ಗಾಂಜಾ ಸಾಗಾಟಕ್ಕೆಂದೇ ಐಷಾರಾಮಿ ಕಾರು ಖರೀದಿಸಿದ್ದ ಖದೀಮರು..!
ಆಂಧ್ರದಿಂದ ನಗರಕ್ಕೆ ಗಾಂಜಾ ತರುತ್ತಿದ್ದ ಕೇರಳಿಗರು| ಗಾಂಜಾ ಸಾಗಾಟಾಕ್ಕೆ 12 ಲಕ್ಷ ಬೆಲೆ ಬಾಳುವ ಕಾರು ಖರೀದಿಸಿದ್ದ ಆರೋಪಿಗಳು| ಫ್ಲ್ಯಾಟ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಬಂಧಿತರು|
ಬೆಂಗಳೂರು(ಡಿ.23): ಮಾದಕ ವಸ್ತು ಪೂರೈಕೆ ಮಾಡಲೆಂದೇ ಐಷಾರಾಮಿ ಕಾರು ಖರೀದಿ ಮಾಡಿದ್ದ ಇಬ್ಬರು ಅಂತಾರಾಜ್ಯ ಪೆಡ್ಲರ್‌ಗಳು ಜೆ.ಸಿ.ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೇರಳ ಮೂಲದ ಸನ್ನದ್ (24) ಮತ್ತು ಮೊಹಮ್ಮದ್ ಬಿಲಾಲ್ (24) ಬಂಧಿತರು. ಆರೋಪಿಗಳಿಂದ 10 ಕೆ.ಜಿ.ಗಾಂಜಾ ಮತ್ತು 12 ಲಕ್ಷ ಬೆಲೆ ಬಾಳುವ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಮೊಹಮ್ಮದ್ ಬಿಲಾಲ್ ಎಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದರೆ, ಸನ್ನದ್ ಪಿಯುಸಿ ವ್ಯಾಸಂಗ ಮಾಡಿದ್ದ. ಏಳೆಂಟು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳು ಆಂಧ್ರಪ್ರದೇಶದಿಂದ ಗಾಂಜಾ ಖರೀದಿ ಮಾಡಿ ನಗರಕ್ಕೆ ಕಾರಿನಲ್ಲಿ ತರುತ್ತಿದ್ದರು. ನಗರದಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್, ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದರು. ಕೇರಳದಿಂದ ಬರುತ್ತಿದ್ದ ಆರೋಪಿಗಳು ನಗರದ ಹೊರ ವಲಯದ ಚಂದಾಪುರದಲ್ಲಿ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟನ್ನು ಬಾಡಿಗೆಗೆ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು. ದಂಧೆಯಲ್ಲಿ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು.
ವಿದೇಶಿ ಪೆಡ್ಲರ್‌ಗಳನ್ನು 1 ಕಿ.ಮೀ. ಬೆನ್ನಟ್ಟಿ ಹಿಡಿದರು..!
ಆರೋಪಿಗಳು ಜೆ.ಸಿ.ನಗರದ ಯುಟಿಸಿ ಕಾಲೇಜು ಸಮೀಪ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ನಾಗರಾಜ್ ಮತ್ತು ವಿನೋದ್ ಜಿರಗಾಳೆ ನೇತೃತ್ವದ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಐಷಾರಾಮಿ ಕಾರು:
ಆರೋಪಿಗಳು ಅನುಮಾನ ಬರದಿರಲಿ ಎಂದು 12 ಲಕ್ಷ ಕಾರೊಂದನ್ನು ಖರೀದಿಸಿದ್ದರು. ಆರೋಪಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸಕ್ಕಿರುವುದಾಗಿ ತಮ್ಮ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದರು. ಮೊದಲ ಬಾರಿಗೆ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.