ಬೆಂಗಳೂರು(ಸೆ.04):ಮನೆ ಬಿಟ್ಟು ಹೋಗು ಎಂದು ಜಗಳ ತೆಗೆದ ಸ್ನೇಹಿತನನ್ನು ಹತ್ಯೆ ಮಾಡಿ ಕೆರೆಯಲ್ಲಿ ಬಿಸಾಡಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಯಸಂದ್ರ ನಿವಾಸಿ ಜೈಹಿಂದ್‌ ಯಾದವ್‌ (28) ಕೊಲೆಯಾದವ. ಈ ಸಂಬಂಧ ಕೊಲೆ ಆರೋಪಿಗಳಾದ ಸಂಜಯ್‌ ಚೌಹಾಣ್‌ ಹಾಗೂ ರವಿ ಶರ್ಮಾ ಎಂಬುರನ್ನು ಬಂಧಿಸಲಾಗಿದೆ.

ಕೊಲೆಯಾದ ಜೈಹಿಂದ್‌ ಹಾಗೂ ಆರೋಪಿಗಳು ಮೂಲತಃ ಉತ್ತರ ಪ್ರದೇಶದವರಾಗಿದ್ದು, ನಗರದಲ್ಲಿ ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದರು. ಕೋವಿಡ್‌ನಿಂದಾಗಿ ಮನೆ ಖಾಲಿ ಮಾಡಿಕೊಂಡು ಮೂವರು ಊರಿಗೆ ತೆರಳಿದ್ದರು. ಜೈಹಿಂದ್‌ ಹಾಗೂ ಆರೋಪಿಗಳು ಆ.2ರಂದು ನಗರಕ್ಕೆ ವಾಪಸ್‌ ಆಗಿದ್ದರು. ಉಳಿದುಕೊಳ್ಳಲು ಮನೆ ಇಲ್ಲದ ಕಾರಣ ಜೈಹಿಂದ್‌ ತನ್ನ ಸ್ನೇಹಿತನ ಶೆಡ್‌ವೊಂದರಲ್ಲಿ ಉಳಿದುಕೊಳ್ಳಲು ಎಲ್ಲರಿಗೂ ವ್ಯವಸ್ಥೆ ಮಾಡಿದ್ದ.

ರಾಜಸ್ಥಾನದ ಟೈಲ್ಸ್‌ ಉದ್ಯಮಿ ಗುಂಡಿಕ್ಕಿ ಕೊಂದರು

ಭಾನುವಾರ ಕುಡಿದ ಅಮಲಿನಲ್ಲಿ ಜೈಹಿಂದ್‌ ಹಾಗೂ ಆರೋಪಿಗಳ ನಡುವೆ ಜಗಳವಾಗಿದೆ. ಈ ವೇಳೆ ಜೈಹಿಂದ್‌ ಇದು ನನ್ನ ಸ್ನೇಹಿತನ ರೂಮ್‌, ನೀವು ಇಲ್ಲಿಂದ ಹೊರಡಿ ಎಂದು ಸೂಚಿಸಿದ್ದಾನೆ. ರಾತ್ರಿ ಎಂಟು ಗಂಟೆಯಾಗಿದ್ದು, ನಾಳೆ ಹೊರಡುವುದಾಗಿ ಆರೋಪಿಗಳು ಹೇಳಿದ್ದಾರೆ. ಇದರಿಂದ ಸುಮ್ಮನಾಗದ ಜೈಹಿಂದ್‌ ರಾಡ್‌ನಿಂದ ಸಂಜಯ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಇದೇ ರಾಡ್‌ ಕಸಿದು ಸಂಜಯ್‌, ಜೈಹಿಂದ್‌ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಜೈಹಿಂದ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಯಾರಿಗೂ ಅನುಮಾನಬಾರದೆಂಬ ಕಾರಣಕ್ಕೆ ಆರೋಪಿಗಳು ಶೆಡ್‌ ಸಮೀಪ ಇದ್ದ ರಾಯಸಂದ್ರ ಕೆರೆಗೆ ಶವ ಎಸೆದಿದ್ದರು ಎಂದು ಪೊಲೀಸರು ತಿಳಿಸಿದರು.

ದೂರು ನೀಡಲು ಬಂದು ಸಿಕ್ಕಿ ಬಿದ್ರು

ಕೃತ್ಯ ಎಸಗಿದ ಮರುದಿನ ಆರೋಪಿಗಳು ಠಾಣೆಗೆ ಬಂದು ಸ್ನೇಹಿತನ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಅಷ್ಟೊತ್ತಿಗಾಗಲೇ ರಾಯಸಂದ್ರ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ದೂರು ನೀಡಲು ಬಂದಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.