ಎಂ.ಸುಗೇಶ್ ಕುಮಾರನ್ (20) ಬಂಧಿತರು. ಇವರಿಂದ 51.44 ಗ್ರಾಂ ತೂಕದ ಎಕ್ಸ್‌ಟೆಸಿ ಟ್ಯಾಬ್ಲೆಟ್, 3,850 ರು.ನಗದು, ಕೃತ್ಯಕ್ಕೆ ಬಳಸಿದ್ದ ಎರಡು ಐಫೋನ್, ಹುಂಡೈ ಕಾರು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
500 ನೋಟು, ಸಿಗರೆಟ್ ಪ್ಯಾಕ್‌ನಲ್ಲಿ ಮಾದಕ ವಸ್ತು ಅಡಗಿಸಿಟ್ಟು ಮಾರಾಟ..!
ಮೇ 21ರಂದು ಬನಶಂಕರಿ ಮೂರನೇ ಹಂತದ ನೂರಡಿ ವರ್ತುಲ ರಸ್ತೆಯ ಹೊಸಕೆರೆಹಳ್ಳಿ ಕೆಇಬಿ ಜಂಕ್ಷನ್‌ನಲ್ಲಿ ಇಬ್ಬರು ಅಪರಿಚಿತರು ಕಾರು ನಿಲ್ಲಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳು ತಮಿಳುನಾಡು ಮೂಲದವರಾಗಿದ್ದು, ಆರೋಪಿ ವಿ.ಮನೋರಂಜಿತ್ ನಗರದ ಜಯನಗರ 9ನೇ ಬ್ಲಾಕ್‌ನ ಮಹಾವೀರ್ ಜೈನ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಆರೋಪಿ ಎಂ.ಸುಗೇಶ್ ಕುಮಾರನ್ ಅಂತಿಮ ವರ್ಷದ ಬಿಎಂಎಸ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾನೆ. ಆರೋಪಿಗಳು ಡ್ರಗ್‌್ಸ ವ್ಯಸನಿಗಳಾಗಿದ್ದು, ಹೊರರಾಜ್ಯದಿಂದ ಮಾದಕವಸ್ತು ಎಕ್ಸ್‌ಟೆಸಿ ಟ್ಯಾಬ್ಲೆಟ್ ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
