ಬೆಂಗಳೂರು(ಆ.06): ಸಾಲ ವಸೂಲಿಗೆ ಸಹಾಯ ಮಾಡುವುದಾಗಿ ಕ್ರೈಂ ರಿಪೋರ್ಟರ್‌ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ವಂಚಿಸಿದ್ದ ಇಬ್ಬರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತ್ಯಾಗರಾಜನಗರದ ಶಶಿ ಹಾಗೂ ಶ್ರೀನಗರ ಭವಾನಿ ಬಂಧಿತನಾಗಿದ್ದು, ಆರೋಪಿಗಳಿಂದ 50 ಸಾವಿರ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಯಲ್ಲೇ ಬೃಂದಾವನ ನಗರದ ರುಕ್ಮಿಣಿ ಎಂಬುವರಿಗೆ ಆರೋಪಿಗಳು ವಂಚಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ರುಕ್ಮಿಣಿ ಅವರು ಮನೆ ಮಾರಾಟ ಮಾಡಿದ್ದ 25 ಲಕ್ಷವನ್ನು ತಮ್ಮ ಪರಿಚಯಸ್ಥರಿಗೆ ಸಾಲವಾಗಿ ಕೊಟ್ಟಿದ್ದರು. ಆದರೆ ಸಕಾಲಕ್ಕೆ ಅವರು ಸಾಲ ಮರಳಿಸದ ಕಾರಣಕ್ಕೆ ವಿವಾದವಾಗಿತ್ತು. ಆಗ ರುಕ್ಮಿಣಿ ಅವರ ಮನೆ ಸಮೀಪ ನೆಲೆಸಿದ್ದ ಭವಾನಿ, ‘ನಾನು ಕ್ರೈಂ ರಿಪೋರ್ಟರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಪೊಲೀಸರ ಪರಿಚಯವಿದೆ. ನೀವು ಕೊಟ್ಟಿರುವ ಸಾಲವನ್ನು ವಸೂಲಿ ಮಾಡಿಕೊಡುತ್ತೇನೆ. ಆದರೆ ಇದಕ್ಕೆ 5 ಲಕ್ಷ ಹಣ ಕೊಡಬೇಕಾಗುತ್ತದೆ ಎಂದಿದ್ದಳು. ಈ ಮಾತು ನಂಬಿದ ರುಕ್ಮಿಣಿ ಅವರು, ತಮ್ಮ ಸೊಸೆಯ ಒಡವೆಗಳನ್ನು ಅಡಮಾನ ಮಾಡಿ 2 ಲಕ್ಷ ಕೊಟ್ಟಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಬೆಂಗಳೂರು: ಗ್ರೋಸರಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದ ಯುವತಿಗೆ ಭಾರೀ ಮೋಸ!

ಈ ಹಣ ಪಡೆದ ಬಳಿಕ ಭವಾನಿ, ಜಯನಗರದ ಸೌತ್‌ ಬ್ಲಾಕ್‌ನಲ್ಲಿರುವ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಗೆ ರುಕ್ಮಿಣಿ ಅವರನ್ನು ಪೊಲೀಸರ ಭೇಟಿಯಾಗಿಸುವ ನೆಪದಲ್ಲಿ ಕರೆ ತಂದಿದ್ದಳು. ಆಗ ಡಿಸಿಪಿ ಕಚೇರಿ ಬಳಿ ಶಶಿ ಎಂಬಾತನನ್ನು ಕ್ರೈಂ ಪೊಲೀಸ್‌ ಎಂದು ಪರಿಚಯಿಸಿ, ಇವರು ಡಿಸಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ನಿಮ್ಮ ಸಾಲದ ವಿಷಯ ತಿಳಿಸಿದ್ದೇನೆ. ಇನ್ನು ಹದಿನೈದು ದಿನಗಳಲ್ಲಿ ಸಾಲ ವಸೂಲಿಯಾಗಲಿದೆ ಎಂದಿದ್ದಳು. ಆದರೆ ಹಣ ಸಂದಾಯವಾದ ಬಳಿಕ ಭವಾನಿ ವರ್ತನೆ ಬದಲಾಯಿತು.

ಹಣದ ವಿಚಾರ ಪ್ರಸ್ತಾಪಿಸಿದರೆ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಇದರಿಂದ ಅನುಮಾನಗೊಂಡ ರುಕ್ಮಿಣಿ, ಹಣ ಮರಳಿಸುವಂತೆ ಭವಾನಿಗೆ ಒತ್ತಾಯಿಸಿದ್ದಾರೆ. ಆಗ ನಾವು ಹಣ ಕೊಡುವುದಿಲ್ಲ. ಏನಾದರೂ ಮಾಡಿಕೋ. ಪೊಲೀಸರಿಗೆ ದೂರು ಕೊಟ್ಟರೇ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಆಗ ರುಕ್ಮಿಣಿ, ಡಿಸಿಪಿ ಕಚೇರಿಗೆ ಶಶಿಯನ್ನು ಭೇಟಿಯಾಗಲು ಬಂದಿದ್ದರು. ಆಗ ಅಲ್ಲಿದ್ದ ಪೊಲೀಸರನ್ನು ವಿಚಾರಿಸಿದಾಗ ಶಶಿ ಎಂಬ ಹೆಸರಿನ ಸಿಬ್ಬಂದಿ ಇಲ್ಲವೆಂಬುದು ಗೊತ್ತಾಗಿದೆ. ಕೊನೆಗೆ ವಿಷಯ ಡಿಸಿಪಿ ಅವರ ಗಮನಕ್ಕೆ ಬಂದಿದೆ. ಡಿಸಿಪಿ ಕಚೇರಿ ಬಳಿಯಲ್ಲೇ ವಂಚನೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಯನಗರ ಠಾಣೆ ಪೊಲೀಸರು, ಸಂತ್ರಸ್ತೆ ದೂರಿನ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸುದ್ದಿವಾಹಿನಿ ಹೆಸರಿನಲ್ಲೂ ವಂಚನೆ

ಸ್ಥಳೀಯ ವಾರ ಪತ್ರಿಕೆಯಲ್ಲಿ ವರದಿಗಾರಳಾಗಿದ್ದೆ ಎಂದು ವಿಚಾರಣೆ ವೇಳೆ ಭವಾನಿ ಹೇಳಿದ್ದಾಳೆ. ಆದರೆ ಆ ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿದೆ. ಅಲ್ಲದೆ, ಕನ್ನಡದ ಪ್ರಮುಖ ಖಾಸಗಿ ಸುದ್ದಿವಾಹಿನಿ ಹೆಸರಿನಲ್ಲೂ ಸಹ ಆರೋಪಿಗಳು ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.