ಬೆಂಗಳೂರು(ಡಿ.23): ವಿದೇಶಿ ಅಂಚೆ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳು ಕೇಂದ್ರ ಮಾದಕ ನಿಯಂತ್ರಣ ದಳ (ಎನ್‌ಸಿಬಿ) ಬಲೆಗೆ ಬಿದ್ದಿದ್ದಾರೆ.

ಕೀನ್ಯಾ ದೇಶದ ರಾಮಲಾ ಶೇಡಫಾ (30) ಮತ್ತು ಇಮ್ಯಾನ್ಯುಯಲ್‌ ಮೈಕೆಲ್‌ ಬಂಧಿತರು. ಆರೋ​ಪಿ​ಗ​ಳಿಂದ .55 ಲಕ್ಷ ಮೌಲ್ಯ​ದ 3000 ಎಂಡಿ​ಎಂಎ ಮಾತ್ರೆ​ಗಳು, 240 ಗ್ರಾಂ ಕೊಕೇ​ನ್‌ ಜಪ್ತಿ ಮಾಡ​ಲಾ​ಗಿ​ದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿ.17ರಂದು ಚಾಮ​ರಾ​ಜ​ಪೇ​ಟೆ​ಯ​ಲ್ಲಿ​ರುವ ವಿದೇಶಿ ಅಂಚೆ ಕಚೇ​ರಿಗೆ ನೆದ​ರ್‌​ಲ್ಯಾಂಡ್‌ ಮತ್ತು ಇಥಿ​ಯೋ​ಪಿ​ಯಾ​ದಿಂದ ಎರಡು ಪಾರ್ಸೆ​ಲ್‌​ಗಳು ಬಂದಿ​ದ್ದ​ವು. ಈ ಪೈಕಿ ಒಂದು ಪಾರ್ಸೆ​ಲ್‌​ನ ಗಾತ್ರ ಮತ್ತು ತೂಕ​ದಲ್ಲಿ ಅನು​ಮಾ​ನ​ಗೊಂಡು ಪರಿ​ಶೀ​ಲಿ​ಸಿ​ದಾಗ ಮಾದಕ ವಸ್ತು ಇರು​ವುದು ಪತ್ತೆ​ಯಾ​ಗಿದ್ದು, ಅದನ್ನು ತೆರೆದು ನೋಡಿ​ದಾಗ ಬಟ್ಟೆ​ಗಳಲ್ಲಿ ಸುತ್ತಿ ಎಂಡಿಎಂ ಮಾತ್ರೆ​ಗ​ಳನ್ನು ಇಡ​ಲಾ​ಗಿತ್ತು. ಇದೇ ವೇಳೆ ಇಥಿ​ಯೋ​ಪಿ​ಯಾ​ದಿಂದ ಖಾಕಿ ಬಣ್ಣದ ಪಾರ್ಸೆ​ಲ್‌ನ ಒಳ​ ಭಾ​ಗ​ದಲ್ಲಿ ಕೊಕೇನ್‌ ಪುಡಿ​ಯನ್ನು ಪ್ಲಾಸ್ಟಿಕ್‌ ಕವ​ರ್‌​ನಲ್ಲಿ ತುಂಬಿ ಮೇಲ್ಭಾ​ಗ​ದಲ್ಲಿ ಬೇರೆ ಬೇರೆ ವಸ್ತು​ಗ​ಳನ್ನು ಇಟ್ಟಿ​ದ್ದರು.

ಟ್ರಾವೆಲ್ಸ್‌ ಏಜೆನ್ಸಿ ಸೋಗಲ್ಲಿ ಡ್ರಗ್ಸ್‌ ಮಾಫಿಯಾ: 32 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ಖಚಿತ ಮಾಹಿತಿ ಮೇರೆಗೆ ಡಿ.18ರಂದು ಬೆಂಗ​ಳೂ​ರು ಎನ್‌​ಸಿ​ಬಿ ವಲಯ ನಿರ್ದೇ​ಶಕ ಅಮಿತ್‌ ಗುವಾಟೆ ನೇತೃ​ತ್ವದ ತಂಡ ಚಾಮ​ರಾ​ಜ​ಪೇಟೆ ವಿದೇಶಿ ಅಂಚೆ ಕಚೇರಿ ಬಳಿ ಆರೋ​ಪಿ​ಗಳ ಆಗಮನಕ್ಕಾಗಿ ಕಾಯು​ತ್ತಿ​ತ್ತು. ಇದೇ ವೇಳೆ ಇಬ್ಬರು ಆರೋ​ಪಿ​ಗಳು ಪಾರ್ಸೆಲ್‌ ಕೊಂಡೊಯ್ಯಲು ಅಂಚೆ ಕಚೇರಿ ಬಳಿ ಬಂದಿದ್ದರು. ಆರೋಪಿಗಳನ್ನು ಬಂಧಿಸಲು ಬಂದ ಅಧಿಕಾರಿಗಳನ್ನು ತಳ್ಳಿ ಕಾಲ್ಕಿತ್ತಿದ್ದರು. ಸುಮಾರು 1 ಕಿ.ಮೀ. ಆರೋಪಿಗಳನ್ನು ಬೆನ್ನಟ್ಟಿತಂಡ ಬಂಧಿಸಿದೆ. ಘಟನೆಯಲ್ಲಿ ಅಧಿಕಾರಿ ಸುನೀಲ್‌ ಪರೀವಾ ಗಾಯ​ಗೊಂಡು ಆಸ್ಪ​ತ್ರೆ​ಯಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ದ್ದಾರೆ ಎಂದು ಎನ್‌​ಸಿಬಿ ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾ​ರೆ.

ಆರೋ​ಪಿ​ಗಳ ವಿಚಾ​ರಣೆ ಸಂದ​ರ್ಭ​ದಲ್ಲಿ ಪಾಸ್‌​ಪೋರ್ಟ್‌ ಮತ್ತು ವೀಸಾ ವಶಕ್ಕೆ ಪಡೆ​ಯ​ಲಾ​ಗಿದ್ದು, ವಿದ್ಯಾರ್ಥಿ ಮತ್ತು ಪ್ರವಾಸಿ ವೀಸಾ​ದಲ್ಲಿ ಬೆಂಗ​ಳೂ​ರಿಗೆ ಬಂದಿದ್ದರು. ಆದರೆ, ಅವು​ಗಳು ನಕಲಿ ಎಂಬುದು ಗೊತ್ತಾ​ಗಿದೆ. ಹೊಸ ವರ್ಷಾ​ಚ​ರಣೆ ಸಂದ​ರ್ಭ​ದಲ್ಲಿ ಐಷಾ​ರಾಮಿ ಪಾರ್ಟಿ ಹಾಗೂ ಹೋಟೆ​ಲ್‌​ಗ​ಳಲ್ಲಿ ಡ್ರಗ್‌ ಮಾರಾಟ ಮಾಡಲು ಮುಂದಾಗಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.