ಬೆಂಗಳೂರು: ತಿರುಪತಿ ದರ್ಶನ ಮಾಡಿ ಮರಳಿ ಬರುವಾಗ ಮರಕ್ಕೆ ಡಿಕ್ಕಿ: ಇಬ್ಬರು ಸಾವು
ತಿರುಪತಿಯಿಂದ ಕಾರಿನಲ್ಲಿ ವಾಪಾಸಾಗುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಮಾ.6) : ತಿರುಪತಿಯಿಂದ ಕಾರಿನಲ್ಲಿ ವಾಪಾಸಾಗುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಕಲ್ಲಸಂದ್ರ(Chikkakallasandra) ನಿವಾಸಿ ಕೃಷ್ಣಮೂರ್ತಿ (60) ಮತ್ತು ಬಸವನಗುಡಿ(Basavanagudi) ನಿವಾಸಿ ಪ್ರಕಾಶ್ ಹೆಬ್ಬಾರ್ (58) ಮೃತರು. ಚಾಲಕ ವೆಂಕಟೇಶ್ ಮತ್ತು ಸಮೀರ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಭಾನುವಾರ ಮುಂಜಾನೆ 4.30ರ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್ ರಿಂಗ್ ರಸ್ತೆಯ 5ನೇ ಅಡ್ಡರಸ್ತೆ ಬಳಿ ಈ ಅಪಘಾತ ಸಂಭವಿಸಿದೆ.
ಕರ್ತವ್ಯನಿರತ ಟ್ರಾಫಿಕ್ ಎಎಸ್‌ಐಗೆ ಆಟೋ ಡಿಕ್ಕಿ: ಮೆದುಳು ನಿಷ್ಟ್ರಿಯಗೊಂಡು ಸಾವು
ನಾಲ್ವರು ಸ್ನೇಹಿತರು ಶನಿವಾರ ಕಾರಿನಲ್ಲಿ ತಿರುಪತಿಗೆ ತೆರಳಿ ಸಂಜೆ ದೇವರ ದರ್ಶನ ಮಾಡಿಕೊಂಡು ಭಾನುವಾರ ರಾತ್ರಿ ಬೆಂಗಳೂರಿನತ್ತ ಹೊರಟಿದ್ದರು. ವೆಂಕಟೇಶ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಮುಂಜಾನೆ ಎಚ್‌ಎಸ್‌ಆರ್ ಲೇಔಟ್(HSR Layout)ನ ರಿಂಗ್ ರಸ್ತೆಯಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಎಡ ಭಾಗದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರರಕ್ತಸ್ರಾವವಾಗಿ ಆಸ್ಪತ್ರೆ ಸೇರುವ ಮುನ್ನವೇ ಕೃಷ್ಣಮೂರ್ತಿ ಮತ್ತು ಪ್ರಕಾಶ್ ಹೆಬ್ಬಾರ್ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅತಿಯಾದ ವೇಗ ಅಥವಾ ನಿದ್ದೆಯ ಮಂಪರಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿರುವ ಸಾಧ್ಯತೆಯಿದೆ. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೇಗವಾಗಿ ರಸ್ತೆಬದಿಯ ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಬಲಿ
ಬೆಂಗಳೂರು : ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರಕೆರೆ ನಿವಾಸಿ ಹಿತೇಶ್ (27) ಮೃತ ಸವಾರ. ಎಂಬಿಎ ಪದವೀಧರನಾದ ಹಿತೇಶ್ ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಶನಿವಾರ ತಡರಾತ್ರಿ 12.05ರ ಸುಮಾರಿಗೆ ಕನಕಪುರ ರಸ್ತೆ ಕಡೆಯಿಂದ ಸೋಮಪುರ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮಾರ್ಗ ಮಧ್ಯೆ ತುರಹಳ್ಳಿ ಅರಣ್ಯ ಪ್ರದೇಶದ ನೂರಡಿ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಹಿತೇಶ್ ತಲೆಗೆ ಗಂಭೀರ ಪೆಟ್ಟು ತೀವ್ರ ರಕ್ತಸ್ರಾವಾಗಿದೆ. ಕೂಡಲೇ ಸ್ಥಳೀಯರು ಗಾಯಾಳು ಹಿತೇಶ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ 2.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಎಸ್ಕಾರ್ಟ್ ಕಾರು ಗುದ್ದಿ ಬೈಕ್ ಸವಾರ ಸಾವು: ಮಾನವೀಯತೆಗೂ ಕಾರು ನಿಲ್ಲಿಸದ ಆರಗ ಜ್ಞಾನೇಂದ್ರ
ದ್ವಿಚಕ್ರ ವಾಹನವನ್ನು ಅತೀ ವೇಗದಿಂದ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಿತೇಶ್ ಹೆಲ್ಮೆಟ್ ಧರಿಸಿದ್ದರೂ ಡಿಕ್ಕಿಯ ರಭಸಕ್ಕೆ ಜಖಂ ಆಗಿ ತಲೆಗೆ ಗಂಭೀರ ಗಾಯವಾಗಿದೆ. ಮದ್ಯ ಸೇವಿಸಿರುವ ಬಗ್ಗೆ ತಿಳಿದು ಬಂದಿಲ್ಲ. ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.