ಬೆಂಗಳೂರು(ಅ.04): ಡಾಲರ್ಸ್‌ ಕಾಲೋನಿ ಸಮೀಪ ಕಾರಿನಲ್ಲಿ ಕುಳಿತು ಮಾದಕ ವಸ್ತು ಸೇವಿಸುವಾಗಲೇ ಇಬ್ಬರು ಉದ್ಯಮಿಗಳು ಸಂಜಯನಗರ ಠಾಣೆ ಪೊಲೀಸರ ಬಲೆಗೆ ಶನಿವಾರ ರಾತ್ರಿ ಬಿದ್ದಿದ್ದಾರೆ.

ಡಾಲರ್ಸ್‌ ಕಾಲೋನಿ ನಿವಾಸಿ ವರುಣ್‌ (36) ಹಾಗೂ ಶಾಂತಿನಗರದ ಡಬಲ್‌ ರೋಡ್‌ನ ವಿನೋದ್‌ (26) ಬಂಧಿತರಾಗಿದ್ದು, ಆರೋಪಿಗಳಿಂದ 120 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಡಾಲರ್ಸ್‌ ಕಾಲೋನಿಯಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ಆರೋಪಿಗಳು ಡ್ರಗ್ಸ್‌ ಸೇವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೀಲ್‌ ಬ್ಯುಸಿನೆಸ್‌ ನಡೆಸುವ ವರುಣ್‌, ತನ್ನ ಕುಟುಂಬದ ಜತೆ ಡಾಲರ್ಸ್‌ ಕಾಲೋನಿಯಲ್ಲಿ ನೆಲೆಸಿದ್ದಾನೆ. ಇನ್ನು ವಿನೋದ್‌ ತರಕಾರಿ ಸಗಟು ಉದ್ಯಮ ಹೊಂದಿದ್ದು, ಶಾಂತಿನಗರದ ಡಬಲ್‌ ರೋಡ್‌ ಬಳಿ ವಾಸವಾಗಿದ್ದಾನೆ. ಹಲವು ವರ್ಷಗಳಿಂದ ಈ ಇಬ್ಬರು ಸ್ನೇಹಿತರಾಗಿದ್ದು, ಗಾಂಜಾ ವ್ಯಸನಿಗಳಾಗಿದ್ದರು. ಇತ್ತೀಚೆಗೆ ಕೆಲವು ಪೇಜ್‌ ತ್ರಿ ಪಾರ್ಟಿಗಳಿಗೆ ಆರೋಪಿಗಳು ಗಾಂಜಾ ಪೂರೈಸಿರುವ ಮಾಹಿತಿ ಲಭಿಸಿದೆ. ಈ ನಿಟ್ಟಿನಲ್ಲೂ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್‌ ಲಿಂಕ್‌: ಘಾನಾ ಪ್ರಜೆ ಸಹಿತ ಪ್ರಮುಖ ಮೂವರು ಆರೋಪಿಗಳ ವಶ

ಡಾಲರ್ಸ್‌ ಕಾಲೋನಿಯ ಸ್ಟೆರ್ಲಿಂಗ್‌ ಅಪಾರ್ಟ್‌ಮೆಂಟ್‌ ಬಳಿ ವಿನೋದ್‌ ಹಾಗೂ ವರುಣ್‌ ಶುಕ್ರವಾರ ಕಾರಿನಲ್ಲಿ ಕುಳಿತು ಗಾಂಜಾ ಸೇವಿಸುತ್ತಿದ್ದರು. ಈ ವೇಳೆ ಕೂಗಾಟ ಮಾಡಿದ್ದಾರೆ. ಆಗ ಅನುಮಾನಗೊಂಡ ಸ್ಥಳೀಯರು, ಪೊಲೀಸರಿಗೆ ಯಾರೋ ಅಪರಿಚಿತರು ಕಾರಿನಲ್ಲಿ ಕುಳಿತು ಗಾಂಜಾ ಸೇವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು, ಆ ಇಬ್ಬರನ್ನು ವಶಕ್ಕೆ ಪಡೆದು ಠಾಣೆ ಕರೆತಂದು ವಿಚಾರಿಸಿದಾಗ ಮಾದಕ ವಸ್ತು ಜಾಲದ ಚರಿತ್ರೆ ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಟಿಯರ ಪ್ರಕರಣಕ್ಕೆ ನಂಟು?:

ಡಾಲರ್ಸ್‌ ಕಾಲೋನಿ ಬಳಿ ಗಾಂಜಾ ಸೇವಿಸುವಾಗ ಬಂಧಿತರಾಗಿರುವ ಇಬ್ಬರು ಉದ್ಯಮಿಗಳನ್ನು ಸಿಸಿಬಿ ಸಹ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ. ಪೇಜ್‌ ತ್ರಿ ಪಾರ್ಟಿಗಳಲ್ಲಿ ಈ ಇಬ್ಬರು ಕಾಣಿಸಿಕೊಂಡಿರುವ ಅನುಮಾನವಿದೆ. ಹೀಗಾಗಿ ಮಾದಕ ವಸ್ತು ಜಾಲದ ಸಂಬಂಧ ನಟಿ ರಾಗಿಣಿ ಹಾಗೂ ಸಂಜನಾ ಮತ್ತು ಅವರ ಸ್ನೇಹ ಬಳಗದ ಜತೆ ಆರೋಪಿಗಳಿಗೆ ಸ್ನೇಹವಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆ ಇಬ್ಬರ ಮೊಬೈಲ್‌ ಕರೆಗಳ ಬಗ್ಗೆ ವಿವರ ಪಡೆಯಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಡ್ರಗ್ಸ್‌ ಮಾರಾಟ ಕೇಸ್‌: ಆಫ್ರಿಕಾ ಪ್ರಜೆ ವಿಚಾರಣೆ

ಮಾದಕ ವಸ್ತು ಮಾರಾಟ ಜಾಲ ಸಂಬಂಧ ಆಫ್ರಿಕಾ ಮೂಲದ ಪ್ರಜೆಯೊಬ್ಬನ್ನು ಸಿಸಿಬಿ ಪೊಲೀಸರು ಶನಿವಾರ ವಿಚಾರಣೆಗೊಳಪಡಿಸಿದ್ದಾರೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸೇರಿದಂತೆ ಇತರೆÜ ಆರೋಪಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಶಂಕೆ ಮೇರೆಗೆ ಆಫ್ರಿಕಾ ಪ್ರಜೆಯನ್ನು ಪ್ರಶ್ನಿಸಲಾಗಿದೆ. ಆದರೆ ಕೃತ್ಯದಲ್ಲಿ ಆತನ ಪಾತ್ರದ ಬಗ್ಗೆ ಸ್ಪಷ್ಟಪುರಾವೆ ಲಭ್ಯವಾಗಿಲ್ಲ. ಹೀಗಾಗಿ ಆತನ ವಿಚಾರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.