ಬಂಧಿತ ಆರೋಪಿಗಳಿಂದ ಬರೋಬ್ಬರಿ 82.57 ಲಕ್ಷ ರು. ಮೌಲ್ಯದ 608 ಗ್ರಾಂ ತೂಕದ 1,281 ಎಕ್ಸ್‌ಸ್ಟೇಸಿ ಮಾತ್ರೆಗಳು ಹಾಗೂ 463 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್‌ ಸೇರಿದಂತೆ ಒಟ್ಟು 1.71 ಗ್ರಾಂ ತೂಕದ ಮಾದಕ ವಸ್ತುಗಳು ಜಪ್ತಿ. 

ಬೆಂಗಳೂರು(ಸೆ.02): ವಾಟ್ಸಾಪ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಮೂಲದ ಡ್ರಗ್ಸ್‌ ಪೆಡ್ಲರ್‌ಗಳನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಲಿಮಂಗಲ ನಿವಾಸಿ ಇಮ್ಯಾನುವೆಲ್‌ ಆಫಾಮ್‌(43) ಮತ್ತು ಬಿಂಗಿಪುರದ ಎಸ್‌ಎಲ್‌ವಿ ಲೇಔಟ್‌ ನಿವಾಸಿ ಉಚ್ಚೇನ್ನಾ ಲಿವಿನಸ್‌(36) ಬಂಧಿತರು. ಆರೋಪಿಗಳಿಂದ ಬರೋಬ್ಬರಿ 82.57 ಲಕ್ಷ ರು. ಮೌಲ್ಯದ 608 ಗ್ರಾಂ ತೂಕದ 1,281 ಎಕ್ಸ್‌ಸ್ಟೇಸಿ ಮಾತ್ರೆಗಳು ಹಾಗೂ 463 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್‌ ಸೇರಿದಂತೆ ಒಟ್ಟು 1.71 ಗ್ರಾಂ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಬೇಗೂರು ಕೊಪ್ಪ ರಸ್ತೆ ಬಯಲು ಬಸವಣ್ಣ ಸರ್ಕಲ್‌ ಬಳಿಯ ರಾಘವೇಂದ್ರ ವೇ ಬ್ರಿಡ್ಜ್‌ ಬಳಿ ಇಬ್ಬರು ವಿದೇಶಿಗರು ಮಾದಕವಸ್ತು ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹುಳಿಮಾವು ಠಾಣೆ ಇನ್ಸ್‌ಪೆಕ್ಟರ್‌ ಸಂದೀಪ್‌ ಹಾಗೂ ಪಿಎಸ್‌ಐ ಎಸ್‌.ಮಹೇಶ್‌ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ‘ಡ್ರಗ್ಸ್‌ ಹಬ್‌’ ಆಗಲು ಬಿಡುವುದಿಲ್ಲ: ಗೃಹ ಸಚಿವ ಪರಮೇಶ್ವರ್‌

ಇಬ್ಬರು ಆರೋಪಿಗಳು ವ್ಯವಹಾರದ ವೀಸಾ ಪಡೆದು ಒಂದು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದಾರೆ. ಕಳೆದ ಆರು ತಿಂಗಳಿಂದ ನಗರದಲ್ಲಿ ನೆಲೆಸಿದ್ದರು. ನೈಜೀರಿಯಾದಿಂದ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿ ಸಂಗ್ರಹಿಸಿಕೊಂಡು ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ರಸ್ತೆ, ಬನ್ನೇರುಘಟ್ಟರಸ್ತೆ ಸೇರಿದಂತೆ ನಗರದ ವಿವಿಧೆಡೆ ಕಾಲೇಜು ವಿದ್ಯಾರ್ಥಿಗಳು, ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ವಾಟ್ಸಾಪ್‌ನಲ್ಲಿ ವ್ಯವಹಾರ:

ಆರೋಪಿಗಳು ವಾಟ್ಸಾಪ್‌ನಲ್ಲಿ ಮಾದಕವಸ್ತು ಮಾರಾಟ ವ್ಯವಹಾರ ನಡೆಸುತ್ತಿದ್ದರು. ವಾಟ್ಸಾಪ್‌ನಲ್ಲಿ ಸಂಪರ್ಕಿಸುವ ಕಾಲೇಜು ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಮಾದಕ ವ್ಯಸನಿಗಳೇ ಇವರ ಗ್ರಾಹಕರಾಗಿದ್ದರು. ಗ್ರಾಹಕರಿಂದ ಆನ್‌ಲೈನ್‌ನಲ್ಲಿ ಹಣ ಪಡೆದು ಬಳಿಕ ಮಾದಕವಸ್ತು ತಲುಪಿಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಚಾಕೊಲೇಟ್ ಪ್ರಿಯರೇ ಎಚ್ಚರ..ಎಚ್ಚರ..!: ಕರಾವಳಿ ಚಾಕೋಲೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!

ಡ್ರಗ್ಸ್‌ ಎಸೆದು ಪರಾರಿ:

ಆರೋಪಿಗಳು ಗ್ರಾಹಕರಿಗೆ ನೇರವಾಗಿ ಮಾದಕವಸ್ತು ನೀಡುತ್ತಿರಲಿಲ್ಲ. ಗ್ರಾಹಕರಿಂದ ತಮ್ಮ ಖಾತೆಗೆ ಹಣ ವರ್ಗಾವಣೆಯಾದ ಬಳಿಕ ತಾವಿರುವ ಸ್ಥಳದ ಬಗ್ಗೆ ವಾಟ್ಸಾಪ್‌ನಲ್ಲಿ ಲೋಕೇಶನ್‌ ಶೇರ್‌ ಮಾಡುತ್ತಿದ್ದರು. ಗ್ರಾಹಕರು ನಿಗದಿತ ಸ್ಥಳಕ್ಕೆ ಬಂದ ಬಳಿಕ ಜನಸಂಚಾರ ಕಡಿಮೆ ಇರುವ ಅಥವಾ ನಿರ್ಜನಪ್ರದೇಶದಲ್ಲಿ ಮಾದಕವಸ್ತುವಿನ ಪೊಟ್ಟಣ ಎಸೆದು ಮುಂದೆ ಹೋಗುತ್ತಿದ್ದರು. ಬಳಿಕ ಗ್ರಾಹಕರು ಆ ಪೊಟ್ಟಣ ಎತ್ತಿಕೊಂಡು ತೆರಳುತ್ತಿದ್ದರು.

ವಿದ್ಯಾರ್ಥಿಗಳ ವಿಚಾರಣೆ ವೇಳೆ ವಿದೇಶಿಗನ ಸುಳಿವು

ಇತ್ತೀಚೆಗೆ ಮಾದಕವಸ್ತು ಸೇವನೆ ಆರೋಪದಡಿ ಇಬ್ಬರು ಕೇರಳ ಮೂಲದ ವಿದ್ಯಾರ್ಥಿಗಳನ್ನು ಹುಳಿಮಾವು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವಿದ್ಯಾರ್ಥಿಗಳಿಗೆ ಮಾದಕವಸ್ತು ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆ ವಿಚಾರಣೆ ಮಾಡಿದಾಗ ನೈಜೀರಿಯಾ ಮೂಲದ ಈ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು, ಕೊನೆಗೆ ಮಾಲು ಸಹಿತ ಆರೋಪಿಗಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.