ದುಬೈನಿಂದ ಭಾರತಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದು ಗಲಾಟೆ, ತಾಯ್ನಾಡಿಗೆ ಕಾಲಿಟ್ಟ ತಕ್ಷಣ ಕೈಗೆ ಕೋಳ!
ದುಬೈ-ಮುಂಬೈ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕುಡಿದು ಗಲಾಟೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಪ್ರಯಾಣಿಕರನ್ನು ಮುಂಬೈನ ಸಹರ್ ಪೊಲೀಸರು ಬಂಧಿಸಿದ್ದಾರೆ.
ಮುಂಬೈ (ಮಾ.23): ದುಬೈ-ಮುಂಬೈ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕುಡಿದು ಗಲಾಟೆ ಮಾಡಿದ ಪ್ರಕರಣ ಸಂಬಂಧ ಇಬ್ಬರು ಪ್ರಯಾಣಿಕರನ್ನು ಮುಂಬೈನ ಸಹರ್ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಈ ಇಬ್ಬರು ಪ್ರಯಾಣಿಕರು ವಿಮಾನ ಹಾರಾಟದಲ್ಲಿದ್ದ ವೇಳೆ ಗಲಾಟೆ ಸೃಷ್ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರಿಗೂ ಕಿರಿಕಿರಿಯುಂಟು ಮಾಡಿದ್ದರು.
ಏರ್‌ಲೈನ್ ಸಿಬ್ಬಂದಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ ಸಹರ್ ಪೊಲೀಸರು, ಮುಂಬೈನ ಪಾಲ್ಘರ್ ಜಿಲ್ಲೆಯ ಜಾನ್ ಜಿ ಡಿಸೋಜಾ (49) ಮತ್ತು ಕೊಲ್ಲಾಪುರದ ಮಾನ್ಬೆಟ್‌ನ ದತ್ತಾತ್ರೇಯ ಬಾಪರ್ಡೇಕರ್ (47) ಎಂಬಿಬ್ಬರನ್ನು ಬಂಧಿಸಲಾಯ್ತು ನಂತರ ನ್ಯಾಯಾಲಯದಿಂದ ಜಾಮೀನು ನೀಡಲಾಯಿತು. ಇಬ್ಬರೂ ದುಬೈನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಅವರು ಭಾರತಕ್ಕೆ ಮರಳುತ್ತಿದ್ದರು ಎಂದು ತಿಳಿದುಬಂದಿದೆ. ಮಾತ್ರವಲ್ಲ ಇವರಿಬ್ಬರೂ ಕೂಡ ಹಾರಾಡುತ್ತಿದ್ದ ವಿಮಾನದಲ್ಲೇ ಸುಂಕ ರಹಿತ ಅಂಗಡಿಯಿಂದ ತಂದಿದ್ದ ಮದ್ಯ ಸೇವಿಸಿ ಸಂಭ್ರಮಿಸಲು ಆರಂಭಿಸಿದರು ಎಂದು ಸಹರ್ ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ವ್ಯಕ್ತಿಗಳ ಗದ್ದಲವನ್ನು ಸಹ ಪ್ರಯಾಣಿಕರು ವಿರೋಧಿಸಿದಾಗ ಪ್ರತಿರೋಧ ತೋರಿದರು. ಈ ವೇಳೆ ವಿಮಾನ ಸಿಬ್ಬಂದಿ ಮಧ್ಯಪ್ರವೇಶಿಸಿ ತಮ್ಮ ಬಾಟಲಿಗಳನ್ನು ತೆಗೆದುಕೊಂಡು ಹೋದಾಗ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ) ಮತ್ತು ವಿಮಾನ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ವರದಿಗಳ ಪ್ರಕಾರ ಈ ವರ್ಷ ಇದು ವಿಮಾನದಲ್ಲಿ ನಡೆದ ಏಳನೇ ಘಟನೆಯಾಗಿದ್ದು, ಪ್ರಯಾಣಿಕರ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮಾರ್ಚ್ 11 ರಂದು ಅಮೇರಿಕಾದ ನಿವಾಸಿ ರತ್ನಾಕರ್ ದ್ವಿವೇದಿ (37) ದ್ವಿ ಪೌರತ್ವವನ್ನು ಹೊಂದಿದ್ದು, ಲಂಡನ್-ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮತ್ತು ತುರ್ತು ನಿರ್ಗಮನವನ್ನು ತೆರೆಯಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಮಾರ್ಚ್ 14 ರಂದು ರೂ 25,000 ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರು ಯುಎಸ್‌ಗೆ ಪ್ರಯಾಣ ಬೆಳೆಸಿದರು.
ಜನವರಿಯಲ್ಲಿ ದೆಹಲಿಯಿಂದ ಪಾಟ್ನಾ ಇಂಡಿಗೋ ವಿಮಾನದಲ್ಲಿ ಮದ್ಯ ಸೇವಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿತ್ತು. ಆದಾಗ್ಯೂ, ವಿಮಾನದಲ್ಲಿ ಯಾವುದೇ ವಾಗ್ವಾದ ನಡೆದಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು, ಇಬ್ಬರು ಪ್ರಯಾಣಿಕರು ಮದ್ಯವನ್ನು ಸಾಗಿಸುತ್ತಿದ್ದಾರೆ ಎಂದು ಇಂಡಿಗೋ ಎಟಿಸಿಗೆ ಮಾಹಿತಿ ನೀಡಿತ್ತು. ವಿಮಾನ ಇಳಿದ ನಂತರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಅಧಿಕೃತ ದೂರು ಸಲ್ಲಿಸಿದೆ.
ಎಣ್ಮೆ ಬಾಟಲಿಗೆ 10 ರೂ. ಅಧಿಕ ದರ ವಿಧಿಸಿದ್ದಕ್ಕೆ ಜೈಲು, ಮಾಲೀಕನಿಗೆ 75 ಸಾವಿರ ದಂಡ!
ಕಳೆದ ಡಿಸೆಂಬರ್ 2022 ರಲ್ಲಿ, ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ವಿಮಾನದೊಳಗೆ ಕೆಲವು ಜನರು ಜಗಳವಾಡುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು. ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಜಗಳ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲಿ ಓರ್ವ ವ್ಯಕ್ತಿಯನ್ನು ಕೆಲವು ಸಹ-ಪ್ರಯಾಣಿಕರು ಹೊಡೆದು ಕಪಾಳಮೋಕ್ಷ ಮಾಡುವುದು ಕಂಡುಬಂದಿತ್ತು.
ಬಿಎಂಟಿಸಿ ಬಸ್ ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್!
ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಸ್ತಾನ್‌ಬುಲ್‌ನಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಗಗನಸಖಿ ನಡುವೆ ಇದೇ ರೀತಿಯ ಮಧ್ಯದ ಗಲಾಟೆ ನಡೆದಿತ್ತು. ವಿಮಾನದಲ್ಲಿ ಊಟದ ಆಯ್ಕೆ ವಿಚಾರದಲ್ಲಿ ಇಬ್ಬರೂ ಜಗಳವಾಡುತ್ತಿದ್ದರು.